ನವದೆಹಲಿ: ಸಾಮಾಜಿಕ ಮಾಧ್ಯಮ (Social Media) ವೇದಿಕೆಗಳಿಗೆ ಸಂಬಂಧಿಸಿದ ಕುಂದುಕೊರತೆಗಳ ಮೇಲ್ಮನವಿ ವಿಚಾರಣೆಗೆ ಮುಂದಿನ 10ರಿಂದ 12 ದಿನಗಳ ಒಳಗಾಗಿ ‘ಸಾಮಾಜಿಕ ಮಾಧ್ಯಮ ಕುಂದುಕೊರತೆ ಮೇಲ್ಮನವಿ ಸಮಿತಿ’ ರಚಿಸಲಾಗುವುದು. ಈ ಸಮಿತಿಯು ನವೆಂಬರ್ 30ರ ವೇಳೆಗೆ ಕಾರ್ಯಾಚರಣೆ ಆರಂಭಿಸಬಹುದು ಎಂದು ಐಟಿ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekhar) ಮಂಗಳವಾರ ತಿಳಿಸಿದ್ದಾರೆ.
ಐಟಿ ನಿಯಮಗಳು ಮತ್ತು ಕಾನೂನುಗಳನ್ನು ಕೇವಲ ಆಯ್ಕೆಯಾಗಿ ಪರಿಗಣಿಸುವಂತಿಲ್ಲ. ಕಡ್ಡಾಯವಾಗಿ ಎಲ್ಲ ಸಾಮಾಜಿಕ ಮಾಧ್ಯಮ ವೇದಿಕೆಗಳು ಪಾಲಿಸಬೇಕು ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ. ಬಂಡವಾಳ ಹೂಡಿಕೆದಾರರ ಜತೆ ಸಮಾಲೋಚನೆ ನಡೆಸಿದ ಬಳಿಕವೇ ಸರ್ಕಾರ ಮೇಲ್ಮನವಿ ಸಮಿತಿ ರಚಿಸುವ ನಿರ್ಧಾರಕ್ಕೆ ಬಂದಿದೆ ಎಂದು ಅವರು ಹೇಳಿದ್ದಾರೆ.
10, 12 ದಿನಗಳ ಒಳಗಾಗಿ ಸಮಿತಿ ರಚಿಸಲಾಗುವುದು. ಗ್ರಾಹಕರು ಮತ್ತು ಉದ್ದಿಮೆಗಳ ಜತೆ ಸಮಾಲೋಚನೆ ನಡೆಸದೆ ಯಾವುದನ್ನೂ ಅಂತಿಮಗೊಳಿಸುವುದಿಲ್ಲ ಮತ್ತು ಅಧಿಸೂಚನೆ ಹೊರಡಿಸುವುದಿಲ್ಲ ಎಂದು ಸಚಿವರು ಹೇಳಿದ್ದಾರೆ.
ಇದನ್ನೂ ಓದಿ: ತಪ್ಪು ಮಾಹಿತಿ ಹರಡುವಿಕೆ ವಿರುದ್ಧ ಹೊಸ ಐಟಿ ಕಾನೂನು ಪರಿಣಾಮಕಾರಿ: ರಾಜೀವ್ ಚಂದ್ರಶೇಖರ್
ಕೇಂದ್ರ ಸರ್ಕಾರ ಶೀಘ್ರದಲ್ಲೇ ‘ಸಾಮಾಜಿಕ ಮಾಧ್ಯಮ ಕುಂದುಕೊರತೆ ಮೇಲ್ಮನವಿ ಸಮಿತಿ’ಗಳನ್ನು ರಚಿಸಲಿದೆ ಎಂಬ ಕುರಿತು ಇತ್ತೀಚೆಗೆ ವರದಿಯಾಗಿತ್ತು. ಬಳಕೆದಾರರು ತಮ್ಮ ಸಮಸ್ಯೆಗಳಿಗೆ ಸಾಮಾಜಿಕ ಮಾಧ್ಯಮಗಳ ಕುಂದುಕೊರತೆ ವೇದಿಕೆಗಳಲ್ಲಿ ಪರಿಹಾರ ಸಿಗದಿದ್ದಲ್ಲಿ ಅಥವಾ ಅವುಗಳ ಪರಿಹಾರದಿಂದ ಸಮಾಧಾನ ಹೊಂದಿರದಿದ್ದಲ್ಲಿ ಈ ಮೇಲ್ಮನವಿ ಸಮಿತಿಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಈ ವಿಚಾರವಾಗಿ ‘2021ರ ಮಾಹಿತಿ ತಂತ್ರಜ್ಞಾನ ಕಾಯ್ದೆ’ಗೆ ತಿದ್ದುಪಡಿ ಮಾಡಲು ಮುಂದಾಗಿರುವ ಸರ್ಕಾರ, ಕರಡು ಪ್ರತಿಯನ್ನು ಈಗಾಗಲೇ ಅಂತಿಮಗೊಳಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು.
ಇದರ ಬೆನ್ನಲ್ಲೇ, ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಕಾನೂನುಬಾಹಿರ ಚಟುವಟಿಕೆ ನಡೆಸುವುದು ಹಾಗೂ ತಪ್ಪು ಮಾಹಿತಿ ಹರಡುವುದರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ಮಾಡಿರುವ ಇತ್ತೀಚಿನ ತಿದ್ದುಪಡಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡಲಿವೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದರು. ಸಾಮಾಜಿಕ ಮಾಧ್ಯಮ ಕಂಪನಿಗಳ ಪ್ರಧಾನ ಕಚೇರಿ ಅಮೆರಿಕದಲ್ಲೋ ಯುರೋಪ್ನಲ್ಲೋ ಇರಬಹುದು. ಹಾಗೆಂದ ಮಾತ್ರಕ್ಕೆ ಅವರು ಭಾರತದಲ್ಲಿ ಕಾರ್ಯಾಚರಿಸುವಾಗ ಇಲ್ಲಿನ ಕಾನೂನುಗಳನ್ನು ಗೌರವಿಸದೇ ಇರುವಂತಿಲ್ಲ. ಭಾರತೀಯರ ಸಾಂವಿಧಾನಿಕ ಹಕ್ಕುಗಳನ್ನು ನಿರಾಕರಿಸುವಂತಿಲ್ಲ ಎಂದು ಸಚಿವರು ಹೇಳಿದ್ದರು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ