ಮೊಬೈಲ್ ಮಾರುಕಟ್ಟೆಯನ್ನು ಆಳುತ್ತಿರುವ ಐಫೋನ್, ಶವೋಮಿ (Xiaomi), ಸ್ಯಾಮ್ಸಂಗ್ ನಂತಹ ಪ್ರಸಿದ್ಧ ಬ್ರ್ಯಾಂಡ್ಗಳಿಗೆ ಈಗ ನಡುಕ ಶುರುವಾಗಿದೆ. ಇದಕ್ಕೆ ಕಾರಣ ನಥಿಂಗ್. ಹೌದು, ಒನ್ ಪ್ಲಸ್ (OnePlus) ಕಂಪನಿಯ ಸಹಸ್ಥಾಪಕ ಕಾರ್ಲ್ ಪೇ ಒಡೆತನದ ನಥಿಂಗ್ ಕಂಪನಿ ತನ್ನ ಮೊಟ್ಟ ಮೊದಲ ಸ್ಮಾರ್ಟ್‌ಫೋನ್ ನಥಿಂಗ್ ಫೋನ್ 1 (Nothing Phone 1) ಅನ್ನು ಹೊರತರುತ್ತಿದ್ದು, ಫೋನ್ ಪ್ರಿಯರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಇದೀಗ ಈ ಫೋನಿನ ಬಿಡುಗಡ ದಿನಾಂಕ ಕೂಡ ಬಹಿರಂಗವಾಗಿದೆ. ಇದೇ ತಿಂಗಳು ಜುಲೈ 12 ರಂದು ರಾತ್ರಿ 8:30ಕ್ಕೆ ಈ ಸ್ಮಾರ್ಟ್‌ಫೋನ್ ಜಾಗತೀಕ ಮಾರುಕಟ್ಟೆಯಲ್ಲಿ ಅನಾವರಣಗೊಳ್ಳಲಿದೆ. ಇದಕ್ಕೂ ಮುನ್ನ ನಥಿಂಗ್ ಫೋನ್ (1) ಭಾರತದಲ್ಲಿ ಪ್ರಿ ಆರ್ಡರ್ ಮಾಡುವುದರ ಬಗ್ಗೆ ಸಾಕಷ್ಟು ವಿವರಗಳು ಕಾಣಿಸಿಕೊಂಡಿವೆ.
ಈ ಹೊಸ ಸ್ಮಾರ್ಟ್‌ಫೋನ್ ಆಪಲ್ ಐಫೋನ್ ಜತೆಗೆ ಸ್ಪರ್ಧಿಸಲಿದೆ ಎಂದು ಸ್ವತ: ಕಾರ್ಲ್ ಹೇಳಿದ್ದಾರೆ. ಚೈನೀಸ್ ಮೂಲದ ಸ್ವೀಡಿಷ್ ಇಂಟರ್ನೆಟ್ ಉದ್ಯಮಿ ಕಾರ್ಲ್ 2013 ರಲ್ಲಿ ಪೀಟ್ ಲಾವ್ ಜೊತೆಗೆ ಒನ್‌ಪ್ಲಸ್ ಕಂಪನಿ ಆರಂಭಿಸಿದ್ದರು ಮತ್ತು ಒನ್‌ಪ್ಲಸ್‌ನ ಗ್ಲೋಬಲ್ ನಿರ್ದೇಶಕರಾಗಿದ್ದರು. ಆದರೆ, ಸೆಪ್ಟೆಂಬರ್ 2020 ರಲ್ಲಿ ಸಂಸ್ಥೆಯನ್ನು ತೊರೆದು “ನಥಿಂಗ್” ಎಂಬ ಹೊಸ ಹಾರ್ಡ್‌ವೇರ್ ಉದ್ಯಮವನ್ನು ಪ್ರಾರಂಭಿಸಿದ್ದರು. ಇದೀಗ ಹೊಸ ಫೋನನ್ನೇ ಬಿಡುಗಡೆ ಮಾಡಲ ಹೊರಟಿದ್ದಾರೆ.
Whatsapp: ವಾಟ್ಸ್ಆ್ಯಪ್ನಲ್ಲಿ ಶಾಕಿಂಗ್ ಫೀಚರ್: ಮೆಸೇಜ್ ಡಿಲೀಟ್ ಮಾಡುವಾಗ ಸಿಗುತ್ತೆ ಹೊಸ ಆಯ್ಕೆ
ಈಗಾಗಲೇ ಬಹಿರಂಗವಾಗಿರುವ ಮಾಹಿತಿ ಪ್ರಕಾರ ನಥಿಂಗ್ ಫೋನ್ (1) ಭಾರತದಲ್ಲಿ ಫ್ಲಿಪ್‌ಕಾರ್ಟ್ ಮೂಲಕ ಲಾಂಚ್ ಆಗಲಿದೆ. ಅದೇ ದಿನ ನಥಿಂಗ್ ಫೋನ್ (1) ಖರೀದಿಸಲು ಬಯಸುವ ಗ್ರಾಹಕರು ಫ್ಲಿಪ್‌ಕಾರ್ಟ್‌ಗೆ ಲಾಗ್ ಇನ್ ಮಾಡಿ, ನಥಿಂಗ್ ಫೋನ್ (1) ಮಾದರಿಯನ್ನು ಆಯ್ಕೆ ಮಾಡಬೇಕಾಗುತ್ತದೆ. ಅಲ್ಲದೆ ಪ್ರಿ-ಆರ್ಡರ್ ಪಾಸ್ ಪಡೆಯಲು ಭದ್ರತಾ ಠೇವಣಿ ಮೊತ್ತವನ್ನು ಕೂಡ ಪಾವತಿಸಬೇಕಾಗುತ್ತದೆ. ಈಗಾಗಲೇ ಫ್ಲಿಪ್ಕಾರ್ಟ್ನಲ್ಲಿ ನಥಿಂಗ್ ಫೋನ್ (1) ಪ್ರೀ ಆರ್ಡರ್ ಶುರುವಾಗಿದ್ದು ಬುಕ್ ಮಾಡಬಹುದು. ಇದಕ್ಕಾಗಿ 2,000 ರೂಪಾಯಿಗಳನ್ನು ಭದ್ರತಾ ಠೇವಣಿಯಾಗಿ ಪಾವತಿಸಬೇಕಾಗುತ್ತದೆ. ನಂತರ ಈ ಹಣ ನಿಮಗೆ ಮರು ಪಾವತಿಯಾಗುತ್ತದೆ.
ಈ ಫೋನಿನ ಫೀಚರ್ಸ್ ಬಗ್ಗೆ ನೋಡುವುದಾದರೆ, ಇದು ಆಂಡ್ರಾಯ್ಡ್ ಫೋನ್ ಆಗಿದ್ದು, ನಥಿಂಗ್ ಆಪರೇಟಿಂಗ್ ಸಿಸ್ಟಂ (ಓಎಸ್) ಹೊಂದಿರುತ್ತದೆ. ತನ್ನದೇ ಆದ ಹೊಸ ರೀತಿಯ ವಿನ್ಯಾಸ ಹೊಂದಿರಲಿದೆ. ಅಂದರೆ ನಥಿಂಗ್ ಇಯರ್ ಬಡ್ ರೀತಿ ಪಾರದರ್ಶಕ ವಿನ್ಯಾಸ ಹೊಂದಿರಲಿದೆ. ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಪ್ರಿಯರು ಬಯಸುವ ಕ್ವಾಲ್ ಕಾಂ ಸ್ನಾಪ್ ಡ್ರಾಗನ್ ಪ್ರೊಸೆಸರ್ ಹೊಂದಿರುತ್ತದೆ. ನಥಿಂಗ್‍ಗೆ ಕ್ವಾಲ್ ಕಾಂ ಕೂಡ ಹೂಡಿಕೆದಾರ ಎಂಬುದು ವಿಶೇಷ.
ಅಂತೆಯೆ ನಥಿಂಗ್ ಫೋನ್ (1) 4500mAh ಬ್ಯಾಟರಿಯನ್ನು ಬಳಸುವ ಸಾಧ್ಯತೆಯಿದೆ ಆದರೆ ವೇಗದ ಚಾರ್ಜಿಂಗ್ ಮತ್ತು ವೈರ್‌ಲೆಸ್ ಚಾರ್ಜಿಂಗ್ ಇರುತ್ತದೆಯೇ ಅಥವಾ ಇಲ್ಲವೇ ಎಂಬ ವಿವರಗಳು ಸ್ಪಷ್ಟವಾಗಿಲ್ಲ. ಕ್ಯಾಮೆರಾಗಳು 50-ಮೆಗಾಪಿಕ್ಸೆಲ್ ಮುಖ್ಯ ಸಂವೇದಕ, 8-ಮೆಗಾಪಿಕ್ಸೆಲ್ ಸೆಕೆಂಡರಿ ಸಂವೇದಕ ಮತ್ತು 2-ಮೆಗಾಪಿಕ್ಸೆಲ್ ತೃತೀಯ ಸಂವೇದಕವನ್ನು ಒಳಗೊಂಡಿರುವ ಸಾಧ್ಯತೆಯಿದೆ. ಮುಂಭಾಗದಲ್ಲಿ, ನಥಿಂಗ್ ಫೋನ್ (1) ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 32-ಮೆಗಾಪಿಕ್ಸೆಲ್ ಕ್ಯಾಮೆರಾದೊಂದಿಗೆ ಬರುವ ಸಾಧ್ಯತೆಯಿದೆ.
ಸ್ಯಾಮ್ಸಂಗ್ನ ಬೆಸ್ಟ್ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ A53 ಬೆಲೆಯಲ್ಲಿ ಭರ್ಜರಿ ಇಳಿಕೆ
Published On - 1:37 pm, Sun, 3 July 22