Chennai: ಒಮ್ಮೊಮ್ಮೆ ಈ ಇಂಟರ್ನೆಟ್ ಎಂಬ ಮಹಾಜಾಲದಲ್ಲಿ ದೇಶಕಾಲಗಳನ್ನು ಮೀರಿದ ಬೇರೆಯದೇ ವಿಶ್ವ ಎಂಬ ಭಾವನೆ ಬರುವಂಥ ಘಟನೆಗಳು ನಡೆಯುವುದುಂಟು. ಸಾಮಾಜಿಕ ಜಾಲತಾಣಗಳ ಮಾಹಿತಿಯ ಮಹಾಪೂರದಿಂದಾಗುತ್ತಿರುವ ಕೆಟ್ಟ ಪರಿಣಾಮಗಳ ಬಗ್ಗೆ ಸಾಕಷ್ಟು ಚರ್ಚೆಗಳು ಈ ಕಾಲದಲ್ಲಿ ನಡೆಯುತ್ತಿವೆ. ಆದರೂ ಒಮ್ಮೊಮ್ಮೆ ಅವುಗಳು ಮಾತ್ರವೇ ಆಗಮಾಡಬಹುದೆನ್ನಿಸುವ ವಿದ್ಯಮಾನಗಳು ನಮ್ಮೆದುರಿಗೆ ಧುತ್ತನೇ ಬಂದು ನಿಂತು ನಮ್ಮನ್ನು ಬೆರಗಿಗೆ ತಳ್ಳುತ್ತವೆ. ಎದೆ ಬೆಚ್ಚಗೆ ಮಾಡುತ್ತವೆ, ಧನ್ಯತೆಯ ಭಾವದ ಅನುಭೂತಿ ಕೊಡುತ್ತವೆ. ಅಂಥದೇ ಒಂದು ಸಂಗತಿಯನ್ನು ಮೊಹಮ್ಮದ್ ಆಶಿಕ್ ಎಂಬ Instagram content creator ಒಬ್ಬರು ಹಂಚಿಕೊಂಡಿದ್ದು ನಿರೀಕ್ಷೆಯಂತೆ ಅದು ವೈರಲ್ ಆಗಿದೆ, 4.3 ಮಿಲಿಯನ್ ಜನರು ಈ ವಿಡಿಯೋ ಲೈಕ್ ಮಾಡಿದ್ದಾರೆ.
ಇದನ್ನೂ ಓದಿ : Viral Video: ಮೈಸುತ್ತ ಎಂಟು ಬೆಂಕಿಯ ಬಳೆಗಳನ್ನು ತಿರುಗಿಸಿ ವಿಶ್ವದಾಖಲೆಗೈದ ಗ್ರೇಸ್ ಗುಡ್
‘ನಿಮ್ಮ ಹೆಸರೇನು, ಅಜ್ಜಿ? ನೀವು ಎಲ್ಲಿಂದ ಬಂದಿರಿ?’ ಎಂದು ಆಶಿಕ್ ಬೊಚ್ಚುಬಾಯಿಯ 81 ವರ್ಷದ ಈ ಬಡಮುದುಕಿಯನ್ನು ಕೇಳುವುದರ ಮೂಲಕ ಶುರುವಾಗುವ ಈ ವಿಡಿಯೋ ಮರುಕ್ಷಣವೇ ನಿಮ್ಮನ್ನು ಅಚ್ಚರಿಗೆ ತಳ್ಳುತ್ತದೆ. ಸೊಗಸಾಗಿ ಇಂಗ್ಲಿಷ್ ಮಾತನಾಡುತ್ತ ತನ್ನ ಚರಿತ್ರೆಯನ್ನು ಹೇಳುವ ಮರ್ಲಿನ್ ಎಂಬ ಹೆಸರಿನ ಈ ಅಜ್ಜಿ, ಬರ್ಮಾದ ರಂಗೂನ್‌ನಲ್ಲಿ ಇಂಗ್ಲಿಷ್ ಶಿಕ್ಷಕಿಯಾಗಿದ್ದವರು.
ಮರ್ಲಿನ್ ಮದುವೆಯಾಗಿ ಗಂಡನ ಜೊತೆ ಚೆನ್ನೈ ತಲುಪಿದರು. ಮುಂದೆ ಏನೇನೋ ಕಾರಣಗಳಿಂದ ಎಲ್ಲವನ್ನೂ ಕಳೆದುಕೊಂಡು ಬೀದಿಪಾಲಾಗಿ ಭಿಕ್ಷೆ ಬೇಡುತ್ತ ಹೊಟ್ಟೆಹೊರೆಯುತ್ತಿದ್ದರು. ಇದೀಗ ‘A broke college kid’ ಹೆಸರಿನ Instagram ಖಾತೆಯುಳ್ಳ ಆಶಿಕ್ ಕಣ್ಣಿಗೆ ಬಿದ್ದು ತಮ್ಮ ಕತೆ ಹೇಳಿಕೊಳ್ಳುವ ಅವಕಾಶ ಪಡೆದುಕೊಂಡಿದ್ದಾರೆ. ಇವರ ಪುನರ್ವಸತಿಗೆ ಅನುಕೂಲವಾಗಲೆಂದು ಆಶಿಕ್ Englishwithmerlin ಎಂಬ Instagram ಖಾತೆ ತೆರೆದಿದ್ದಾರೆ.
ಹೀಗೆ ಈ ಇನ್ಸ್ಟಾಗ್ರಾಂ ಖಾತೆಯಲ್ಲಿ ಮರ್ಲಿನ್ ಇಂಗ್ಲಿಷ್ ಕಲಿಸಲು ಶುರು ಮಾಡಿದ್ದಾರೆ. ಈಗಾಗಲೇ ಸುಮಾರು 6 ಲಕ್ಷ ಫಾಲೋವರ್ಸ್ ಇವರಿಗಿದ್ಧಾರೆ. ಮೊದಲಿಗೆ ಹೇಳಿದಂತೆ ಅಂತರ್ಜಾಲದ ಮಹಿಮೆ ಹೇಗಿದೆಯೆಂದರೆ ಈ ವಿಡಿಯೋ ನೋಡಿದ ಮರ್ಲಿನ್ ಅವರ ಹಳೆಯ ಶಿಷ್ಯನೊಬ್ಬ ಅವರನ್ನು ಗುರುತಿಸಿ ಸಂಪರ್ಕಿಸಿದನಂತೆ. ಮರ್ಲಿನ್ ಈಗ ವೃದ್ಧಾಶ್ರಮದಲ್ಲಿ ನೆಲೆಸಿದ್ದು ಅವರ ದಿನನಿತ್ಯದ ಸಮಸ್ಯೆಗಳು ಬಗೆಹರಿದಿವೆ.
ಆಶಿಕ್, ನೀವು ಅಜ್ಜಿಯನ್ನು ಮಾತನಾಡಿಸುವಾಗ ಆಕೆ ಅಳಲೇ ಇಲ್ಲ ನೋಡಿ, ಆಕೆ ಬಹಳ ಗಟ್ಟಿಹೆಣ್ಣುಮಗಳು. ನಾನೂ ಈ ಅಜ್ಜಿಗೆ ಸಹಾಯ ಮಾಡಬೇಕು. ಇಷ್ಟು ವರ್ಷ ನೋಡಿದ ವಿಡಿಯೋಗಳಲ್ಲಿ ಇದು ಅತ್ಯುತ್ತಮ ವಿಡಿಯೋ, ನಾನೂ ಅವಳಿಗೆ ಸಹಾಯ ಮಾಡಬೇಕು ಮಾಹಿತಿ ಕೊಡಿ. ಸರ್ಕಾರವು ಇಂಥ ಅನೇಕ ಜ್ಞಾನವಂತ ಹಿರಿಯ ನಾಗರಿಕರಿಗೆ ಅನಾಥ ಮಕ್ಕಳ ಆಶ್ರಮದಲ್ಲಿ ಕೆಲಸ ಮತ್ತು ಆಶ್ರಯ ಕೊಡಬೇಕು, ಇದರಿಂದ ಪರಸ್ಪರ ಸಹಾಯವಾಗುತ್ತದೆ… ವಿಡಿಯೋ ನೋಡಿದ ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ಧಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 10:40 am, Tue, 19 September 23