ಅಪರಿಚಿತ ಕರೆಗಳನ್ನು ಪತ್ತೆ ಹಚ್ಚುವುದರ ಮೂಲಕ ಸಾಕಷ್ಟು ಪ್ರಸಿದ್ಧಿ ಪಡೆದಿರುವ ಟ್ರೂ ಕಾಲರ್ ಆಪ್ಲಿಕೇಷನ್ ಈ ವರ್ಷ ದಾಖಲಾದ ಅತಿ ಹೆಚ್ಚು ಸ್ಪ್ಯಾಮ್ ಕರೆಗಳ ವಿವರವನ್ನು ಬಹಿರಂಗ ಪಡಿಸಿದೆ. ಇದರಲ್ಲಿ ಅಚ್ಚರಿಯ ಮಾಹಿತಿಯೊಂದು ಹೊರಬಿದ್ದಿದೆ. ಟ್ರೂ ಕಾಲರ್ ಪ್ರಕಾರ, ಅತಿ ಹೆಚ್ಚು ಸ್ಪ್ಯಾಮ್ ಕರೆ ಮಾಡಿದ ದೇಶಗಳ ಪಟ್ಟಿಯಲ್ಲಿ ಭಾರತ 4ನೇ ಸ್ಥಾನವನ್ನು ಪಡೆದುಕೊಂಡಿದೆ.
ಈ ಮೂಲಕ ಭಾರತದಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಸ್ಪ್ಯಾಮ್ ಕರೆಗಳ ಪರಿಣಾಮ ಹೆಚ್ಚಾಗಿದೆ. ಅಲ್ಲದೆ ಈ ವರ್ಷ ಭಾರತದಲ್ಲಿ ಕೇವಲ ಒಂದು ಸ್ಪ್ಯಾಮರ್ನಿಂದ ಬರೋಬ್ಬರಿ 202 ಮಿಲಿಯನ್ ಸ್ಪ್ಯಾಮ್ ಕರೆಗಳು ಬಂದಿವೆಯಂತೆ. ಅದು ಪ್ರತಿದಿನ 6,64,000 ಕ್ಕೂ ಹೆಚ್ಚು ಮತ್ತು ಪ್ರತಿದಿನ ಪ್ರತಿ ಗಂಟೆಗೆ 27,000 ಸ್ಪ್ಯಾಮ್ ಕರೆಗಳು ಬಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಟ್ರೂ ಕಾಲರ್ನ ಹೊಸ ವರದಿಯು ಸ್ಪ್ಯಾಮ್ ಕರೆಗಳು ಮತ್ತು ಜಗತ್ತಿನಾದ್ಯಂತ ಅದರ ಪರಿಣಾಮಗಳ ಕುರಿತು ನಡೆಸಿದ ಅಧ್ಯಯನದಿಂದ ಭಾರತದಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಸ್ಪ್ಯಾಮ್ ಕರೆಗಳ ಪರಿಣಾಮ ಹೆಚ್ಚಾಗಿದೆ ಎಂದು ತೋರಿಸಿದೆ.
2020ರಲ್ಲಿ ಒಂಭತ್ತನೇ ಸ್ಥಾನದಲ್ಲಿದ್ದ ಭಾರತ ಈಗ ಬ್ರೆಜಿಲ್, ಪೆರು ಮತ್ತು ಉಕ್ರೇನ್ ನಂತರದ ನಾಲ್ಕನೇ ಸ್ಥಾನದಲ್ಲಿದೆ. ಪ್ರತಿ ಬಳಕೆದಾರರಿಗೆ ತಿಂಗಳಿಗೆ ಸರಾಸರಿ 32.9 ಸ್ಪ್ಯಾಮ್ ಕರೆಗಳೊಂದಿಗೆ ಬ್ರೆಜಿಲ್ ಅಗ್ರಸ್ಥಾನದಲ್ಲಿದೆ, ಪೆರುವಿನಲ್ಲಿ ಪ್ರತಿ ಬಳಕೆದಾರರಿಗೆ ತಿಂಗಳಿಗೆ 18.02 ಕರೆಗಳಿಗಿಂತ ಹೆಚ್ಚಿನ ಸಂಖ್ಯೆ ಪಡೆದು ಇದು ಎರಡನೇ ಸ್ಥಾನದಲ್ಲಿದೆ.
ಮಾರಾಟ ಮತ್ತು ಟೆಲಿಮಾರ್ಕೆಟಿಂಗ್ ಕರೆಗಳ ಸಂಖ್ಯೆಯಲ್ಲಿನ ಹೆಚ್ಚಳದಿಂದಾಗಿ ಈ ಪಟ್ಟಿಯಲ್ಲಿ ಭಾರತದಲ್ಲಿ ಸ್ಪ್ಯಾಮ್ ಕರೆಗಳಲ್ಲಿ ಏರಿಕೆಯಾಗಿದೆ. ಈ ವರ್ಷ ಎಲ್ಲಾ ವರ್ಗಗಳ ಮಾರಾಟ-ಸಂಬಂಧಿತ ಕರೆಗಳಲ್ಲಿ ಬಹುಪಾಲು ಇನ್ ಕಮಿಂಗ್ ಸ್ಪ್ಯಾಮ್ ಕರೆಗಳೇ(93.5 ಪ್ರತಿಶತ) ಆಗಿವೆ. ಹಣಕಾಸು ಸೇವೆಗಳ ಸ್ಪ್ಯಾಮ್ ಕರೆಗಳು ಶೇಕಡಾ 3.1ರಷ್ಟಿದ್ದರೆ, ಕಿರಿಕಿರಿ ಉಂಟು ಮಾಡುವ ಕರೆಗಳು ಮತ್ತು ಸ್ಕ್ಯಾಮ್ ಕರೆಗಳು ಕ್ರಮವಾಗಿ ಶೇಕಡಾ 2 ಮತ್ತು 1.4 ಶೇಕಡಾ ಇದೆ.
ಈಗಾಗಲೇ ಇದನ್ನು ತಡೆಗಟ್ಟಲು ಇಂಟರ್ನೆಟ್ ದಿಗ್ಗಜ ಗೂಗಲ್, ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಬಳಕೆದಾರರಿಗೆ ನೂತನ ಆಯ್ಕೆಯೊಂದನ್ನು ಪರಿಚಯಿಸಿದೆ. ಟ್ರೂಕಾಲರ್ ಮಾದರಿಯಲ್ಲೇ ಆಂಡ್ರಾಯ್ಡ್ ಬಳಕೆದಾರರು ಸ್ಪಾಮ್ ಕರೆಗಳನ್ನು ನಿಯಂತ್ರಿಸಬಹುದು ಮತ್ತು ಬೇಡವಾದ ಕರೆಗಳನ್ನು ತಿರಸ್ಕರಿಸುವ ಆಯ್ಕೆಯನ್ನು ನೀಡಿದೆ.
ಈ ವೆರಿಫೈಡ್ ಕಾಲ್ನಲ್ಲಿ ಆಂಡ್ರಾಯ್ಡ್ ಬಳಕೆದಾರರು ಕರೆ ಮಾಡಿದವರ ಹೆಸರು, ಲೋಗೋ ಮತ್ತು ಕಂಪನಿಯ ಕರೆಯಾಗಿದ್ದಲ್ಲಿ, ಕರೆ ಮಾಡಿರುವ ಕಾರಣವನ್ನು ತಿಳಿದುಕೊಳ್ಳಬಹುದು. ಅದನ್ನು ಗೂಗಲ್ ದೃಢೀಕರಿಸಿದ್ದರೆ ನಿಮಗೆ ಮಾಹಿತಿ ದೊರೆಯುತ್ತದೆ.
ನಕಲಿಯಾಗಿದ್ದರೆ ಅಲ್ಲಿಯೇ ಸ್ಪಾಮ್ ಕರೆ ಅಲರ್ಟ್ ತೋರಿಸುವುದರಿಂದ, ಅನಗತ್ಯ ಕರೆಗಳ ಸಮಸ್ಯೆಯಿಂದ ಪಾರಾಗಲು ಈ ಆಯ್ಕೆ ಸೂಕ್ತವೆನಿಸಲಿದೆ. ಗೂಗಲ್ ಫೋನ್ ಆಪ್ಲಿಕೇಶನ್ನಲ್ಲಿ ಮಾತ್ರ ಈ ಆಯ್ಕೆ ದೊರೆಯಲಿದೆ.