
ಬೆಂಗಳೂರು (ಮಾ. 13): ಭಾರತದಲ್ಲಿ ಸೈಬರ್ ವಂಚನೆ: ದೇಶದಲ್ಲಿ ಸೈಬರ್ ವಂಚನೆ(Cyber Fraud) ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿದ್ದು, ಇದರಿಂದಾಗಿ ಜನರು ಭಾರಿ ನಷ್ಟವನ್ನು ಎದುರಿಸುತ್ತಿದ್ದಾರೆ. ಲೋಕಸಭೆಯಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದ ಮೊದಲ 9 ತಿಂಗಳಲ್ಲಿ ಸೈಬರ್ ವಂಚನೆಯಿಂದಾಗಿ ಜನರು ಬರೋಬ್ಬರಿ 107.21 ಕೋಟಿ ರೂ. ನಷ್ಟ ಅನುಭವಿಸಿದ್ದಾರೆ. ಮೋಸಗಾರರು ಪ್ರತಿದಿನ ಜನರನ್ನು ವಂಚಿಸಲು ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಅನೇಕ ಜನರು ಅವರ ಬಲೆಗೆ ಸಿಲುಕುತ್ತಿದ್ದು, ಅಂತಿಮವಾಗಿ ತಮಗೆ ತಾವೇ ಹಾನಿ ಮಾಡಿಕೊಳ್ಳುತ್ತಾರೆ.
ಕಳೆದ ಕೆಲವು ವರ್ಷಗಳಲ್ಲಿ ದೇಶವು ಡಿಜಿಟಲ್ ಪಾವತಿಗಳಲ್ಲಿ ಭಾರಿ ಏರಿಕೆ ಕಂಡಿದೆ. ಇದು ಜನರಿಗೆ ಅನುಕೂಲವನ್ನು ಒದಗಿಸಿದೆ, ಆದರೆ ಅದರೊಂದಿಗೆ ಸೈಬರ್ ವಂಚನೆ ಪ್ರಕರಣಗಳು ಕೂಡ ಹೆಚ್ಚಿವೆ. ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳ ದತ್ತಾಂಶವನ್ನು ನೋಡಿದರೆ, ಆತಂಕಕಾರಿ ವರದಿ ಹೊರಹೊಮ್ಮುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ, 1 ಲಕ್ಷ ರೂ. ಗಿಂತ ಹೆಚ್ಚಿನ ಮೌಲ್ಯದ ವಂಚನೆಗಳು ವೇಗವಾಗಿ ಹೆಚ್ಚುತ್ತಿವೆ. 2015 ರಲ್ಲಿ, ಅಂತಹ 845 ಪ್ರಕರಣಗಳು ದಾಖಲಾಗಿದ್ದು, ಒಟ್ಟು 18.46 ಕೋಟಿ ರೂ. ನಷ್ಟವಾಗಿದೆ. 2024 ರ ಆರ್ಥಿಕ ವರ್ಷದಲ್ಲಿ, ಅಂತಹ ಪ್ರಕರಣಗಳ ಸಂಖ್ಯೆ 29,000 ಕ್ಕಿಂತ ಹೆಚ್ಚಿತ್ತು ಮತ್ತು ಜನರು ಒಟ್ಟು 177.05 ಕೋಟಿ ರೂ. ನಷ್ಟವನ್ನು ಅನುಭವಿಸಿದರು. ಈ ವರ್ಷ ಇಲ್ಲಿಯವರೆಗೆ 13,384 ಪ್ರಕರಣಗಳು ದಾಖಲಾಗಿದ್ದು, 107.21 ಕೋಟಿ ರೂ. ನಷ್ಟವಾಗಿದೆ.
ಅಪೂರ್ಣ KYC ಹೊಂದಿರುವ ಖಾತೆಗಳು ಮತ್ತು ಫಿಶಿಂಗ್ ದಾಳಿಗಳು ಸೇರಿದಂತೆ ವಿವಿಧ ರೀತಿಯಲ್ಲಿ ಜನರನ್ನು ಗುರಿಯಾಗಿಸಲಾಗುತ್ತಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಇತ್ತೀಚಿನ ದಿನಗಳಲ್ಲಿ ಹೋಟೆಲ್ ಬುಕಿಂಗ್ ನಿಂದ ಹಿಡಿದು ಕೊರಿಯರ್ ಡೆಲಿವರಿವರೆಗೆ ಎಲ್ಲದರ ಹೆಸರಲ್ಲೂ ವಂಚನೆಗಳು ನಡೆಯುತ್ತಿವೆ. ಇವುಗಳನ್ನು ತಪ್ಪಿಸಲು, ಹೆಚ್ಚುವರಿ ಎಚ್ಚರಿಕೆ ವಹಿಸಬೇಕಾಗಿದೆ.
Digital Payment: ಡಿಜಿಟಲ್ ಪಾವತಿ ಮಾಡುವಾಗ ಎಚ್ಚರ ವಹಿಸುವುದು ಹೇಗೆ?: ಈ ವಿಚಾರ ಗಮನದಲ್ಲಿರಲಿ
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:51 am, Thu, 13 March 25