ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ (WhatsApp) ವಿನೂತನವಾದ ಅಪ್ಡೇಟ್ ಮೂಲಕ ಸುದ್ದಿಯಾಗುತ್ತಲೇ ಇದೆ. ಈಗೀಗ ಒಮ್ಮೆಲೆ 4,5 ಹೊಸ ಹೊಸ ಆಯ್ಕೆಯನ್ನು ನೀಡುತ್ತಿರುವ ವಾಟ್ಸ್ಆ್ಯಪ್ನಲ್ಲಿ ಸಾಲು ಸಾಲು ಅಪ್ಡೇಟ್ಗಳು ಬರಲು ತಯಾರಾಗಿ ನಿಂತಿದೆ. ಇತ್ತೀಚೆಗಷ್ಟೆ ವಾಟ್ಸ್ಆ್ಯಪ್ ಶೀಘ್ರದಲ್ಲಿ ತನ್ನ ಆಂಡ್ರಾಯ್ಡ್ (Android) ಮತ್ತು ಐಒಎಸ್ ಬಳಕೆದಾರರಿಗೆ ಫೋಟೋ, ವಿಡಿಯೋ ಮತ್ತು ಜಿಫ್ ಫೈಲ್ಗಳನ್ನು ಫಾರ್ವರ್ಡ್ ಮಾಡುವಾಗ ಅದರ ಜೊತೆಗಿದ್ದ ಅಡಿಬರಹ ಕೂಡ ಸೆಂಡು ಆಗುವ ಆಯ್ಕೆಯನ್ನು ಅಭಿವೃದ್ದಿ ಪಡಿಸುತ್ತಿರುವ ಬಗ್ಗೆ ತಿಳಿಸಿತ್ತು. ಇದೀಗ ನಿಮ್ಮ ನಂಬರ್ಗೆ ನೀವೇ ಮೆಸೇಜ್ ಮಾಡಬಹುದಾದ ಆಯ್ಕೆಯನ್ನು ವಾಟ್ಸ್ಆ್ಯಪ್ ನೀಡಲು ಮುಂದಾಗಿದೆ.
ವಾಟ್ಸ್ಆ್ಯಪ್ ತನ್ನ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಮೆಸೇಜ್ ವಿಥ್ ಯುವರ್ಸೆಲ್ಫ್ ಎಂಬ ಹೊಸ ಫೀಚರ್ ಅನ್ನು ಪರಿಚಯಿಸುವ ಬಗ್ಗೆ ಕೆಲಸ ಮಾಡುತ್ತಿದೆ. ಸದ್ಯಕ್ಕೆ ಬೀಟಾ ವರ್ಷನ್ನಲ್ಲಿ ಈ ಆಯ್ಕೆ ಕಾಣಿಸಿಕೊಂಡಿದೆ. ವಾಟ್ಸ್ಆ್ಯಪ್ನಲ್ಲಿ ನಿಮಗೆ ನೀವೇ ಮೆಸೇಜ್ ಮಾಡಲು ಈಗಲು ಸಾಧ್ಯವಿದೆ. ಆದರೆ, ಅದು ಗ್ರೂಪ್ ಒಂದನ್ನು ರಚಿಸಿ ನೀವೊಬ್ಬರೆ ಆ ಗ್ರೂಪ್ನ ಸದಸ್ಯರಾಗಿ ಮೆಸೇಜ್ ಮಾಡಬಹುದು. ಆದರೀಗ ವಾಟ್ಸ್ಆ್ಯಪ್ ನೀಡಲಿರುವ ಈ ಹೊಸ ಆಯ್ಕೆಯಲ್ಲಿ ಕಾಂಟೆಕ್ಟ್ ಲಿಸ್ಟ್ನಲ್ಲಿ ಬೇರೆಯವರ ನಂಬರ್ ಜೊತೆ ನಿಮ್ಮ ನಂಬರ್ ಕೂಡ ಕಾಣಲಿದೆ. ಆ ನಂಬರ್ ಮೇಲೆ ಕ್ಲಿಕ್ ಮಾಡಿದರೆ ಚಾಟ್ ಬಾಕ್ಸ್ ಕೂಡ ತೆರೆಯಲಿದ್ದು ಆಗ ನಿಮಗೆ ನೀವೇ ಮಸೇಜ್ ಮಾಡಬಹುದಾಗಿದೆ.
ಇನ್ನು ವಾಟ್ಸ್ಆ್ಯಪ್ನಲ್ಲಿ ನಮಗೆ ಬಂದ ಫೋಟೋ, ವಿಡಿಯೋ ಅಥವಾ ಜಿಫ್ ಫೈಲ್ಗಳನ್ನು ಬೇರೆಯವರಿಗೆ ಕಳುಹಿಸುವಾಗ ಅದರ ಜೊತೆಗಿದ್ದ ಕಾಪ್ಷನ್ ಸೆಂಡು ಆಗುವುದಿಲ್ಲ. ಕೇವಲ ಆ ಫೈಲ್ ಮಾತ್ರ ಫಾರ್ವರ್ಡ್ ಆಗುತ್ತದೆ. ಆದರೆ ವಾಟ್ಸ್ಆ್ಯಪ್ ನೂತನ ಅಪ್ಡೇಟ್ ನೀಡಲು ಸಜ್ಜಾಗಿದ್ದು, ಇದರ ಮೂಲಕ ನೀವು ಫೋಟೋ, ವಿಡಿಯೋ ಅಥವಾ ಜಿಫ್ ಫೈಲ್ಗಳನ್ನು ಫಾರ್ವರ್ಡ್ ಮಾಡುವಾಗ ಅದರ ಜೊತೆಗಿದ್ದ ಅಡಿ ಬರಹ ಕೂಡ ಸೆಂಡ್ ಆಗುತ್ತದೆ. ಸದ್ಯಕ್ಕೆ ಈ ಆಯ್ಕೆ ಕೆಲ ಆಂಡ್ರಾಯ್ಡ್ ಬೀಟಾ ಬಳಕೆದಾರರಿಗೆ ಲಭ್ಯವಾಗುತ್ತಿದೆ.
ಅಂತೆಯೆ ವಾಟ್ಸ್ಆ್ಯಪ್ನಲ್ಲಿ ಫೋಟೋ, ವಿಡಿಯೋ ಮತ್ತು ಜಿಫ್ ಫೈಲ್ಗಳನ್ನು ಅಡಿ ಬರಹ ನೀಡಿ ಕಳುಹಿಸಬಹುದು ಎಂಬುದು ಗೊತ್ತಿದೆ. ಆದರೆ, ಡಾಕ್ಯುಮೆಂಟ್ ಕಳುಹಿಸುವಾಗ ಈ ಆಯ್ಕೆ ಕಾಣಿಸುವುದಿಲ್ಲ. ಇದೀಗ ವಾಟ್ಸ್ಆ್ಯಪ್ ತನ್ನ ನೂತನ ಅಪ್ಡೇಟ್ನಲ್ಲಿ ಡಾಕ್ಯುಮೆಂಟ್ ಕಳುಹಿಸುವಾಗಲೂ ಕಾಪ್ಷನ್ ಆಯ್ಕೆ ನೀಡಲಿದೆ. ಈ ಮೂಲಕ ಕಳುಹಿಸಿದ ಅಥವಾ ರಿಸೀವ್ ಮಾಡಿಕೊಂಡ ಡಾಕ್ಯುಮೆಂಟ್ ಅನ್ನು ಸರ್ಚ್ ಮಾಡುವ ಮೂಲಕ ಪಡೆದುಕೊಳ್ಳಲು ಇದು ಸಹಾಯ ಮಾಡುತ್ತದೆ.