Mobile Blast: ಮನಕಲಕುವ ಘಟನೆ: ರೆಡ್ಮಿ ಸ್ಮಾರ್ಟ್‌ಫೋನ್ ಸ್ಪೋಟಗೊಂಡು 8 ವರ್ಷದ ಬಾಲಕಿ ದುರ್ಮರಣ: ಎಚ್ಚರ ವಹಿಸಿ
91ಮೊಬೈಲ್ಸ್ ಮಾಡಿರುವ ವರದಿಯ ಪ್ರಕಾರ, ಈ ಘಟನೆ ಕೇರಳದ ತ್ರಿಶೂರ್‌ನಲ್ಲಿ ನಡೆದಿದೆ. ಇಲ್ಲಿನ ಪಟ್ಟಿಪರಂಬು ಮೂಲದ ಆದಿತ್ಯ ಶ್ರೀ ಎಂಬ ಬಾಲಕಿ ಮೊಬೈಲ್‌ನಲ್ಲಿ ವಿಡಿಯೋ ನೋಡುತ್ತಿರುವಾಗ ಮೊಬೈಲ್ ಫೋನ್ ಕೈಯಲ್ಲಿ ಸ್ಫೋಟಗೊಂಡಿದೆ.
ಇಂದು ಸ್ಮಾರ್ಟ್ಫೋನ್ಗಳನ್ನು ಬಳಕೆ ಮಾಡದೆ ಇರುವವರ ಸಂಖ್ಯೆ ತೀರಾ ಕಡಿಮೆ. ಬಜೆಟ್ ಬೆಲೆಗೆ ಆಕರ್ಷಕ ಮೊಬೈಲ್ಗಳು ಸಿಗುತ್ತಿರುವ ಕಾರಣ ಮಾರುಕಟ್ಟೆಯಲ್ಲಿ ಮೊಬೈಲ್ಗಳು ಎಗ್ಗಿಲ್ಲದೆ ಸೇಲ್ ಆಗುತ್ತದೆ. ಇದರ ಜೊತೆಗೆ ಕಳೆದ ಕೆಲವು ವರ್ಷಗಳಿಂದ ಸ್ಮಾರ್ಟ್ಫೋನ್ಗಳು ಸ್ಫೋಟಗೊಳ್ಳುವ (Mobile Blast) ಸಂಗತಿಗಳು ಕೂಡ ಹೆಚ್ಚುತ್ತಿದೆ. ಮೊಬೈಲ್ ಸ್ಪೋಟಗೊಂಡ ಸುದ್ದಿ ಇತ್ತೀಚಿನ ದಿನಗಳಲ್ಲಿ ವರದಿ ಆಗುತ್ತಲೇ ಇದೆ. ಇದರಿಂದ ಜೀವ ಹಾನಿ ಸಂಭವಿಸಿದ್ದೂ ಇದೆ. ಇತ್ತೀಚೆಗಷ್ಟೆ ಸ್ಯಾಮ್ಸಂಗ್ (Samsung), ಒನ್ಪ್ಲಸ್ ನಾರ್ಡ್, ಶವೋಮಿ 11 ಲೈಟ್ NE 5G ಸ್ಮಾರ್ಟ್ಫೋನ್ಗಳು ಸ್ಪೋಟಗೊಂಡಿದ್ದು ಬಳಕೆದಾರರಲ್ಲಿ ಭಯ ಹುಟ್ಟಿಸಿತ್ತು. ಇದೀಗ ಶವೋಮಿ ಕಂಪನಿಯ ಸಬ್ಬ್ರ್ಯಾಂಡ್ ರೆಡ್ಮಿ (Redmi) ಸ್ಮಾರ್ಟ್‌ಫೋನ್ ಸ್ಪೋಟಗೊಂಡು ಎಂಟು ವರ್ಷದ ಬಾಲಕಿ ಮೃತ ಪಟ್ಟಿರುವ ಘಟನೆ ನಡೆದಿದೆ.
91ಮೊಬೈಲ್ಸ್ ಮಾಡಿರುವ ವರದಿಯ ಪ್ರಕಾರ, ಈ ಘಟನೆ ಕೇರಳದ ತ್ರಿಶೂರ್‌ನಲ್ಲಿ ನಡೆದಿದೆ. ಇಲ್ಲಿನ ಪಟ್ಟಿಪರಂಬು ಮೂಲದ ಆದಿತ್ಯ ಶ್ರೀ ಎಂಬ ಬಾಲಕಿ ಮೊಬೈಲ್‌ನಲ್ಲಿ ವಿಡಿಯೋ ನೋಡುತ್ತಿರುವಾಗ ಮೊಬೈಲ್ ಫೋನ್ ಕೈಯಲ್ಲಿ ಸ್ಫೋಟಗೊಂಡಿದೆ. ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದರೂ ಕೂಡ ಉಳಿಸಿಕೊಳ್ಳುವುದಕ್ಕೆ ಸಾದ್ಯವಾಗಿಲ್ಲ. ಮೊಬೈಲ್ ಚಾರ್ಜ್ ಆಗುತ್ತಿರುವಾಗ ವಿಡಿಯೋ ನೋಡಿರುವುದು ಈ ಸ್ಪೋಟಕ್ಕೆ ಕಾರಣ ಎಂದು ಹೇಳಲಾಗಿದೆ. ಬಾಲಕಿ ಮನೆಯಲ್ಲಿ ಮೊಬೈಲ್ ಅನ್ನು ಚಾರ್ಜ್‌ಗೆ ಹಾಕಿರುವಾಗಲೇ ವಿಡಿಯೋ ವೀಕ್ಷಣೆ ಮಾಡಿದ್ದಾರೆ. ಆಗ ಫೋನ್‌ನ ತೀವ್ರತೆ ಹೆಚ್ಚಾದಂತೆ ಬಿಸಿಯಾಗಿ ಚಾರ್ಜಿಂಗ್‌ನಲ್ಲಿದ್ದ ಕಾರಣ ಸ್ಪೋಟವಾಗಿದೆ ಎಂದು ವರದಿಯಾಗಿದೆ.
Tech Tips: ನಿಮ್ಮ ಆಧಾರ್ ಕಾರ್ಡ್ ಮೂಲಕ ಯಾರಾದರು ಸಿಮ್ ಖರೀದಿಸಿದ್ದಾರ?: ಹೇಗೆ ಕಂಡುಹಿಡಿಯುವುದು?
ಈ ಬಗ್ಗೆ ಪಜಯನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಶುರುಮಾಡಿದ್ದಾರೆ. ಈ ಫೋನ್ ಅನ್ನು ಮೂರು ವರ್ಷಗಳ ಹಿಂದೆ ಖರೀದಿಸಲಾಗಿದೆ. ಅಲ್ಲದೆ ಈ ಫೋನ್‌ನ ಬ್ಯಾಟರಿಯನ್ನು ಕಳೆದ ವರ್ಷ ಬದಲಾಯಿಸಲಾಗಿತ್ತಂತೆ. ಫೋನ್ ಸ್ಪೋಟಗೊಂಡಾಗ ಬಾಲಕಿಯ ಮುಖ ಮತ್ತು ಕೈಗಳಿಗೆ ಗಂಭೀರ ಗಾಯಗಳಾಗಿವೆ. ಗಾಯದ ಪ್ರಮಾಣ ತೀವ್ರವಾಗಿದ್ದ ಕಾರಣ ಬದುಕಿಸಿಕೊಳ್ಳಲು ಸಾದ್ಯವಾಗಿಲ್ಲ ಎಂದು ಹೇಳಲಾಗಿದೆ.
ಸ್ಮಾರ್ಟ್‌ಫೋನ್ ಬ್ಲಾಸ್ಟ್ ಆಗದಂತೆ ಹೇಗೆ ಎಚ್ಚರ ವಹಿಸಬೇಕು?:
- ನಿಮ್ಮ ಫೋನ್‌ನ ಬ್ಯಾಟರಿ ಬೇಗನೆ ಬಿಸಿಯಾಗುತ್ತಿದ್ದರೆ, ಅಥವಾ ನಿಮ್ಮ ಫೋನ್ ಹಿಂಬಾಗದಲ್ಲಿ ಬ್ಯಾಟರಿ ಊದಿಕೊಂಡಂತೆ ಕಾಣಿಸಿದರೆ ಅಂತಹ ಬ್ಯಾಟರಿಯನ್ನು ಕೂಡಲೇ ಬದಲಾಯಿಸಿಬಿಡಿ. ಏಕೆಂದರೆ, ಬ್ಯಾಟರಿ ಒಳಗಿನ ಸೆಲ್ಟ್ ತೀರ್ವತೆಯಿಂದ ಅದು ಯಾವಾಗ ಬೇಕಾದರು ಸ್ಪೋಟಗೊಳ್ಳಬಹುದು. ಹೆಚ್ಚಿನ ಮೊಬೈಲ್ ಸ್ಪೋಟಗೊಳ್ಳಲು ಮುಖ್ಯ ಕಾರಣ ಇದುವೇ ಆಗಿರುತ್ತದೆ.
- ನಿಮ್ಮ ಫೋನ್‌ನಲ್ಲಿ ನೀಡಿರುವ ಚಾರ್ಜರ್ ಬಿಟ್ಟು ಇತರೆ ಚಾರ್ಜರ್ ಬಳಕೆ ಮಾಡಿದರೆ ಸ್ಮಾರ್ಟ್‌ಪೋನ್‌ಗಳು ಸ್ಪೋಟಗೊಳ್ಳುವ ಅವಕಾಶಗಳೇ ಹೆಚ್ಚು. ಒಂದು ಫೋನ್‌ಗೂ ಮತ್ತು ಇನ್ನೊಂದು ಫೋನ್ ಚಾರ್ಜಿಂಗ್ ಸ್ಟ್ರೆಂತ್ ಬದಲಾಗಿರುತ್ತದೆ. ಹೆಚ್ಚು ಚಾರ್ಜ್ ಪ್ರವಹಿಸುವ ಚಾರ್ಜರ್‌ನಿಂದ ಫೋನ್ ಸ್ಪೋಟಗೊಳ್ಳುವ ಸಾಧ್ಯತೆಯಿರುತ್ತದೆ.
- ಈಗಂತು 200W ವರೆಗಿನ ಚಾರ್ಜರ್ ಮಾರುಕಟ್ಟೆಯಲ್ಲಿದೆ. ಇದು ನಿಮ್ಮ ಮೊಬೈಲ್ಗೆ ಸಪೋರ್ಟ್ ಮಾಡುತ್ತದೆ ನಿಜ. ಆದರೆ, ಆ ವೇಗವನ್ನು ತಡೆದುಕೊಳ್ಳುವ ಶಕ್ತಿ ನಿಮ್ಮ ಮೊಬೈಲ್ ಬ್ಯಾಟರಿಗೆ ಇದೆಯೇ ಎಂಬುದನ್ನು ಪರಿಶೀಲಿಸಿ.
- ನೇರವಾಗಿ ಸೂರ್ಯನ ಕಿರಣಗಳು ಬೀಳುವ ಜಾಗದಲ್ಲಿ ಫೋನನ್ನು ಇಟ್ಟು, ಚಾರ್ಜ್ ಮಾಡಬೇಡಿ. ಅಥವಾ ಬಿಸಿಯಾಗಿರುವ ಜಾಗಗಳು ಉದಾಹರಣೆಗೆ ಕಾರಿನ ಡ್ಯಾಶ್ ಬೋರ್ಡ್ ಬಳಿ ಇಟ್ಟು ಹೆಚ್ಚು ಘಂಟೆಗಳ ಕಾಲ ಮೊಬೈಲ್ ಚಾರ್ಜ್ ಮಾಡಬೇಡಿ. ಹೆಚ್ಚು ಬಿಸಿ ಇರುವ ಜಾಗದಲ್ಲಿ ಮೊಬೈಲ್ ಇಡುವುದು ಕೂಡ ಅಪಾಯ.
- ಮೊಬೈಲ್ ಫೋನುಗಳು ಸಾಮಾನ್ಯವಾಗಿ ಸಹಿಸಿಕೊಳ್ಳುವುದು ಕೇವಲ 0 ಯಿಂದ 45 ಡಿಗ್ರಿ ಸೆಂಟಿಗ್ರೇಡ್ ನ ತಾಪವನ್ನು ಮಾತ್ರ. ಜಾಗರೂಕತೆ ಮಾರ್ಗಗಳಲ್ಲಿ ಪ್ರಮುಖವಾದ ವಿಚಾರವೆಂದರೆ ಪವರ್ ಸ್ಟ್ರಿಪ್ ಗಳನ್ನು ಬಳಸಿ ಅಥವಾ ಎಕ್ಸ್ ಟೆಷನ್ ಕಾರ್ಡ್ ಗಳನ್ನುಬಳಸಿ ಮೊಬೈಲ್ ಚಾರ್ಜ್ ಮಾಡಬೇಡಿ.
ಹೆಚ್ಚಿನ ಟೆಕ್ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:34 pm, Thu, 27 April 23