ಚೀನಾ: ಹಲವಾರು ಬೌದ್ಧ ದೇವಾಲಯಗಳ ಹೆಸರಿನಲ್ಲಿ ದೇಣಿಗೆ ಹಣ ಪಡೆದು ವಂಚಿಸಿದ ಆರೋಪದ ಮೇಲೆ ಚೀನಾದ ವ್ಯಕ್ತಿಯನ್ನು ಬಂಧಿಸಲಾಗಿದೆ. ವರದಿಗಳ ಪ್ರಕಾರ, ಈತ ದೇವಸ್ಥಾನದ ಹುಂಡಿಯ ಕ್ಯೂಆರ್ ಕೋಡ್ ಅನ್ನು ಮೇಲೆ ತನ್ನ ವೈಯಕ್ತಿಕ ಬ್ಯಾಂಕ್ ಖಾತೆಯ ಕ್ಯೂಆರ್ ಕೋಡ್ ಅಂಟಿಸಿದ್ದ ಎಂದು ತಿಳಿದುಬಂದಿದೆ. ಇದಲ್ಲದೇ ಮನೆಮನೆ ಭೇಟಿ ನೀಡಿ ದೇವಾಲಯಗಳ ದೇಣಿಗೆಯ ಹೆಸರಿನಲ್ಲಿ ತನ್ನ ಖಾತೆಗೆ ಹಣ ವರ್ಗಾಯಿಸುತ್ತಿದ್ದ. ಇದೀಗ ಈತನ ಕಳ್ಳಾಟ ಬೆಳಕಿಗೆ ಬಂದಿದೆ.
ಈ ಖದೀಮ ಪ್ರತಿಷ್ಠಿತ ವಿಶ್ವವಿದ್ಯಾಲಯದಿಂದ ಕಾನೂನಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾನೆ ಎಂದು ವರದಿಗಳು ಸೂಚಿಸಿವೆ. ಈ ವರ್ಷ ಶಾಂಕ್ಸಿ, ಸಿಚುವಾನ್ ಮತ್ತು ಚಾಂಗ್‌ಕಿಂಗ್ ಪ್ರಾಂತ್ಯಗಳಲ್ಲಿನ ದೇವಾಲಯಗಳಿಂದ 30,000 ಯುವಾನ್ (ಅಂದಾಜು ₹ 3.5 ಲಕ್ಷ) ಕದ್ದಿರುವುದಾಗಿ ತನಿಖೆಯ ವೇಳೆ ಒಪ್ಪಿಕೊಂಡಿದ್ದಾನೆ. ತನಿಖಾಧಿಕಾರಿಗಳ ಪ್ರಕಾರ, ಈತ ಕದ್ದ ಎಲ್ಲಾ ಹಣವನ್ನು ಹಿಂದಿರುಗಿಸಿರುವುದಾಗಿ ತಿಳಿದುಬಂದಿದೆ.
ಕೆಲವು ದಿನಗಳ ನಂತರ ದೇವಸ್ಥಾನದ ಆಡಳಿತ ಮಂಡಳಿಯವರು ಇದನ್ನು ಅರಿತು ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಶಾಂಕ್ಸಿ ಪೊಲೀಸರು ತನಿಖೆ ನಡೆಸಿ ದೇವಸ್ಥಾನದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಇದಾದ ಬಳಿಕ ಈ ವ್ಯಕ್ತಿ ಕೆಲ ದಿನಗಳ ಹಿಂದೆ ಬಂದಿದ್ದು, ವಿಗ್ರಹದ ಮುಂದೆ ನಮಸ್ಕರಿಸಿ ಬಳಿಕ ಕಾಣಿಕೆ ಡಬ್ಬದ ಮೇಲೆ ಕ್ಯೂಆರ್ ಹಾಕಿರುವುದು ಬೆಳಕಿಗೆ ಬಂದಿದೆ. ದೇವಸ್ಥಾನದಲ್ಲಿ ದೇಣಿಗೆ ನೀಡಲು ಭಕ್ತ ಮೊಬೈಲ್‌ನಿಂದ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ, ದೇಣಿಗೆ ಮೊತ್ತವನ್ನು ನೇರವಾಗಿ ಆ ವ್ಯಕ್ತಿಯ ಖಾತೆಗೆ ವರ್ಗಾವಣೆಯಾಗಿರುವುದು ಗೊತ್ತಾಗಿದೆ.
ಇದನ್ನೂ ಓದಿ: Richard Lugner: 2 ತಿಂಗಳ ಹಿಂದಷ್ಟೇ 6ನೇ ಮದುವೆಯಾಗಿದ್ದ 91 ವರ್ಷದ ಬಿಲಿಯನೇರ್ ನಿಧನ
ಬಳಿಕ ಪೊಲೀಸರು ತನಿಖೆ ನಡೆಸಿ ವ್ಯಕ್ತಿಯನ್ನು ಬಂಧಿಸಿದ್ದಾರೆ. ಅಲ್ಲಿ ಹಲವು ದೇವಸ್ಥಾನಗಳಿಗೆ ಈ ರೀತಿ ವಂಚನೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಈ ಪ್ರಕರಣದ ತನಿಖೆ ನಡೆಸುತ್ತಿರುವವರು ಆರೋಪಿಯು ಇಲ್ಲಿಯವರೆಗೆ ಎಲ್ಲಾ ಕದ್ದ ಹಣವನ್ನು ಹಿಂದಿರುಗಿಸಿದ್ದಾನೆ. ಈ ಪ್ರಕರಣವು ಪ್ರಪಂಚದಾದ್ಯಂತ ಇದೀಗ ಭಾರೀ ಚರ್ಚೆಯಲ್ಲಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ