Truecaller: ಸರ್ಕಾರದಿಂದ ಸಿಎನ್​ಎಪಿ ಅಸ್ತ್ರ; ಟ್ರೂಕಾಲರ್​ಗೆ ಇದು ಮಾರಕಾಸ್ತ್ರವಾ? ಟೆಲಿಕಾಂ ಕಂಪನಿಗಳಿಗೂ ತಲೆನೋವು

|

Updated on: Feb 27, 2024 | 2:02 PM

TRAI Proposal for CNAP feature: ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರಿಗೆ ಬರುವ ಕರೆಗಳ ವ್ಯಕ್ತಿ ಗುರುತನ್ನು ಮೊದಲು ತೋರಿಸಬೇಕು ಎನ್ನುವ ಪ್ರಸ್ತಾವವನ್ನು ಟ್ರಾಯ್ ಮುಂದಿಟ್ಟಿದೆ. ಕಾಲಿಂಗ್ ನೇಮ್ ಪ್ರೆಸೆಂಟೇಶನ್ (ಸಿಎನ್​ಎಪಿ) ಫೀಚರ್ ಅನ್ನು ಟೆಲಿಕಾಂ ಕಂಪನಿಗಳು ಅಳವಡಿಸಿದರೆ ಟ್ರೂಕಾಲರ್​ನಂಥ ಕಾಲರ್ ಐಡಿ ಆ್ಯಪ್​ಗಳಿಗೆ ಧಕ್ಕೆಯಾಗುತ್ತದಾ? ಆದರೆ, ಈ ಟ್ರಾಯ್ ಪ್ರಸ್ತಾವನೆ ಜಾರಿಗೆ ತರಲು ಟೆಲಿಕಾಂ ಕಂಪನಿಗಳೂ ಹಿಂದೇಟು ಹಾಕುತ್ತಿರುವುದು ತಿಳಿದುಬಂದಿದೆ.

Truecaller: ಸರ್ಕಾರದಿಂದ ಸಿಎನ್​ಎಪಿ ಅಸ್ತ್ರ; ಟ್ರೂಕಾಲರ್​ಗೆ ಇದು ಮಾರಕಾಸ್ತ್ರವಾ? ಟೆಲಿಕಾಂ ಕಂಪನಿಗಳಿಗೂ ತಲೆನೋವು
ಟ್ರೂಕಾಲರ್
Follow us on

ನವದೆಹಲಿ, ಫೆಬ್ರುವರಿ 27: ಜಿಯೋ, ಏರ್ಟೆಲ್ ಇತ್ಯಾದಿ ಟೆಲಿಕಾಂ ಆಪರೇಟಿಂಗ್ ಕಂಪನಿಗಳು ಕಾಲಿಂಗ್ ನೇಮ್ ಪ್ರೆಸೆಂಟೇಶನ್ (ಸಿಎನ್​ಎಪಿ) ಫೀಚರ್ ಅನ್ನು ಅಳವಡಿಸಬೇಕು ಎಂದು ದೂರವಾಣಿ ನಿಯಂತ್ರಣ ಪ್ರಾಧಿಕಾರವಾದ ಟ್ರಾಯ್ ಪ್ರಸ್ತಾವನೆ ಮುಂದಿಟ್ಟಿದೆ. ಅಂದರೆ, ನಿಮ್ಮ ಮೊಬೈಲ್ ನಂಬರ್​ಗೆ ಯಾರದ್ದಾದರೂ ಕರೆ ಬಂದರೆ ಆ ವ್ಯಕ್ತಿಯ ಹೆಸರನ್ನು ನಿಮಗೆ ತೋರಿಸಬೇಕು ಎಂಬುದು ಈ ಪ್ರಸ್ತಾಪ. ಟ್ರೂಕಾಲರ್ ಬಳಸುತ್ತಿರುವವರಿಗೆ ಈ ಫೀಚರ್ ಇದ್ದೇ ಇದೆ. ಇದೇನೂ ಹೊಸತಲ್ಲ. ಆದರೆ, ಟೆಲಿಕಾಂ ಕಂಪನಿಗಳೇ ಸ್ವತಃ ಈ ಹೆಚ್ಚುವರಿ ಸೇವೆ ಒದಗಿಸಬೇಕು ಎಂದು ಟ್ರಾಯ್ ಹೇಳುತ್ತಿದೆ. ಇದೇನಾದರೂ ಜಾರಿಯಾದರೆ ಟ್ರೂಕಾಲರ್​ನ ಮೂಲ ಬಿಸಿನೆಸ್​ಗೇ ಸಂಚಕಾರ ಬಿದ್ದಂತಾಗುವುದಿಲ್ಲವೇ ಎಂಬುದು ಪ್ರಶ್ನೆ. ಟೆಲಿಕಾಂ ಕಂಪನಿಗಳು ಈ ಫೀಚರ್ ಅಳವಡಿಸಿಕೊಳ್ಳುವ ಪರಿಸ್ಥಿತಿಯಲ್ಲಿ ಈಗ ಇವೆಯಾ ಎಂಬ ಪ್ರಶ್ನೆಯೂ ಇದೆ. ಈ ಬಗ್ಗೆ ಮಿಂಟ್ ಪತ್ರಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿದೆ.

ಟೆಲಿಕಾಂ ಕಂಪನಿಗಳಿಗೆ ಸಿಎನ್​ಎಪಿ ಫೀಚರ್ ಅಳವಡಿಕೆಯಿಂದ ಏನು ತೊಂದರೆ?

ಸಿಮ್ ನೊಂದಣಿ ಮಾಡುವಾಗ ಪಡೆಯಲಾಗುವ ದಾಖಲೆಯ ಆಧಾರದ ಮೇಲೆ ವ್ಯಕ್ತಿಯ ಕರೆ ಗುರುತನ್ನು ಪಡೆಯಲು ಸಾಧ್ಯ. ಆದರೆ, ಕರೆ ಮಾಡಿದಾಗ ಆ ನಂಬರ್​ನ ಮೂಲ ಪತ್ತೆಹಚ್ಚಲು ಡಾಟಾಬೇಸ್​ನಿಂದ ಮಾಹಿತಿ ಪಡೆಯಲು ಒಂದಷ್ಟು ಸಮಯ ಬೇಕಾಗುತ್ತದೆ. ಹೀಗಾಗಿ, ವ್ಯಕ್ತಿಯಿಂದ ವ್ಯಕ್ತಿಯ ಮೊಬೈಲ್​ಗೆ ಕರೆ ಹೋದಾಗ ಅದು ತಲುಪುವುದು ವಿಳಂಬವಾಗಬಹುದು. ಇದು ಟೆಲಿಕಾಂ ಕಂಪನಿಗಳಿಗೆ ಇರುವ ಒಂದು ಆತಂಕ.

ಹಾಗೆಯೇ, ಈ ಫೀಚರ್ ಅಳವಡಿಸಲು ಹೆಚ್ಚುವರಿ ಸೌಕರ್ಯ ವ್ಯವಸ್ಥೆ ನಿರ್ಮಿಸಬೇಕು. ಈಗಾಗಲೇ ಹೆಚ್ಚು ಲಾಭ ಕಾಣದೇ ಪರದಾಡುತ್ತಿರುವ ಟೆಲಿಕಾಂ ಕಂಪನಿಗಳಿಗೆ ಇನ್ನಷ್ಟು ಹೊರೆಯಾಗಬಹುದು. ಅಥವಾ ಗ್ರಾಹಕರಿಗೆ ಹೆಚ್ಚಿನ ಹೊರೆ ಹೊರಿಸಬೇಕಾಗಬಹುದು. ಅಂದರೆ ನಮ್ಮ ನಿಮ್ಮ ಮೊಬೈಲ್ ಬಿಲ್ ಇನ್ನೂ ಹೆಚ್ಚಾಗಬಹುದು.

ಇದನ್ನೂ ಓದಿ: ಭಾರತದಿಂದ ಹಾರಲಿರುವ ಮೊದಲ ಗಗನಯಾತ್ರಿಗಳು; ಇಂದು ಹೆಸರು ಬಹಿರಂಗಪಡಿಸಲಿದ್ದಾರೆ ಪ್ರಧಾನಿ ಮೋದಿ; ಯಾರವರು ಈ ನಾಲ್ವರು

ಇನ್ನು, ಭಾರತದಲ್ಲಿ ಸಾಕಷ್ಟು ಫೋನ್​ಗಳು ಈ ಫೀಚರ್​ಗೆ ಹೊಂದಿಕೆಯಾಗುವುದಿಲ್ಲ. ಹೀಗಾಗಿ, ಇದನ್ನು ಪೂರ್ಣವಾಗಿ ಜಾರಿ ಮಾಡುವುದು ಕಷ್ಟಕರವಾದೀತು.

ಟ್ರೂಕಾಲರ್​​ಗೆ ಏನು ತೊಂದರೆ?

ಟ್ರೂಕಾಲರ್ ಸ್ವೀಡನ್ ದೇಶದ ಕಂಪನಿ. ಇದು ವಿವಿಧ ಮೊಬೈಲುಗಳಲ್ಲಿ ಕಾಂಟ್ಯಾಕ್ಟ್ ಲಿಸ್ಟ್​ನಲ್ಲಿ ಉಳಿಸಿಕೊಳ್ಳಲಾಗಿರುವ ಹೆಸರಿನ ಆಧಾರದ ಮೇಲೆ ನಂಬರ್​ನ ಗುರುತನ್ನು ಹೆಕ್ಕಿ ತೆಗೆದು ತೋರಿಸುತ್ತದೆ. ಇದೇ ಕಾರಣಕ್ಕೆ ಟ್ರೂಕಾಲರ್ ಜನಪ್ರಿಯವಾಗಿದೆ. ಟ್ರೂಕಾಲರ್​ನ ಶೇ. 75ರಷ್ಟು ಬಳಕೆದಾರರು ಭಾರತೀಯರೇ ಆಗಿದ್ದಾರೆ. ಅದರ ಹೆಚ್ಚಿನ ಆದಾಯ ಭಾರತದಿಂದಲೇ ಬರುತ್ತದೆ.

ಜಾಹೀರಾತು, ಸಬ್​ಸ್ಕ್ರಿಪ್ಷನ್ ಶುಲ್ಕಗಳು ಟ್ರೂಕಾಲರ್​ನ ಆದಾಯ ಮಾರ್ಗಗಳಾಗಿವೆ. ಕಾಲರ್ ಐಡಿ ನೀಡುವುದು ಅದರ ಒಂದು ಪ್ರಮುಖ ಸೇವೆ. ಒಂದು ವೇಳೆ ಟೆಲಿಕಾಂ ಕಂಪನಿಗಳೇ ಈ ಸೇವೆ ನೀಡಿಬಿಟ್ಟರೆ ಜನರು ಟ್ರೂಕಾಲರ್ ಬಳಸುವುದನ್ನೇ ನಿಲ್ಲಿಸಬಹುದು. ಇದರಿಂದ ಭಾರತದಲ್ಲಿ ಅದರ ಆದಾಯಕ್ಕೆ ಸಂಚಕಾರ ಬರಬಹುದು ಎನ್ನಲಾಗಿದೆ.

ಇದನ್ನೂ ಓದಿ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಛೇರ್ಮನ್ ಸ್ಥಾನದಿಂದ ವಿಜಯ್ ಶೇಖರ್ ಶರ್ಮಾ ಹೊರಕ್ಕೆ; ಬ್ಯಾಂಕ್ ಮಂಡಳಿ ಪುನಾರಚನೆ

ನಮಗೇನೂ ಆಗಲ್ಲ ಎನ್ನುವ ಟ್ರೂಕಾಲರ್

ಸಿಎನ್​ಎಪಿ ಫೀಚರ್ ಅಳವಡಿಕೆಗೆ ಟ್ರಾಯ್ ಸಲ್ಲಿಸಿರುವ ಪ್ರಸ್ತಾವದ ಬಗ್ಗೆ ಟ್ರೂಕಾಲರ್ ಪ್ರತಿಕ್ರಿಯಿಸಿರುವುದನ್ನು ಮಿಂಟ್ ಪತ್ರಿಕೆಯ ವರದಿಯಲ್ಲಿ ತೋರಿಸಲಾಗಿದೆ. ಟ್ರಾಯ್ ನಿರ್ಧಾರವನ್ನು ಅದು ಸ್ವಾಗತಿಸಿದೆ. ‘ಟ್ರೂಕಾಲರ್ ಕೇವಲ ನಂಬರ್ ಗುರುತು ಸೇವೆ ಮಾತ್ರವೇ ನೀಡುತ್ತಿಲ್ಲ. ಅದಕ್ಕೂ ಹೆಚ್ಚಿನ ಸೇವೆ ನೀಡುತ್ತಿದೆ. ಟ್ರಾಯ್ ಮಾಡಿರುವ ಶಿಫಾರಸುಗಳು ಭಾರತದಲ್ಲಿ ನಮ್ಮ ಬೆಳವಣಿಗೆಗೆ ಪೂರಕವಾಗಿರುತ್ತವೆ,’ ಎಂದು ಹೇಳಿದೆ.

ಕೆಲ ಉದ್ಯಮ ಪರಿಣಿತರ ಪ್ರಕಾರ, ಸಿಎನ್​ಎಪಿ ಫೀಚರ್ ಜಾರಿಗೆ ಬಂದರೂ ಟೆಲಿಕಾಂ ಕಂಪನಿಗಳಿಗೆ ಟ್ರೂಕಾಲರ್​ನಷ್ಟು ನಿಖರವಾಗಿ ಮಾಹಿತಿ ಕೊಡಲು ಸಾಧ್ಯವಾಗದೇ ಹೋಗಬಹುದು. ಹೀಗಾಗಿ, ಟ್ರೂಕಾಲರ್ ಬಿಸಿನೆಸ್​ಗೆ ಹೆಚ್ಚಿನ ಧಕ್ಕೆ ಆಗದೇ ಇರಬಹುದು.

ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ