Viral Video: ಮುಂಬೈನ ಕೊಳಗೇರಿಯ 14ರ ಬಾಲಕಿ ‘ಫಾರೆಸ್ಟ್​ ಎಸೆನ್ಷಿಯಲ್’​ ಮಾಡೆಲ್

| Updated By: ಶ್ರೀದೇವಿ ಕಳಸದ

Updated on: May 22, 2023 | 4:05 PM

Dharavi Slum : 'ಈ ಉತ್ಪನ್ನದ ಮೂಲಕ ಮಲೀಶಾಳ ಕನಸುಗಳನ್ನು ಬೆಂಬಲಿಸುತ್ತಿದ್ದೇವೆ. ಅಷ್ಟೇ ಅಲ್ಲ ಆದಾಯದ ಕೆಲಭಾಗವನ್ನು ಹಿಂದುಳಿದ ಕುಟುಂಬಗಳಲ್ಲಿರುವ ಮಕ್ಕಳ ಶೈಕ್ಷಣಿಕ ಏಳ್ಗೆಗಾಗಿ ಮೀಸಲಿಡಲಿದ್ದೇವೆ’ ಮೀರಾ ಕುಲಕರ್ಣಿ.

Viral Video: ಮುಂಬೈನ ಕೊಳಗೇರಿಯ 14ರ ಬಾಲಕಿ ಫಾರೆಸ್ಟ್​ ಎಸೆನ್ಷಿಯಲ್​ ಮಾಡೆಲ್
ಮಲೀಶಾ ಖಾರ್ವಾ
Follow us on

Mumbai : ಸಾಮಾನ್ಯವಾಗಿ ತಮ್ಮ ಉತ್ಪನ್ನದ ಪ್ರಚಾರಕ್ಕೆ ಸೆಲೆಬ್ರಿಟಿಗಳನ್ನು ಮಾಡೆಲ್​ಗಳನ್ನಾಗಿ, ಅಂಬಾಸಿಡರ್​ಗಳನ್ನಾಗಿ ನೇಮಿಸಿಕೊಳ್ಳುತ್ತಾರೆ. ಹೀಗೆ ಆಯ್ಕೆಯಾಗುವ ಸೆಲೆಬ್ರಿಟಿಗಳೆಂದ ಮೇಲೆ ಸಿನೆಮಾ, ಕ್ರೀಡೆ ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರೇ ಹೆಚ್ಚು.  ಅದರಲ್ಲಿಯೂ ಸೌಂದರ್ಯದ ಮಾನದಂಡಗಳಾದ ತೆಳ್ಳಗೆ, ಬೆಳ್ಳಗೆ, ಆಕರ್ಷಕ ಮೈಕಟ್ಟಿನ ಮತ್ತು ನಗರಸಂಸ್ಕೃತಿಯನ್ನು ಬಲ್ಲವರಿಗೇ ಆದ್ಯತೆ. ಆದರೆ ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಮುಂಬೈನ ಧಾರಾವಿಯ ಕೊಳಗೇರಿಯ 14 ವರ್ಷದ ಮಲೀಶಾ ಖಾರ್ವಾ (Maleesha Kharva) ಸೌಂದರ್ಯವರ್ಧಕ ಬ್ರ್ಯಾಂಡ್​ ಒಂದರ ಮಾಡೆಲ್ ಆಗಿ ಹೊಮ್ಮಿದ್ದಾಳೆ.

ಫಾರೆಸ್ಟ್​ ಎಸೆನ್ಷಿಯಲ್ಸ್​ (Forest Essentials) ನ ‘ಯುವತಿ ರಿಚುವಲ್ ಬಾಕ್ಸ್’​ ಗೆ ಮಾಡೆಲ್ ಆಗಿರುವ ಮಲೀಶಾಳ ಫೋಟೋ ಏಪ್ರಿಲ್​ನಲ್ಲಿ ಬಿಡುಗಡೆಯಾಗಿತ್ತು. ಇದೀಗ ಈ ಉತ್ಪನ್ನದ ಮೊದಲ ವಿಡಿಯೋ ಅನ್ನು ಕಂಪೆನಿ ತನ್ನ ಇನ್​ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಂಡಿದೆ. ಅನೇಕರು ಈ ಪೋಸ್ಟ್​ಗೆ ಪ್ರತಿಕ್ರಿಯಿಸಿ, ಬಹುಶಃ ಮಲೀಶಾಗೋಸ್ಕರ ನಾನು ಈ ಪ್ರಾಡಕ್ಟ್​ ಅನ್ನು ಖರೀದಿಸಲಿದ್ದೇನೆ ಎಂದಿದ್ದಾರೆ.

2020 ರಲ್ಲಿ ಹಾಲಿವುಡ್ ನಟ ರಾಬರ್ಟ್ ಹಾಫ್‌ಮನ್ ತಮ್ಮ ಸ್ಟೆಪ್​ ಅಪ್​ 2 ಸಿನೆಮಾದ ಪ್ರಮುಖ ಪಾತ್ರಕ್ಕಾಗಿ ಹುಡುಕಾಟದಲ್ಲಿದ್ದಾಗ ಅವರಿಗೆ ಮಲೀಶಾ ಮುಂಬೈನಲ್ಲಿ ಸಿಕ್ಕಳು. ಅವಳಿಗಾಗಿ ಫಂಡ್​ ಮೀ ಎಂಬ ಪೇಜ್​ ಅನ್ನು ಸಾಮಾಜಿಕ ಜಾಲತಾಣದಲ್ಲಿ ಸೃಷ್ಟಿಸಿದರು. ಆನಂತರ ಮಲೀಶಾ ಸಾಕಷ್ಟು ಮಾಡೆಲಿಂಗ್​ ಇವೆಂಟ್​ಗಳಲ್ಲಿ ಪಾಲ್ಗೊಂಡಳು. ಅಲ್ಲದೆ ಇತ್ತೀಚೆಗೆ ಬಿಡುಗಡೆಯಾದ ‘ಲಿವ್​ ಯುವರ್​ ಫೇರಿಟೇಲ್’​ ಎಂಬ ಕಿರುಚಿತ್ರದಲ್ಲಿಯೂ ನಟಿಸಿದಳು. ಇದೀಗ ಈ ಉತ್ಪನ್ನಕ್ಕೆ ಮಾಡೆಲ್ ಆಗುವ ಮೂಲಕ ಮತ್ತೀಗ ಸುದ್ದಿಯಲ್ಲಿದ್ದಾಳೆ.

ಇದನ್ನೂ ಓದಿ : Viral Video: ಈಕೆಯ ಆತ್ಮವಿಶ್ವಾಸವನ್ನು ಗೌರವಿಸಲೇಬೇಕು ಎನ್ನುತ್ತಿರುವ ನೆಟ್ಟಿಗರು

ಫಾರೆಸ್ಟ್ ಎಸೆನ್ಷಿಯಲ್ಸ್‌ನ ಸಂಸ್ಥಾಪಕಿ ಮತ್ತು ಮುಖ್ಯ ವ್ಯವಸ್ಥಾಪಕ ನಿರ್ದೇಶಕಿ ಮೀರಾ ಕುಲಕರ್ಣಿ, ‘ಯುವತಿ ರಿಚುವಲ್​ ಬಾಕ್ಸ್’​ ಉತ್ಪನ್ನದ ಮೂಲಕ ನಾವು ಮಲೀಶಾಳ ಕನಸುಗಳನ್ನು ಬೆಂಬಲಿಸುತ್ತಿದ್ದೇವೆ. ಅಷ್ಟೇ ಅಲ್ಲ, ಯುವ ಮನಸ್ಸುಗಳನ್ನು ಸಶಕ್ತಗೊಳಿಸಲು ಹಮ್ಮಿಕೊಂಡಿರುವ ‘ಪ್ರಾಜೆಕ್ಟ್ ಪಾಠಶಾಲಾ’ ಗಾಗಿ ಶೇ. 10 ಆದಾಯವನ್ನು ಮೀಸಲಿಡುತ್ತಿದ್ದೇವೆ. ಈ ಮೂಲಕ ಹಿಂದುಳಿದ ಕುಟುಂಬಗಳ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಪ್ರೋತ್ಸಾಹಿಸಲಿದ್ಧೇವೆ.’ ಎಂದಿದ್ದಾರೆ.

ಉಳ್ಳವರ ಮಕ್ಕಳು ಸಹಜವಾಗಿ ಮೇಲೇರುತ್ತಾರೆ. ಆದರೆ ಇಂಥ ಮಕ್ಕಳೂ ಅರಳುವಂತಾಗಲಿ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:48 pm, Mon, 22 May 23