Guinness World Record: 3 ರುಬಿಕ್ಸ್ ಕ್ಯೂಬ್ಗಳೊಂದಿಗೆ ಕಸರತ್ತು ಮಾಡುತ್ತಲೇ ಅವನ್ನು ಜೋಡಿಸಿ ವಿಶ್ವದಾಖಲೆ ಬರೆದ ಯುವಕ; ಈ ವಿಡಿಯೋ ಮಿಸ್ ಮಾಡಲೇಬೇಡಿ
Rubik's Cubes | World Record: ಪ್ರತಿಭಾವಂತರು ರುಬಿಕ್ಸ್ ಕ್ಯೂಬ್‌ಗಳನ್ನು ವಿಶೇಷ ವಿಧಾನಗಳ ಮೂಲಕ ಜೋಡಿಸಿ ಎಲ್ಲರ ಹುಬ್ಬೇರಿಸುತ್ತಾರೆ. ಇದೀಗ ಗಿನ್ನೆಸ್ ದಾಖಲೆಗೆ ಹೊಸ ಮಾದರಿಯಲ್ಲಿ ರುಬಿಕ್ಸ್ ಕ್ಯೂಬ್ ಜೋಡಿಸಿ ದಾಖಲೆ ಬರೆದಿದ್ದಾನೆ ಕೊಲಂಬಿಯಾದ ಯುವಕ. ಏನಿದು ವಿಶೇಷ ಸಾಧನೆ ಅಂತೀರಾ?
ರುಬಿಕ್ಸ್ ಕ್ಯೂಬ್‌ಗಳನ್ನು ಜೋಡಿಸುವುದು ಒಂದು ಆಟವೂ ಹೌದು, ಕಲೆಯೂ ಹೌದು. ಪ್ರತಿಭಾವಂತರು ರುಬಿಕ್ಸ್ ಕ್ಯೂಬ್‌ಗಳನ್ನು (Rubik’s Cube) ವಿಶೇಷ ವಿಧಾನಗಳ ಮೂಲಕ ಜೋಡಿಸಿ ಎಲ್ಲರ ಹುಬ್ಬೇರಿಸುತ್ತಾರೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಜೋಡಿಸುವುದು ಅಥವಾ ಕ್ಯೂಬ್‌ಗಳನ್ನು ನೋಡದೇ ಅದನ್ನು ಸಾಲ್ವ್ ಮಾಡುವುದು ಹೀಗೆ. ಆದರೆ ಇದೀಗ ಹೊಸ ಮಾದರಿಯಲ್ಲಿ ರುಬಿಕ್ಸ್ ಕ್ಯೂಬ್ ಜೋಡಿಸಿ ಗಿನ್ನೆಸ್ ದಾಖಲೆ (Guinness World Records) ಬರೆದಿದ್ದಾನೆ ಕೊಲಂಬಿಯಾದ ಯುವಕ. ಏನಿದು ವಿಶೇಷ ಸಾಧನೆ ಅಂತೀರಾ? ಇಲ್ಲಿದೆ ನೋಡಿ. 3 ರುಬಿಕ್ಸ್ ಕ್ಯೂಬ್‌ಗಳನ್ನು 4 ನಿಮಿಷಗಳ ಅವಧಿಯಲ್ಲಿ ಆ ಯುವಕ ಜೋಡಿಸಿದ್ದಾನೆ. ಅದೂ ಕೂಡ ಒಂದರ ನಂತರ ಒಂದಲ್ಲ. ಬದಲಾಗಿ ಮೂರನ್ನೂ ಏಕಕಾಲದಲ್ಲಿ. ಅದಕ್ಕೂ ವಿಶೇಷ ಮಾರ್ಗವನ್ನು ಆಯ್ದುಕೊಂಡಿರುವ ಆತ, ಮೂರನ್ನೂ ಹಾರಿಸುತ್ತಾ, ಕಸರತ್ತು ಮಾಡುತ್ತಾ, ಅದು ಬೀಳದಂತೆ ಆಟವಾಡುತ್ತಾ 4 ನಿಮಿಷಗಳ ಆಸುಪಾಸಿನಲ್ಲಿ ಅವುಗಳನ್ನು ಜೋಡಿಸಿದ್ದಾನೆ. ಈ ವಿಡಿಯೋವನ್ನು ಗಿನ್ನೆಸ್ ದಾಖಲೆಯ ಅಧಿಕೃತ ಯುಟ್ಯೂಬ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ವೈರಲ್ (Viral) ಆಗಿದೆ.
ಈ ಸಾಧನೆ ಮಾಡಿದ ಯುವಕನ ಹೆಸರು ಏಂಜೆಲ್ ಅಲ್ವೆರಾಡೊ. ಕೊಲಂಬಿಯಾದ ಈತನಿಗೆ ಇನ್ನೂ 19ರ ಹರೆಯ. 4 ನಿಮಿಷ 31.01 ಸೆಕೆಂಡ್ಗಳಲ್ಲಿ 3 ರುಬಿಕ್ಸ್ ಕ್ಯೂಬ್ಗಳಲ್ಲಿ ಜೋಡಿಸಿ ಆತ ದಾಖಲೆ ಬರೆದಿದ್ದಾನೆ. ಈ ಹಿಂದೆ ಏಂಜೆಲ್ 2021 ರ ಮೇಯಲ್ಲಿ 4 ನಿಮಿಷ 52 ಸೆಕೆಂಡುಗಳಲ್ಲಿ ಇದೇ ದಾಖಲೆಯನ್ನು ಬರೆದಿದ್ದ ಏಂಜೆಲ್ ಇದೀಗ ಅದನ್ನು ಉತ್ತಮಪಡಿಸಿದ್ದಾನೆ.
ಏಂಜೆಲ್ ಅಲ್ವೆರಾಡೋ ವಿಶ್ವದಾಖಲೆ ಮಾಡಿದ ವಿಡಿಯೋ ಇಲ್ಲಿದೆ:
ಈ ಸಾಧನೆಯನ್ನು ಮಾಡಲು ಹೇಗೆ ಸಾಧ್ಯವಾಯಿತು ಎನ್ನುವುದನ್ನು ವಿವರಿಸಿರುವ ಏಂಜೆಲ್ ಅಲ್ವೆರಾಡೋ, ಒಂದು ರುಬಿಕ್ಸ್ ಕ್ಯೂಬನ್ನು ಈ ಕಸರತ್ತಿನೊಂದಿಗೆ ಜೋಡಿಸಲು ಐದು ತಿಂಗಳು ಅಭ್ಯಾಸ ನಡೆಸಿದ್ದೆ. 3 ಕ್ಯೂಬ್ಗಳೊಂದಿಗೆ ಆಡುತ್ತಾ ಅವುಗಳನ್ನು ಏಕಕಾಲದಲ್ಲಿ ಪರಿಹರಿಸಲು ಮತ್ತೆ 4 ತಿಂಗಳುಗಳ ಅಭ್ಯಾಸ ಬೇಕಾಯಿತು ಎಂದಿದ್ದಾನೆ. ರುಬಿಕ್ಸ್ ಕ್ಯೂಬ್ ದಾಖಲೆಗಳಲ್ಲಿ ಇದು ಕೊಲಂಬಿಯಾದ ಮೊದಲ ದಾಖಲೆಯಾಗಿದ್ದು, ಅದನ್ನು ಸಾಧಿಸಿದ್ದಕ್ಕೆ ಖುಷಿ ಮತ್ತು ಹೆಮ್ಮೆ ಇದೆ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸೈಟ್ಗೆ ತಿಳಿಸಿದ್ದಾನೆ ಏಂಜೆಲ್.
ಅಂದಹಾಗೆ ರುಬಿಕ್ಸ್ ಕ್ಯೂಬ್‌ಗಳನ್ನು ಜೋಡಿಸುವಲ್ಲಿ ಭಾರತದ ಬಾಲಕರು ಕೂಡ ಹಲವು ದಾಖಲೆಗಳನ್ನು ಬರೆದಿದ್ದಾರೆ. ಬೆಂಗಳೂರು ಮೂಲದ 8 ವರ್ಷದ ಅಥರ್ವ್.ಆರ್.ಭಟ್ ತನ್ನ ಎರಡೂ ಕೈ ಮತ್ತು ಕಾಲುಗಳನ್ನು ಬಳಸಿ ಎರಡು ನಿಮಿಷಗಳಲ್ಲಿ ಮೂರು ರೂಬಿಕ್ಸ್ ಕ್ಯೂಬ್‌ಗಳನ್ನು ಪರಿಹರಿಸಿ ವಿಶೇಷ ದಾಖಲೆ ಬರೆದಿದ್ದನ್ನು ಇಲ್ಲಿ ಸ್ಮರಿಸಬಹುದು.
ಅಥರ್ವ್ ರುಬಿಕ್ಸ್ ಕ್ಯೂಬ್ ಜೋಡಿಸುತ್ತಿರುವ ವಿಡಿಯೋ:
ಮತ್ತಷ್ಟು ಕುತೂಹಲಕರ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ | ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:51 am, Tue, 17 May 22