ವರ್ಷಗಳ ಹಿಂದೆ 108 ಮೆಗಾ ಪಿಕ್ಸೆಲ್ ಕ್ಯಾಮೆರಾಗಳ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಿ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ್ದ ಕಂಪನಿಗಳಿಗೆ ಈಗ ನಡುಕ ಶುರುವಾಗಿದೆ. ಯಾಕೆಂದರೆ ಈಗೀಗ 200 ಮೆಗಾ ಪಿಕ್ಸೆಲ್ ಕ್ಯಾಮೆರಾದ ಫೋನ್ಗಳು ಬರಲಾರಂಭಿಸಿದೆ. ಈ ವರ್ಷದ ಆರಂಭದಲ್ಲಿ ಮೋಟೋರೊಲಾ ಕಂಪನಿ 200 ಮೆಗಾ ಪಿಕ್ಸೆಲ್ ಕ್ಯಾಮೆರಾದ ಫೋನನ್ನು (200MP Camera Phone) ಭಾರತದಲ್ಲಿ ಲಾಂಚ್ ಮಾಡಿತ್ತು. ಇದು ದೇಶದಲ್ಲಿ ಬಿಡುಗಡೆ ಆದ ಮೊಟ್ಟ 200 ಮೆಗಾ ಪಿಕ್ಸೆಲ್ ಕ್ಯಾಮೆರಾದ ಮೊಬೈಲ್. ಇದೀಗ ರಿಯಲ್ ಮಿ (Realme) ಸರದಿ. ಪ್ರಸಿದ್ಧ ರಿಯಲ್ ಮಿ ಕಂಪನಿ ತನ್ನ ಮೊಟ್ಟ ಮೊದಲ 200 ಮೆಗಾ ಪಿಕ್ಸೆಲ್ ಕ್ಯಾಮೆರಾದ ಹೊಸ ಫೋನನ್ನು ಇಂದು ಭಾರತದಲ್ಲಿ ರಿಲೀಸ್ ಮಾಡಿದೆ. ಇದರ ಹೆಸರು ರಿಯಲ್ ಮಿ 11 ಪ್ರೊ+ 5G (Realme 11 Pro 5G).
ಬೆಲೆ ಎಷ್ಟು?:
ಇದು ರಿಯಲ್ ಮಿ 11 ಸರಣಿಯ ಭಾಗವಾಗಿದ್ದು, ಇಂದು ದೇಶದಲ್ಲಿ ರಿಯಲ್ ಮಿ 11 ಪ್ರೊ 5G ಮತ್ತು ರಿಯಲ್ ಮಿ 11 ಪ್ರೊ+ 5G ಎಂಬ ಎರಡು ಫೋನ್ ಅನಾವರಣವಾಗಿದೆ. ರಿಯಲ್ ಮಿ 11 ಪ್ರೊ 5G ಫೋನ್ ಒಟ್ಟು ಮೂರು ಸ್ಟೋರೇಜ್ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ಇದರ 8GB RAM ಮತ್ತು 128GB ಸ್ಟೋರೇಜ್ ವೇರಿಯಂಟ್ ದರವು 23,999 ರೂ., 8GB RAM + 256GB ಮತ್ತು 12GB RAM + 256GB ಸ್ಟೋರೇಜ್ ಆಯ್ಕೆಗೆ ಕ್ರಮವಾಗಿ 24,999 ರೂ. ಹಾಗೂ 27,999 ರೂ. ನಿಗದಿ ಮಾಡಲಾಗಿದೆ. ಈ ಫೋನ್ ಜೂನ್ 16 ರಿಂದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ ಮತ್ತು ರಿಯಲ್ ಮಿ.ಕಾಮ್ನಲ್ಲಿ ಮಾರಾಟ ಕಾಣಲಿದೆ.
Apple Vision Pro: ಆ್ಯಪಲ್ ವಿಆರ್ ಹೆಡ್ಸೆಟ್ ವಿಶನ್ ಪ್ರೊ ಬೆಲೆ ಭಾರತದಲ್ಲಿ ₹2,88,700!!
ಇನ್ನು ರಿಯಲ್ ಮಿ 11 ಪ್ರೊ+ 5G ಫೋನ್ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ಇದರ 8GB RAM ಮತ್ತು 256GB ಸ್ಟೋರೇಜ್ ವೇರಿಯಂಟ್ ದರವು 27,999 ರೂ. ಆಗಿದೆ. ಅಂತೆಯೆ 12GB RAM + 256GB ಸ್ಟೋರೇಜ್ ಆಯ್ಕೆಗೆ 29,999 ರೂ. ಇದೆ. ಈ ಫೋನ್ ಜೂನ್ 15 ರಿಂದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ ಮತ್ತು ರಿಯಲ್ ಮಿ.ಕಾಮ್ನಲ್ಲಿ ಮಾರಾಟ ಕಾಣಲಿದೆ. ಈ ಎರಡೂ ಫೋನ್ಗಳ ಮೇಲೆ ಆಯ್ದ ಬ್ಯಾಂಕ್ ಕಾರ್ಡ್ ಮೂಲಕ ಖರೀದಿಸಿದರೆ 2,000 ರೂ. ಗಳ ಡಿಸ್ಕೌಂಟ್ ಆಫರ್ ಘೋಷಿಸಲಾಗಿದೆ.
ಫೀಚರ್ಸ್ ಏನಿದೆ?:
ರಿಯಲ್ ಮಿ 11 ಪ್ರೊ 5G ಮತ್ತು ರಿಯಲ್ ಮಿ 11 ಪ್ರೊ+ 5G ಪ್ರೊ ಸ್ಮಾರ್ಟ್‌ಫೋನ್ 1,080*2,412 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.7 ಇಂಚಿನ ಫುಲ್ ಹೆಚ್ಡಿ+ ಕರ್ವಡ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 120Hz ಅಡಾಪ್ಟಿವ್ ರಿಫ್ರೆಶ್ ರೇಟ್ನಿಂದ ಕೂಡಿದೆ. ಇದು ಆಕ್ಟಾ-ಕೋರ್ 6nm ಮೀಡಿಯಾಟೆಕ್ ಡೈಮನ್ಸಿಟಿ 7050 ಪ್ರೊಸೆಸರ್ ಬಲವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್ 13 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಈ ಎರಡೂ ಫೋನಿನ ಪ್ರಮುಖ ಹೈಲೈಟ್ ಕ್ಯಾಮೆರಾ. ರಿಯಲ್ ಮಿ 11 ಪ್ರೊ 5G ಫೋನ್ನಲ್ಲಿ ಡ್ಯುಯೆಲ್ ರಿಯರ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ. 100 ಮೆಗಾ ಪಿಕ್ಸೆಲ್ನ ಪ್ರೈಮರಿ ಸೆನ್ಸಾರ್ ನೀಡಲಾಗಿದ್ದು, ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಟೆಕ್ನಾಲಜಿಯನ್ನು ಹೊಂದಿದೆ. 2 ಮೆಗಾ ಪಿಕ್ಸೆಲ್ನ ಸೆಕೆಂಡರಿ ಕ್ಯಾಮೆರಾ ನೀಡಲಾಗಿದೆ. ಮುಂಭಾಗ ಸೆಲ್ಫೀ ಮತ್ತು ವಿಡಿಯೋ ಕರೆಗಳಿಗಾಗಿ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ಇತ್ತ ರಿಯಲ್ ಮಿ 11 ಪ್ರೊ+ 5G ಫೋನ್ನಲ್ಲಿ ಆಕರ್ಷಕವಾದ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಇದೆ. ಇದರಲ್ಲಿರುವ ಮುಖ್ಯ ಕ್ಯಾಮೆರಾ ಬರೋಬ್ಬರಿ 200 ಮೆಗಾ ಪಿಕ್ಸೆಲ್ನ ಸ್ಯಾಮ್ಸಂಗ್ ISOCELL HP3 ಸೆನ್ಸಾರ್ನಿಂದ ಕೂಡಿದೆ. ಇದರಿಂದ ದೂರದ ವರೆಗೆ ಸುಲಭವಾಗಿ ಝೂಮ್ ಮಾಡಬಹುದಂತೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಟೆಕ್ನಾಲಜಿಯನ್ನು ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಆಲ್ಟ್ರಾ ವೈಡ್ ಲೆನ್ಸ್ ಅನ್ನು ಹೊಂದಿದೆ. ಜೊತೆಗೆ 2 ಮೆಗಾಪಿಕ್ಸೆಲ್ನ ಮ್ಯಾಕ್ರೊ ಸೆನ್ಸಾರ್ ಇದೆ. ಮುಂಭಾಗ ಸೆಲ್ಫೀ ಮತ್ತು ವಿಡಿಯೋ ಕರೆಗಳಿಗಾಗಿ 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಕ್ಯಾಮೆರಾವನ್ನು ಸಹ ನೀಡಲಾಗಿದೆ.
ಈ ಎರಡೂ ಫೋನ್ಗೆ ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಲಾಗಿದೆ. ಇದರಲ್ಲಿ ರಿಯಲ್ ಮಿ 11 ಪ್ರೊ+ 100W ಸೂಪರ್‌ವೂಕ್ ಚಾರ್ಜ್ ವೇಗದ ಚಾರ್ಜಿಂಗ್ ಅನ್ನು ಒಳಗೊಂಡಿದ್ದರೆ, ರಿಯಲ್ ಮಿ 11 ಪ್ರೊ 67W ಸೂಪರ್‌ವೂಕ್ ಚಾರ್ಜ್ ವೇಗದ ಚಾರ್ಜಿಂಗ್ ಸಪೋರ್ಟ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.2 ಮತ್ತು USB ಟೈಪ್-C ಪೋರ್ಟ್ ಬೆಂಬಲಿಸಲಿದೆ. ಇದರಲ್ಲಿ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಸೇರಿದಂತೆ ಇತ್ತೀಚೆಗಿನ ಎಲ್ಲ ಆಯ್ಕೆಗಳನ್ನು ಅಳವಡಿಸಲಾಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:19 pm, Thu, 8 June 23