ಮಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ಪ್ರತಿ ದಿನ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತದೆ. ಮೊನ್ನೆಯಷ್ಟೆ ಭಾರತ ಸೇರಿದಂತೆ ಕೆಲ ದೇಶಗಳಲ್ಲಿ ಎರಡು ಗಂಟೆಗಳ ಕಾಲ ವಾಟ್ಸ್ಆ್ಯಪ್ ಸ್ಥಗಿತಗೊಂಡಿದ್ದು ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇಲ್ಲವಾದಲ್ಲಿ ಹೊಸ ಹೊಸ ಫೀಚರ್ಗಳನ್ನು ಪರಿಚಯಿಸುವುದರ ಬಗ್ಗೆ ವಾಟ್ಸ್ಆ್ಯಪ್ನಿಂದ (WhatsApp) ಮಾಹಿತಿ ಹರಿದಾಡುತ್ತಿರುತ್ತದೆ. ಇದೀಗ ಅದೇರೀತಿಯ ಸುದ್ದಿಯೊಂದು ಹೊರಬಿದ್ದಿದೆ. ವಾಟ್ಸ್ಆ್ಯಪ್ ಶೀಘ್ರದಲ್ಲಿ ತನ್ನ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಅಚ್ಚರಿಯ ಫೀಚರ್ ಅನ್ನು ಪರಿಚಯಿಸುತ್ತಿದೆ. ಈಗ ವಾಟ್ಸ್ಆ್ಯಪ್ನಲ್ಲಿ ಫೋಟೋ, ವಿಡಿಯೋ ಮತ್ತು ಜಿಫ್ ಫೈಲ್ಗಳನ್ನು ಫಾರ್ವರ್ಡ್ ಮಾಡುವಾಗ ಅದರ ಜೊತೆಗಿದ್ದ ಅಡಿಬರಹ (Caption) ಸೆಂಡು ಆಗುವುದಿಲ್ಲ. ಆದರೆ, ಈ ಆಯ್ಕೆ ಸದ್ಯದಲ್ಲೇ ಬದಲಾಗಲಿದೆ.
ವಾಟ್ಸ್ಆ್ಯಪ್ನಲ್ಲಿ ನಮಗೆ ಬಂದ ಫೋಟೋ, ವಿಡಿಯೋ ಅಥವಾ ಜಿಫ್ ಫೈಲ್ಗಳನ್ನು ಬೇರೆಯವರಿಗೆ ಕಳುಹಿಸುವಾಗ ಅದರ ಜೊತೆಗಿದ್ದ ಕಾಪ್ಷನ್ ಸೆಂಡು ಆಗುವುದಿಲ್ಲ. ಕೇವಲ ಆ ಫೈಲ್ ಮಾತ್ರ ಫಾರ್ವರ್ಡ್ ಆಗುತ್ತದೆ. ಆದರೆ ವಾಟ್ಸ್ಆ್ಯಪ್ ಈಗ ನೂತನ ಅಪ್ಡೇಟ್ ನೀಡಲು ಸಜ್ಜಾಗಿದ್ದು, ಇದರ ಮೂಲಕ ನೀವು ಫೋಟೋ, ವಿಡಿಯೋ ಅಥವಾ ಜಿಫ್ ಫೈಲ್ಗಳನ್ನು ಫಾರ್ವರ್ಡ್ ಮಾಡುವಾಗ ಅದರ ಜೊತೆಗಿದ್ದ ಅಡಿ ಬರಹ ಕೂಡ ಸೆಂಡ್ ಆಗುತ್ತದೆ. ಸದ್ಯಕ್ಕೆ ಈ ಆಯ್ಕೆ ಕೆಲ ಆಂಡ್ರಾಯ್ಡ್ ಬೀಟಾ ಬಳಕೆದಾರರಿಗೆ ಲಭ್ಯವಾಗುತ್ತಿದೆ.
ಅಂತೆಯೆ ವಾಟ್ಸ್ಆ್ಯಪ್ನಲ್ಲಿ ಫೋಟೋ, ವಿಡಿಯೋ ಮತ್ತು ಜಿಫ್ ಫೈಲ್ಗಳನ್ನು ಅಡಿ ಬರಹ ನೀಡಿ ಕಳುಹಿಸಬಹುದು ಎಂಬುದು ಗೊತ್ತಿದೆ. ಆದರೆ, ಡಾಕ್ಯುಮೆಂಟ್ ಕಳುಹಿಸುವಾಗ ಈ ಆಯ್ಕೆ ಕಾಣಿಸುವುದಿಲ್ಲ. ಇದೀಗ ವಾಟ್ಸ್ಆ್ಯಪ್ ತನ್ನ ನೂತನ ಅಪ್ಡೇಟ್ನಲ್ಲಿ ಡಾಕ್ಯುಮೆಂಟ್ ಕಳುಹಿಸುವಾಗಲೂ ಕಾಪ್ಷನ್ ಆಯ್ಕೆ ನೀಡಲಿದೆ. ಈ ಮೂಲಕ ಕಳುಹಿಸಿದ ಅಥವಾ ರಿಸೀವ್ ಮಾಡಿಕೊಂಡ ಡಾಕ್ಯುಮೆಂಟ್ ಅನ್ನು ಸರ್ಚ್ ಮಾಡುವ ಮೂಲಕ ಪಡೆದುಕೊಳ್ಳಲು ಇದು ಸಹಾಯ ಮಾಡುತ್ತದೆ.
ಇನ್ನು ವಾಟ್ಸ್ಆ್ಯಪ್ ತನ್ನ ಡೆಸ್ಕ್ಟಾಪ್ ಬಳಕೆದಾರರಿಗಾಗಿ ಚಾಟ್ನಲ್ಲಿ ಫೋಟೋವನ್ನು ಬ್ಲರ್ ಮಾಡಲು ಇಮೇಜ್ ಬ್ಲರ್ ಎಂಬ ವಿಶೇಷ ಟೂಲ್ ನೀಡುವ ಕೆಲಸದಲ್ಲಿ ಬ್ಯುಸಿಯಾಗಿದೆ. ವಾಟ್ಸ್ಆ್ಯಪ್ ಡೆಸ್ಕ್ಟಾಪ್ ಬೀಟಾದಲ್ಲಿ ಇದು ಕಂಡುಬಂದಿದ್ದು, ಸೂಕ್ಷವಾದ ವಿಚಾರಗಳಲ್ಲಿ, ಫೋಟೋವನ್ನು ಬ್ಲರ್ ಮಾಡಲು ಈ ಟೂಲ್ ಸಹಾಯ ಮಾಡಲಿದೆ. ಇದರಲ್ಲಿ ಬ್ಲರ್ ಸೈಜ್, ಎಫೆಕ್ಟ್ ಕೂಡ ಇರಲಿದೆ ಎಂದು ಹೇಳಲಾಗಿದೆ. ಈ ಮೂಲಕ ಅತಿ ಸೂಕ್ಷವಾದ ವಿಚಾರವನ್ನು ನೀವು ವಾಟ್ಸ್ಆ್ಯಪ್ನಲ್ಲಿ ಇತರರಿಗೆ ಕಳುಹಿಸುವಾಗ ಬ್ಲರ್ ಮಾಡಿ ಸೆಂಡು ಮಾಡಬಹುದು.
ಇಷ್ಟೇ ಅಲ್ಲದೆ ವಾಟ್ಸ್ಆ್ಯಪ್ ತನ್ನ ಮುಂದಿನ ಅಪ್ಡೇಟ್ನಲ್ಲಿ ಕಳುಹಿಸಿದ ಮೆಸೇಜ್ ಅನ್ನು ಎಡಿಟ್ ಮಾಡುವ ಆಯ್ಕೆ ನೀಡಲಿದೆ. ಈ ಬಗ್ಗೆ ವಾಬೇಟಾಇನ್ಫೊ ವರದಿ ಮಾಡಿದ್ದು, ವಾಟ್ಸ್ಆ್ಯಪ್ ಸದ್ಯದಲ್ಲೇ ಎಡಿಟ್ ಮೆಸೇಜ್ ಆಯ್ಕೆಯನ್ನು ನೀಡಲಿದೆ ಎಂದು ಹೇಳಿದೆ. ಬಳಕೆದಾರರು ಇತರರಿಗೆ ಮೆಸೇಜ್ ಮಾಡುವ ಸಂದರ್ಭ ಅಕ್ಷರ ತಪ್ಪಿ ಸೆಂಡ್ ಮಾಡಿದ್ದರೆ ಪುನಃ ಅದನ್ನು ಸರಿಗೊಳಿಸಲು ಇದು ಸಹಕಾರಿ ಮಾಡಲಿದೆ. ಸದ್ಯಕ್ಕೆ ಈ ಆಯ್ಕೆ ಆಂಡ್ರಾಯ್ಡ್ ಬೇಟಾ ವರ್ಷನ್ನಲ್ಲಿ ಲಭ್ಯವಿದೆ. ಈಗಾಗಲೇ ಇರುವ ಡಿಲೀಟ್ ಫಾರ್ ಎವರಿವನ್ ಆಯ್ಕೆ ಸಂಪೂರ್ಣ ಮೆಸೇಜ್ ಅನ್ನು ಡಿಲೀಟ್ ಮಾಡುತ್ತದೆ. ಆದರೆ, ಈ ಎಡಿಟ್ ಆಯ್ಕೆಯಲ್ಲಿ ಮೆಸೇಜ್ ಅನ್ನು ಡಿಲೀಟ್ ಮಾಡುವ ಬದಲು ಅಕ್ಷರವನ್ನು ಸರಿಪಡಿಸುವುದಾಗಿದೆ.