ಕಾಡಿನ ಪರಭಕ್ಷಕ ಜೀವಿಗಳಾದ ಹುಲಿ, ಸಿಂಹ, ಚಿರತೆ ಈ ರೀತಿಯ ಕ್ರೂರ ಪ್ರಾಣಿಗಳು ತಮ್ಮ ಹಸಿವನ್ನು ನೀಗಿಸುವ ಸಲುವಾಗಿ ಇತರ ಪ್ರಾಣಿಗಳನ್ನು ಬೇಟೆಯಾಡುತ್ತವೆ. ಇನ್ನೂ ಕೆಲವು ಪುಟ್ಟ ಪುಟ್ಟ ಪ್ರಾಣಿಗಳು ತಮ್ಮ ಬುದ್ಧಿವಂತಿಕೆಯಿಂದ ಈ ದೈತ್ಯರ ಬಲೆಯಿಂದ ತಪ್ಪಿಸಿಕೊಂಡು ಪ್ರಾಣವನ್ನು ಉಳಿಸಿಕೊಳ್ಳುತ್ತವೆ. ಅದಕ್ಕೆ ನಿದರ್ಶನವೆಂಬಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹರಿದಾಡುತ್ತಿದೆ. ಚಿರತೆಯ ವಶದಲ್ಲಿದ್ದ ಮರಿಹಕ್ಕಿಯೊಂದು ತನ್ನ ಬುದ್ಧಿವಂತಿಕೆಯನ್ನು ಉಪಯೋಗಿಸಿಕೊಂಡು ಚಿರತೆಗೆ ಚಳ್ಳೆಹಣ್ಣು ತಿನ್ನಿಸಿ ಓಡಿ ಹೋಗಿದೆ. ಮೊದಲಿಗೆ ಅಯ್ಯೋ ಪುಟ್ಟ ಹಕ್ಕಿಯ ಪ್ರಾಣವನ್ನೇ ಚಿರತೆ ತೆಗೆದುಬಿಟ್ಟಿತಲ್ಲಾ ಎಂದು ಅಂದುಕೊಂಡವರು ಕೊನೆಯಲ್ಲಿ ಹಕ್ಕಿಯ ಚಾಲಾಕಿತನವನ್ನು ಕಂಡು ಬೆರಗಾಗಿದ್ದಾರೆ.
ಈ ವೀಡಿಯೋವನ್ನು ಲೇಟೆಸ್ಟ್ ಸೈಟಿಂಗ್ಸ್ (Latest Sightings) ಎಂಬ ಯ್ಯೂಟ್ಯೂಬ್ ಚಾನಲ್ ನಲ್ಲಿ ಹಂಚಿಕೊಳ್ಳಲಾಗಿದ್ದು, ಪುಟ್ಟ ಹಕ್ಕಿಯೊಂದು ಸಾವಿನ ದವಡೆಯಿಂದ ಪಾರಾಗಿ ಪ್ರಾಣರಕ್ಷಿಸಿಕೊಳ್ಳುವ ಕುತೂಹಲಕಾರಿ ದೃಶ್ಯಾವಳಿಯನ್ನು ವೀಡಿಯೋದಲ್ಲಿ ಕಾಣಬಹುದು.
ಮರಳುಗಾಡಿನ ಪ್ರದೇಶದಲ್ಲಿ ಚಿರಂತೆಯೊಂದು ಮಲಗಿಕೊಂಡು ವಿರಮಿಸುತ್ತಿರುತ್ತದೆ. ಆ ಸಂದರ್ಭದಲ್ಲಿ ಅದರ ಕಣ್ಣಮುಂದೆಯೇ ಮರಿ ಹಕ್ಕಿಯೊಂದು ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾ, ತಾಯಿ ಹಕ್ಕಿಯನ್ನೊ ಅಥವಾ ಆಹಾರವನ್ನೋ ಹುಡುಕುತ್ತಾ ಹೋಗುತ್ತಿರುತ್ತೆ. ಈ ದೃಶ್ಯ ಚಿರತೆಯ ಕಣ್ಣಿಗೆ ಬೀಳುತ್ತದೆ. ಒಂದು ಹೊತ್ತಿನ ಭೋಜನ ಸಿಕ್ಕಿತೆಂದು ಭಾವಿಸಿದ ಚಿರತೆ ಆ ಹಕ್ಕಿಯ ಹಿಂದೆ ಓಡಿ ಹೋಗಿ ಅದನ್ನು ಹಿಡಿಯಲು ಪ್ರಯತ್ನಿಸುತ್ತದೆ. ಹಿಂದೆ ದೈತ್ಯ ಪ್ರಾಣಿ ಬರುವುದನ್ನು ಕಂಡು ಮರಿ ಹಕ್ಕಿ ಓಡಿಕೊಂಡು ಹೋಗಿ ತನ್ನ ಪ್ರಾಣವನ್ನು ಉಳಿಸಲು ಯತ್ನಿಸುತ್ತದೆ. ಆದರೆ ಅದನ್ನು ಬೆನ್ನಟ್ಟಿದ ಚಿರತೆಯು ಹಕ್ಕಿಯನ್ನು ಕಾಲಿನಲ್ಲಿ ಹೊಸಕಿಹಾಕಿ ನಂತರ ಅದನ್ನು ಬಾಯಿಯಲ್ಲಿ ಕಚ್ಚಿಕೊಂಡುಬಂದು, ಒಂದು ಸ್ಥಳದಲ್ಲಿ ಹಾಕುತ್ತದೆ, ಚಿರತೆಯೂ ಅದರ ಪಕ್ಕದಲ್ಲಿಯೇ ಮಲಗುತ್ತದೆ. ಈ ದೃಶ್ಯವನ್ನು ನೋಡುತ್ತಿದ್ದ ಅಲ್ಲಿನ ಪ್ರವಾಸಿಗರು ಹಾಗೂ ಚಿರತೆ, ನಿಜವಾಗಿಯೂ ಹಕ್ಕಿಯ ಪ್ರಾಣ ಹೋಗಿದೆ ಎಂದು ಭಾವಿಸುತ್ತಾರೆ. ಹಾಗಾಗಿ ಚಿರತೆ ಹಕ್ಕಿಯ ಬಗ್ಗೆ ಅಷ್ಟೇನೂ ಗಮನ ನೀಡದೆ ಅತ್ತಿಂದಿತ್ತ ನೋಡುತ್ತಿರುತ್ತದೆ. ಅಲ್ಲಿಯವೆರೆಗೆ ಸತ್ತಂತೆ ನಟಿಸುತ್ತಿದ್ದ ಹಕ್ಕಿ ಇದೇ ಸರಿಯಾದ ಸಮಯ ಎಂದುಕೊಂಡು ಚಿರತೆಯ ವಶದಿಂದ ತಪ್ಪಿಸಿಕೊಂಡು ಓಡಿ ಹೋಗಿ ಪ್ರಾಣ ಉಳಿಸಿಕೊಳ್ಳುತ್ತದೆ. ಹಕ್ಕಿ ಕಣ್ತಪ್ಪಿಸಿ ಓಡಿ ಹೋಗುವುದನ್ನು ಕಂಡ ಚಿರತೆಯ ಮುಖ ಇಂಗು ತಿಂದ ಮಂಗನಂತಾಗಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೇ ಎಂದುಕೊಳ್ಳುವುದನ್ನು ವೀಡಿಯೋ ದೃಶ್ಯಾವಳಿಯಲ್ಲಿ ಕಾಣಬಹುದು.
ಇದನ್ನೂ ಓದಿ: Viral Video: ಕೆರೆಯಲ್ಲಿ ನೀರು ಕುಡಿಯಲು ಬಂದ ಹುಲಿಯನ್ನು ಅಟ್ಟಾಡಿಸಿಕೊಂಡು ಹೋದ ಗಜರಾಜ
ಐದು ದಿನಗಳ ಹಿಂದೆ ಯುಟ್ಯೂಬ್ ನಲ್ಲಿ ಹರಿಬಿಡಲಾದ ಈ ವೀಡಿಯೋ 5.3 ಲಕ್ಷ ವೀಕ್ಷಣೆಗಳನ್ನು ಹಾಗೂ 5.3 ಸಾವಿರ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ ಗಳೂ ಹರಿದುಬಂದಿವೆ. ಒಬ್ಬ ಬಳಕೆದಾರರು ‘ಚಿರತೆ ನಿಜವಾಗಿಯೂ ಆ ಮರಿ ಹಕ್ಕಿ ಎಷ್ಟು ಮೃದುವಾದದ್ದು ಎಂದು ತಿಳಿದಿದೆ. ಆದ್ದರಿಂದ ಚಿರತೆ ಹಕ್ಕಿಯನ್ನು ನೋಯಿಸದೆ ದಯೆಯಿಂದ ವರ್ತಿಸಿದೆ’ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಹಕ್ಕಿ ಸಾವಿನ ದವಡೆಯಿಂದ ಹೊರಬಂದದ್ದು, ನಿಜವಾಗಿಯೂ ಅದ್ಭುತ, ಆ ದೇವರು ಬುದ್ದಿವಂತ ಹಕ್ಕಿಗೆ ದೀರ್ಘಾಯುಷ್ಯವನ್ನು ನೀಡಲಿ’ ಎಂದು ಹರಸಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಆ ಮರಿಹಕ್ಕಿ ಮುದ್ದಾಗಿದೆ. ಕೊನೆಯಲ್ಲಿ ಚಿರತೆಯಿಂದ ಯಶಸ್ವಿಯಾಗಿ ಪಾರಾದದ್ದು, ತುಂಬಾ ಖುಷಿಯಾಯಿತು’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಅನೇಕರು ಮರಿಹಕ್ಕಿಯ ಬುದ್ಧಿವಂತಿಕೆಯನ್ನು ಮೆಚ್ಚಿಕೊಂಡರು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ