ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಬಂದ ವ್ಯಕ್ತಿಯೊಬ್ಬರ ಹೊಟ್ಟೆಯಲ್ಲಿ 63 ನಾಣ್ಯಗಳನ್ನು ಕಂಡು ವೈದ್ಯರೇ ಬೆಚ್ಚಿಬಿದ್ದ ಘಟನೆಯು ರಾಜಸ್ಥಾನದ ಜೋಧ್ಪುರದಲ್ಲಿ ನಡೆದಿದೆ. ಕಳೆದ ಕೆಲ ದಿನಗಳಿಂದ ವ್ಯಕ್ತಿಯು ವಿಪರೀತ ಹೊಟ್ಟೆ ನೋವಾಗುತ್ತಿದೆ ಎಂದು ಮನೆಯವರಲ್ಲಿ ತಿಳಿಸಿದ್ದರು. ಹೀಗಾಗಿ ಕುಟುಂಬಸ್ಥರು ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ.
ಈ ವೇಳೆ ಪರಿಶೀಲಿಸಿದ ವೈದ್ಯರು ನಿಖರ ಕಾರಣವೇನು ಎಂಬುದು ಗೊತ್ತಾಗಲಿಲ್ಲ. ಹೀಗಾಗಿ ಸ್ಕ್ಯಾನ್ ಮಾಡಿಸುವಂತೆ ಸೂಚಿಸಿದ್ದಾರೆ.
ಈ ಸ್ಕ್ಯಾನಿಂಗ್ ರಿಪೋರ್ಟ್ ನೋಡಿದ ವೈದ್ಯರು ಮೂರ್ಛೆ ಬೀಳುವುದೊಂದೇ ಬಾಕಿ. ಏಕೆಂದರೆ ಆತನ ಹೊಟ್ಟೆಯಲ್ಲಿ ನಾಣ್ಯಗಳ ರಾಶಿಯೇ ಕಂಡು ಬಂದಿದೆ. ಈ ಬಗ್ಗೆ ರೋಗಿಯನ್ನು ವಿಚಾರಿಸಿದಾಗ ಒಂದಷ್ಟು ನಾಣ್ಯಗಳನ್ನು ನುಂಗಿರುವುದಾಗಿ ತಿಳಿಸಿದ್ದಾರೆ. ಹೀಗಾಗಿ ಶಸ್ತ್ರಚಿಕಿತ್ಸೆ ಮಾಡಬೇಕೆಂದು ವೈದ್ಯರು ತಿಳಿಸಿದ್ದರು. ಅದರಂತೆ ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ವ್ಯಕ್ತಿಯ ಹೊಟ್ಟೆಯಿಂದ ನಾಣ್ಯಗಳನ್ನು ತೆಗೆಯಲಾಯಿತು.
ಆ ಬಳಿಕ ವೈದ್ಯರ ತಂಡವು ನಾಣ್ಯಗಳನ್ನು ಲೆಕ್ಕಹಾಕಿದ್ದಾರೆ. ಈ ವೇಳೆ ಬರೋಬ್ಬರಿ 63 ನಾಣ್ಯಗಳನ್ನು ನುಂಗಿರುವುದು ಗೊತ್ತಾಗಿದೆ. ಇದೀಗ ರೋಗಿಯು ಚೇತರಿಸಿಕೊಂಡಿದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ವೈದ್ಯ ನರೇಂದ್ರ ಭಾರ್ಗವ್ ತಿಳಿಸಿದ್ದಾರೆ.
ಇನ್ನು 36 ವರ್ಷದ ರೋಗಿಯು ಮಾನಸಿಕ ಅಸ್ವಸ್ಥತೆಯನ್ನು ಹೊಂದಿದ್ದು, ಹೀಗಾಗಿ ನಾಣ್ಯವನ್ನು ನುಂಗುವ ಅಭ್ಯಾಸ ರೂಢಿಸಿಕೊಂಡಿದ್ದ. ಇದರಿಂದ ಆತನಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಇದೀಗ ನಮ್ಮ ತಂಡವು ಯಶಸ್ವಿ ಶಸ್ತ್ರ ಚಿಕಿತ್ಸೆಯ ಮೂಲಕ 63 ನಾಣ್ಯಗಳನ್ನು ಹೊರತೆಗೆದಿದ್ದೇವೆ. ಶಸ್ತ್ರಚಿಕಿತ್ಸೆಯ ನಂತರ ರೋಗಿಯಲ್ಲೂ ಚೇತರಿಕೆ ಕಂಡು ಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.