Tecno Pova Neo: ಬಜೆಟ್ ಪ್ರಿಯರು ಫುಲ್ ಶಾಕ್: ಈ ಫೋನ್ನಲ್ಲಿ ಇಷ್ಟು ಕಡಿಮೆ ಬೆಲೆಗೆ ಎಷ್ಟೊಂದು ಫೀಚರ್ಸ್
ಟೆಕ್ನೋ ಪೊವಾ ನಿಯೋ ಸ್ಮಾರ್ಟ್‌ಫೋನ್ ಸದ್ಯಕ್ಕೆ ಭಾರತದಲ್ಲಿ ಒಂದು ಮಾದರಿಯಲ್ಲಷ್ಟೆ ಬಿಡುಗಡೆಗೊಂಡಿದೆ. ತನ್ನ ಏಕೈಕ 6GB RAM ಮತ್ತು 128GB ಸ್ಟೋರೇಜ್ ರೂಪಾಂತರಕ್ಕೆ ಕೇವಲ 12,999 ರೂ. ಬೆಲೆ ಹೊಂದಿದೆ.
ಸ್ಮಾರ್ಟ್‌ಫೋನ್ (Smartphone) ಮಾರುಕಟ್ಟೆಯಲ್ಲಿ ಹೆಚ್ಚು ಬಜೆಟ್ ಬೆಲೆಯ ಮೊಬೈಲ್ಗಳಿಗೆ ಹೆಸರುವಾಸಿಯಾಗಿರುವ ಪ್ರಸಿದ್ಧ ಟೆಕ್ನೋ ಕಂಪನಿ ಈಗಾಗಲೇ ಹಲವು ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಇತ್ತೀಚೆಗಷ್ಟೆ ಟೆಕ್ನೋ ಪಾಪ್ 5 ಪ್ರೊ (Tecno Pop 5 Pro) ಎಂಬ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದ್ದ ಕಂಪನಿ ಇದರ ಬೆನ್ನಲ್ಲೇ ಇದೀಗ ಮತ್ತೊಂದು ಹೊಸ ಟೆಕ್ನೋ ಪೋವಾ ನಿಯೋ (Tecno Pova Neo) ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಿದೆ. ಇದು ಬಜೆಟ್ ಬೆಲೆಯ ಫೋನ್ ಆಗಿದ್ದರೂ ಸಾಕಷ್ಟು ವಿಶೇಷತೆಗಳಿಂದ ಕೂಡಿದೆ. ಆಕ್ಟಾ-ಕೋರ್ ಮೀಡಿಯಾಟೆಕ್ ಪ್ರೊಸೆಸರ್, ಡ್ಯುಯೆಲ್ ರಿಯರ್ ಕ್ಯಾಮೆರಾ ಸೆಟಪ್ ಸೇರಿದಂತೆ ಅತ್ಯುತ್ತಮ ಬಲಿಷ್ಠವಾದ ಬ್ಯಾಟರಿಯನ್ನು ಹೊಂದಿದೆ.
ಟೆಕ್ನೋ ಪೊವಾ ನಿಯೋ ಸ್ಮಾರ್ಟ್‌ಫೋನ್ ಸದ್ಯಕ್ಕೆ ಭಾರತದಲ್ಲಿ ಒಂದು ಮಾದರಿಯಲ್ಲಷ್ಟೆ ಬಿಡುಗಡೆಗೊಂಡಿದೆ. ತನ್ನ ಏಕೈಕ 6GB RAM ಮತ್ತು 128GB ಸ್ಟೋರೇಜ್ ರೂಪಾಂತರಕ್ಕೆ ಕೇವಲ 12,999 ರೂ. ಬೆಲೆ ಹೊಂದಿದೆ. ಈ ಸ್ಮಾರ್ಟ್‌ಫೋನ್ ಗೀಕ್ ಬ್ಲೂ, ಅಬ್ಸಿಡಿಯನ್ ಬ್ಲ್ಯಾಕ್ ಮತ್ತು ಪವರ್ ಬ್ಲಾಕ್ ಬಣ್ಣಗಳಲ್ಲಿ ಬರುತ್ತದೆ. ಇದೇ ಜನವರಿ 22 ರಿಂದ ರಿಟೇಲ್ ಸ್ಟೋರ್‌ಗಳ ಮೂಲಕ ಖರೀದಿಸಲು ಲಭ್ಯವಿರುತ್ತದೆ.
ಟೆಕ್ನೋ ಪೋವಾ ನಿಯೋ ಸ್ಮಾರ್ಟ್‌ಫೋನ್ 720×1,640 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.8 ಇಂಚಿನ HD+ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ ಡಾಟ್‌ನಾಚ್ ವಿನ್ಯಾಸವನ್ನು ಪಡೆದುಕೊಂಡಿದೆ. ಆಕ್ಟಾ-ಕೋರ್ ಮೀಡಿಯಾಟೆಕ್ ಹಿಲಿಯೋ G25 SoC ಪ್ರೊಸೆಸರ್ ಬಲದಿಂದ ಕೂಡಿದ್ದು, ಇದು ಆಂಡ್ರಾಯ್ಡ್ 11 ನಲ್ಲಿ HiOS 7.6 ಜೊತೆಗೆ ಕಾರ್ಯನಿರ್ವಹಿಸುತ್ತದೆ. ಇದಲ್ಲದೆ ಟೆಕ್ನೋ ಬ್ರ್ಯಾಂಡ್ ಸ್ವಾಮ್ಯದ ಮೆಮ್‌ಫ್ಯೂಷನ್ ಫೀಚರ್ಸ್ ಬಳಸಿಕೊಂಡು 5GB RAM ಅನ್ನು ವಾಸ್ತವಿಕವಾಗಿ ವಿಸ್ತರಿಸಲು ಸಹ ಬೆಂಬಲವಿದೆ. ಜೊತೆಗೆ ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 512GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಲು ಅವಕಾಶ ನೀಡಲಾಗಿದೆ.
ಇನ್ನು ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದ್ದು, f/1.8 ಲೆನ್ಸ್ ಮತ್ತು ಕ್ವಾಡ್ LED ಫ್ಲ್ಯಾಷ್ ಅನ್ನು ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದು ಡ್ಯುಯಲ್ LED ಫ್ಲ್ಯಾಷ್ ಒಳಗೊಂಡಿದೆ.
ಅತ್ಯಂತ ಬಲಿಷ್ಠವಾದ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಿರುವುದು ವಿಶೇಷ. ಇದು 18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಇದರ ಮೂಲಕ ಸಿಂಗಲ್ ಚಾರ್ಜ್‌ನಲ್ಲಿ ಬ್ಯಾಟರಿಯು 43 ಗಂಟೆಗಳ ಟಾಕ್ ಟೈಮ್ ಅಥವಾ 55 ದಿನಗಳ ಸ್ಟ್ಯಾಂಡ್‌ಬೈ ಟೈಂ ನೀಡುತ್ತದೆ ಎಂದು ಕಂಪನಿ ಹೇಳಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi 802.11ac, ಬ್ಲೂಟೂತ್ v5.1, GPS/ A-GPS, FM ರೇಡಿಯೋ, USB ಟೈಪ್-C, ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಬೆಂಬಲಿಸುತ್ತದೆ.
ಭಾರತದಲ್ಲಿ ಎರಡು ಹೊಸ ಮಾದರಿಯ ಲ್ಯಾಪ್ಟಾಪ್ ಪರಿಚಯಿಸಿದ ಮೈಕ್ರೋಸಾಫ್ಟ್; ಬೆಲೆ ಎಷ್ಟು?