ಎಲ್ಲರಿಗೂ ಅವರದ್ದೇ ಆದ ಕನಸುಗಳಿರುತ್ತವೆ. ಇದಲ್ಲದೇ ಜೀವನದಲ್ಲಿ ಒಮ್ಮೆಯಾದರೂ ಟ್ರೈ ಮಾಡಬೇಕು ಎನ್ನುವ ವಿಕ್ಷಿಪ್ತ ಆಸೆಗಳೂ ಇರುತ್ತವೆ. ಇದನ್ನು ಜನರು ತಮ್ಮ ‘ಬಕೆಟ್ ಲಿಸ್ಟ್’ಗೆ ಸೇರಿಸಿಕೊಂಡಿರುತ್ತಾರೆ. ‘ಬಕೆಟ್ ಲಿಸ್ಟ್’ (Bucket List) ಎಂದರೆ ಜೀವನದಲ್ಲಿ ಮಾಡಬೇಕಾದ ಕಾರ್ಯಗಳ ಲೀಸ್ಟ್. ಇದೀಗ ಯುವತಿಯೋರ್ವಳು ತನ್ನ ವಿಚಿತ್ರ ಬಯಕೆಯನ್ನು ಈಡೇರಿಸಲು ಮುಂದಾಗಿ ಪೊಲೀಸರ ಅತಿಥಿಯಾಗಿದ್ದಾಳೆ. ಅದು ಯಾವ ಕೆಲಸ ಎಂದು ಯೋಚಿಸುತ್ತಿದ್ದೀರಾ? ಅಲ್ಲೇ ಇರೋದು ಟ್ವಿಸ್ಟ್! ಆ ಯುವತಿಯ ಆಸೆಯೇ ಜೀವನದಲ್ಲಿ ಒಮ್ಮೆಯಾದರೂ ಪೊಲೀಸರಿಂದ ಅರೆಸ್ಟ್ (Arrest) ಆಗಬೇಕು ಅನ್ನೋದು! ಕೊನೆಗೂ ತನ್ನ ಕನಸನ್ನು ಅವಳು ಈಡೇರಿಸಿಕೊಂಡಿದ್ದು ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾಳೆ. ಆದರೆ ಆ ಯುವತಿ ನೀಡಿದ ‘ಬಕೆಟ್ ಲಿಸ್ಟ್’ ಕಾರಣ ಕೇಳಿ ಪೊಲೀಸರು ದಂಗಾಗಿದ್ದಾರೆ. ಏನಿದು ಪ್ರಕರಣ? ಪೂರ್ಣ ವಿವರ ಇಲ್ಲಿದೆ ನೋಡಿ.
ಜಾನಿಯಾ ಶೈಮಿರಾಕಲ್ ಡೌಗ್ಲಾಸ್ 19 ವರ್ಷದ ಯುವತಿ. ಮೇ 12ರಂದು ಫ್ಲೋರ್ಡಿಯಾದ ಕಾರ್ಡ್ ಸೌಂಡ್ ರಸ್ತೆಯಲ್ಲಿ ಅತ್ಯಂತ ವೇಗವಾಗಿ ವಾಹನ ಚಾಲನೆ ಮಾಡಿದ ಕಾರಣದಿಂದ ಆಕೆಯನ್ನು ಬಂಧಿಸಲಾಗಿತ್ತು. ನಂತರ ಪೊಲೀಸರ ವಿಚಾರಣೆಯಲ್ಲಿ ಆಕೆ ತಪ್ಪೊಪ್ಪಿಕೊಂಡಿದ್ದು, ‘‘ನನ್ನ ‘ಬಕೆಟ್ ಲಿಸ್ಟ್’ನಲ್ಲಿ ಅರೆಸ್ಟ್ ಆಗಬೇಕು ಎನ್ನುವುದೂ ಇತ್ತು. ಹೀಗಾಗಿ ವೇಗವಾಗಿ ವಾಹನ ಚಾಲನೆ ಮಾಡಿ, ತಪ್ಪಿಸಿಕೊಳ್ಳಲು ಯತ್ನಿಸಿದೆ’’ ಎಂದಿದ್ದಾಳೆ.
ಅಚ್ಚರಿಯೆಂದರೆ ಹೈಸ್ಕೂಲ್ನಿಂದಲೇ ಈ ವಿಚಿತ್ರ ಆಸೆಯನ್ನು ಹೊಂದಿದ್ದಳಂತೆ ಡೌಗ್ಲಾಸ್. ಇದೀಗ ಆಕೆಯ ಆಸೆ ನೆರವೇರಿದೆ! ಆದರೆ ಪೊಲೀಸರು ಇದನ್ನು ಗಂಭೀರವಾಗಿಯೇ ಪರಿಗಣಿಸಿದ್ದಾರೆ. ವೇಗವಾಗಿ ವಾಹನ ಚಾಲನೆ ಹಾಗೂ ತಪ್ಪಿಸಿಕೊಳ್ಳಲು ಪ್ರಯತ್ನಪಟ್ಟ ಆರೋಪಗಳನ್ನು ಆಕೆಯ ಮೇಲೆ ಹೊರಿಸಲಾಗಿದೆ.
ಮನ್ರೋ ಕೌಂಟಿ ಶೆರಿಫ್ ಕಚೇರಿಯು ಯುವತಿಯ ಬಂಧನದ ಬಗ್ಗೆ ಮಾಹಿತಿ ನೀಡಿದೆ. ‘‘ಜಾನಿಯಾ ಶೈಮಿರಾಕಲ್ ಡೌಗ್ಲಾಸ್ ಹೈಸ್ಕೂಲ್ನಿಂದಲೂ ಅರೆಸ್ಟ್ ಆಗಬೇಕು ಎನ್ನುವುದನ್ನು ಬಕೆಟ್ ಲಿಸ್ಟ್ಗೆ ಸೇರಿಸಿಕೊಂಡಿದ್ದಳು. ಇದೀಗ ಪೊಲೀಸರು ಆಕೆಯನ್ನು ಅಜಾಗರೂಕ ಕಾರು ಚಾಲನೆ ಹಾಗೂ ತಪ್ಪಿಸಿಕೊಳ್ಳಲು ಪ್ರಯತ್ನಪಟ್ಟ ಆರೋಪದಡಿ ಬಂಧಿಸಿದ್ದಾರೆ’’ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ಕುರಿತ ಪೋಸ್ಟ್:
ಪ್ರಸ್ತುತ ಈ ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ. ಯುವತಿಯ ವಿಚಿತ್ರ ಬಯಕೆಯನ್ನು ನೋಡಿ ನೆಟ್ಟಿಗರು ಕಂಗಾಲಾಗಿದ್ದಾರೆ. ಒಬ್ಬರು ಪ್ರತಿಕ್ರಿಯಿಸಿ, ‘‘ಈ ಯುವತಿ ಬಂಧನವಾಗಿ, ಜಡ್ಜ್ ಮುಂದೆ ತೆರಳಿ ಕೊನೆಗೆ ದಂಡವನ್ನೂ ಕಟ್ಟುವ ಬಯಕೆಯನ್ನು ಏಕೆ ಹೊಂದಿದ್ದಳು? ವಿಚಿತ್ರವಾಗಿದೆ’’ ಎಂದು ಪ್ರತಿಕ್ರಿಯಿಸಿದ್ದಾರೆ.
‘‘25ನೇ ವರ್ಷದವರೆಗೆ ಮೆದುಳು ಸಂಪೂರ್ಣ ಬೆಳವಣಿಗೆಯಾಗಿರುವುದಿಲ್ಲ’’ ಎಂದು ಓರ್ವರು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ‘‘ಇಂತಹ ಹುಚ್ಚು ಆಸೆಗಳನ್ನು ಹೊಂದಿರುವುದು ಅಪಾಯಕಾರಿ. ಇಂತಹ ವಿಚಿತ್ರ ಆಸೆಗಳು ಮತ್ತೆಷ್ಟಿರಬಹುದು?’’ ಎಂದು ಮತ್ತೋರ್ವರು ಪ್ರತಿಕ್ರಿಯಿಸಿದ್ದಾರೆ. ಪ್ರಸ್ತುತ 19 ವರ್ಷದ ಡೌಗ್ಲಾಸ್ರನ್ನು ಜೈಲಿನಲ್ಲಿಡಲಾಗಿದೆ.
ಮತ್ತಷ್ಟು ಕುತೂಹಲಕರ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ | ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ