ಅಗರ್ತಲಾ: ಚಾಕಲೇಟ್ ಖರೀದಿಸಲು ಭಾರತ ಗಡಿದಾಟಿ ಈಜಿ ಬಂದ ಯುವಕನೊಬ್ಬ ಈಗ ಗಡಿ ಭದ್ರತಾ ಪಡೆಯ ಅತಿಥಿಯಾಗಿದ್ದಾನೆ. ಬಾಂಗ್ಲಾದೇಶದ ಯುವಕನೊಬ್ಬ ಭಾರತದಿಂದ ಚಾಕೊಲೇಟ್ ಖರೀದಿಸಲು ಗಡಿಯಾಚೆ ಈಜಿದ್ದಾನೆ. ಯುವಕನನ್ನು ಎಮಾನ್ ಹೊಸೈನ್ ಎಂದು ಗುರುತಿಸಲಾಗಿದ್ದು, ತನ್ನ ನೆಚ್ಚಿನ ಚಾಕಲೇಟ್ಅನ್ನು ಖರೀದಿಸಲು ಸಣ್ಣ ನದಿಯನ್ನು ದಾಟಿ, ಆ ಮೂಲಕ ಭಾರತ- ಬಾಂಗ್ಲಾದೇಶ ಗಡಿಯನ್ನು ದಾಟಿದ್ದಾನೆ. ತ್ರಿಪುರಾದ ಸಿಪಹಿಜಾಲಾ ಜಿಲ್ಲೆಯಲ್ಲಿ ಈ ಪ್ರಕರಣ ವರದಿಯಾಗಿದೆ. ಅಚ್ಚರಿಯೆಂದರೆ ಎಮಾನ್ ಹೊಸೈನ್ ಭಾರತದ ಭೂಪ್ರದೇಶಕ್ಕೆ ನುಸುಳಿದ್ದು ಇದೇ ಮೊದಲೇನಲ್ಲ. ತ್ರಿಪುರಾದ ಕಲಾಂಚೌರಾ ಗ್ರಾಮದ ಅಂಗಡಿಯೊಂದರಿಂದ ತನ್ನ ನೆಚ್ಚಿನ ಚಾಕೊಲೇಟ್ ಖರೀದಿಸಲು ಆತ ಆಗಾಗ ನದಿಯನ್ನು ಈಜಿ ಬರುತ್ತಿದ್ದನಂತೆ. ಜತೆಗೆ ಮುಳ್ಳುತಂತಿಯಿರುವ ಬೇಲಿಯನ್ನೂ ನುಸುಳುತ್ತಿದ್ದನಂತೆ. ಚಾಕಲೇಟ್ ಖರೀದಿಸಿದ ನಂತರ ಅದೇ ಮಾದರಿಯಲ್ಲಿ ವಾಪಸ್ ಸ್ವದೇಶಕ್ಕೆ ಅರ್ಥಾತ್ ತನ್ನ ಗ್ರಾಮಕ್ಕೆ ಮರಳುತ್ತಿದ್ದ. ಆದರೆ ಈ ಬಾರಿ ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಪೊಲೀಸರು ಎಮಾನ್ನನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆತನಿಗೆ 15 ದಿನಗಳ ನ್ಯಾಯಾಂಗ ಬಂಧನಕ್ಕೆ ವಿಧಿಸಲಾಗಿದೆ ಎಂದು ಸೋನಮುರಾ ಎಸ್‌ಡಿಪಿಒ ಬನೋಜ್ ಬಿಪ್ಲಬ್ ದಾಸ್ ಪಿಟಿಐಗೆ ತಿಳಿಸಿದ್ದಾರೆ. ವಿಚಾರಣೆಯ ಸಂದರ್ಭದಲ್ಲಿ ಬಾಂಗ್ಲಾದೇಶದ ಕೊಮಿಲ್ಲಾ ಜಿಲ್ಲೆಯ ನಿವಾಸಿಯಾಗಿರುವ ಎಮಾನ್ ಚಾಕೊಲೇಟ್ ಖರೀದಿಸಲು ಭಾರತಕ್ಕೆ ನುಸುಳಿದ್ದಾಗಿ ಒಪ್ಪಿಕೊಂಡಿದ್ದಾನೆ. ಅವನ ಬಳಿ ಕೇವಲ 100 ಬಾಂಗ್ಲಾದೇಶ ಟಾಕಾ ಪತ್ತೆಯಾಗಿದೆ. ಅವನಲ್ಲಿ ಅಕ್ರಮವಾಗಿದ್ದು ಏನಿರಲಿಲ್ಲ. ಸರಿಯಾದ ದಾಖಲೆಗಳಿಲ್ಲದೆ ಭಾರತವನ್ನು ಪ್ರವೇಶಿಸಿದ್ದಕ್ಕಾಗಿ ಯುವಕನನ್ನು ಬಂಧಿಸಲಾಗಿದೆ ಎಂದು ದಾಸ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಹೆಚ್ಚಿನ ತನಿಖೆ ನಡೆಯುತ್ತಿದ್ದು ಶೀಘ್ರದಲ್ಲೇ ಎಮಾನ್ನನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ದಾಸ್ ಮಾಹಿತಿ ನೀಡಿದ್ದಾರೆ. ವರದಿಗಳ ಪ್ರಕಾರ ಎಮಾನ್ ಕುಟುಂಬದ ಯಾರೂ ಇದುವರೆಗೆ ಭಾರತೀಯ ಅಧಿಕಾರಿಗಳನ್ನು ಸಂಪರ್ಕಿಸಿಲ್ಲ. ಚಾಕೊಲೇಟ್‌ಗಳನ್ನು ಖರೀದಿಸಲು ನದಿ ದಾಟುವವರು ಎಮಾನ್ ಮಾತ್ರವಲ್ಲ. ಬಾಲಕಿಯರು ಸೇರಿದಂತೆ ಇತರ ಮಕ್ಕಳು ಕೂಡ ಆಗಮಿಸುತ್ತಿದ್ದರು ಎಂದು ಅಂಗಡಿಯವನು ಪೊಲೀಸರಿಗೆ ಮಾಹಿತಿ ನೀಡಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಬಿಎಸ್‌ಎಫ್ ಮೂಲಗಳು ಪಿಟಿಐಗೆ ತಿಳಿಸಿದ ಪ್ರಕಾರ, ಸೋನಮುರಾ ಉಪವಿಭಾಗದ ಅಂತಾರಾಷ್ಟ್ರೀಯ ಗಡಿಯಲ್ಲಿ ಮುಳ್ಳುತಂತಿಯ ಬೇಲಿಯನ್ನು ಹಾಕಲಾಗಿದ್ದರೂ ಕೂಡ ಅವುಗಳಲ್ಲಿ ನುಸುಳಬಹುದಾಗಿದೆ. ಕಲಂಚೌರಾ ಗ್ರಾಮ ಪಂಚಾಯಿತಿಯಲ್ಲಿ ಹಲವು ಗ್ರಾಮಗಳಿದ್ದು, ಹಲವು ಮನೆಗಳ ಮಲಗುವ ಕೋಣೆಗಳು ಮತ್ತು ಹಾಲ್ಗಳ ಮೂಲಕವೇ ಗಡಿ ಇದೆ. ಕಷ್ಟಕರವಾದ ಭೂಪ್ರದೇಶದ ಕಾರಣದಿಂದಾಗಿ ಅಲ್ಲಿ ಬೇಲಿಯಿಲ್ಲ ಎಂದು ಮಾಹಿತಿ ನೀಡಲಾಗಿದೆ.
ಕಲಂಚೌರಾ ನಿವಾಸಿ ಎಲಿಯಸ್ ಹೊಸೈನ್ ಬಾಂಗ್ಲಾದೇಶಿಗರು ಭಾರತದ ಗಡಿಯೊಳಕ್ಕೆ ಬರುವ ಬಗ್ಗೆ ಮಾಹಿತಿ ನೀಡುತ್ತಾ, ‘‘ಬಾಂಗ್ಲಾದೇಶಿಗರು ದಿನಸಿ ಖರೀದಿಸಲು ಅಥವಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಾಗ್ಗೆ ಭಾರತಕ್ಕೆ ನುಸುಳುತ್ತಾರೆ. ಬಿಎಸ್ಎಫ್ ಸಾಮಾನ್ಯವಾಗಿ ಮಾನವೀಯ ಆಧಾರದ ಮೇಲೆ ಅವರನ್ನು ನಿರ್ಲಕ್ಷಿಸುತ್ತದೆ. ಆದರೆ ಕಳ್ಳಸಾಗಣೆದಾರರು ಹಾಗೂ ಇತರರ ವಿರುದ್ಧ ಕ್ರಮ ಕೈಗೊಳ್ಳುತ್ತದೆ. ಆದರೆ ನನಗೆ ತಿಳಿದಿರುವಂತೆ ಈ ಯುವಕ ಚಾಕೊಲೇಟ್ ಖರೀದಿಸಲು ಬಂದಿದ್ದ’’ ಎಂದಿದ್ದಾರೆ.
ಇದನ್ನೂ ಓದಿ: Viral: ಗೂಗಲ್ಮ್ಯಾಪ್ನಲ್ಲಿ ಕಾಣಿಸಿಕೊಂಡ ಕೈ-ಕಾಲು, ತಲೆಯೇ ಇಲ್ಲದ ಆಕೃತಿ; ಬೆಚ್ಚಿಬಿದ್ದ ಜನ
Viral News: ಬೆನ್ನಿನ ಕೆಳಗೆ ಉದ್ದನೆಯ ಬಾಲವಿರುವ ಯುವಕನ ವಿಡಿಯೋ ವೈರಲ್; ಹನುಮಂತನ ಪುನರ್ಜನ್ಮವೆಂದ ಜನರು!
Published On - 2:10 pm, Sun, 17 April 22