Viral Post: ಒಂಟಿ ಕಾಲಿನಲ್ಲಿ ನಿಂತು ಬೆಂಗಳೂರಿನ ಬೀದಿ ಬದಿ ದೋಸೆ ಮಾರುವ ಈ ಯುವತಿಯ ಛಲಕ್ಕೆ ಸೋತ ಕ್ರಿಕೆಟ್​​​ ದಿಗ್ಗಜ 

| Updated By: ಅಕ್ಷಯ್​ ಪಲ್ಲಮಜಲು​​

Updated on: May 24, 2024 | 12:39 PM

ತನ್ನ 17ನೇ ವಯಸ್ಸಿನಲ್ಲಿ ಬಸ್‌ ಅಪಘಾತವೊಂದರಲ್ಲಿ ಬಲಗಾಲನ್ನು ಕಳೆದುಕೊಂಡ ಯುವತಿ ಜೀವನದಲ್ಲಿ ಬಂದಂತಹ ಕಷ್ಟಗಳನ್ನೆಲ್ಲಾ ಎದುರಿಸಿ ಇದೀಗ “ಕರಿ ದೋಸಾ” ಎಂಬ ದೋಸೆ ಸ್ಟಾಲ್‌ ಒಂದನ್ನು ಓಪನ್‌ ಮಾಡಿ ಸಣ್ಣ ಹೋಟೇಲ್‌ ಉದ್ಯಮಕ್ಕೆ ಇಳಿದಿದ್ದಾಳೆ.  ಒಂದು ಕಾಲು ಇಲ್ಲದ್ದರೂ ಈಕೆಯ  ಜೀವನೋತ್ಸಾಹ ನಿಜಕ್ಕೂ ಸ್ಫೂರ್ತಿದಾಯಕ ಎಂದು ಈಕೆಯ ಕಥೆಯನ್ನು  ಕ್ರಿಕೆಟಿಗ ವಿವಿಎಸ್‌ ಲಕ್ಷ್ಮಣ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Viral Post: ಒಂಟಿ ಕಾಲಿನಲ್ಲಿ ನಿಂತು ಬೆಂಗಳೂರಿನ ಬೀದಿ ಬದಿ ದೋಸೆ  ಮಾರುವ ಈ ಯುವತಿಯ ಛಲಕ್ಕೆ ಸೋತ ಕ್ರಿಕೆಟ್​​​ ದಿಗ್ಗಜ 
Follow us on

ಜೀವನದಲ್ಲಿ ಏನನ್ನಾದರೂ ಸಾಧಿಸುತ್ತೇನೆಂಬ ಛಲ ಹೊಂದಿದ್ದರೆ ಎಂತಹದ್ದೇ ಕಷ್ಟ ಬಂದರೂ ಅದನ್ನು ಎದುರಿಸಿ ನಿಲ್ಲಬಹುದು. ಅದೇ ರೀತಿ ಇಲ್ಲೊಬ್ಬ ಯುವತಿ ಅಂಗವೈಕಲ್ಯ ಕೇವಲ ದೇಹಕ್ಕೆ ಹೊರತು, ಮನಸ್ಸಿಗಲ್ಲ, ದುಡಿಯುವ ಹುಮ್ಮಸ್ಸು, ಜೀವನದಲ್ಲಿ ಏನನ್ನಾದರೂ ಸಾಧಿಸುವ ಛಲ ನನ್ನಲಿದೆ ಎನ್ನುತ್ತಾ ಸಣ್ಣ ಹೋಟೇಲ್‌ ಉದ್ಯಮಕ್ಕೆ ಇಳಿದು, ಇಂದು ಯಶಸ್ವಿಯಾಗಿ ತನ್ನ ಉದ್ಯಮವನ್ನು ನಡೆಸುತ್ತಿದ್ದಾಳೆ.  ಒಂದು ಕಾಲು ಇಲ್ಲದ್ದರೂ ದುಡಿಯುವ ಛಲ, ಈಕೆಯ  ಜೀವನೋತ್ಸಾಹ ನಿಜಕ್ಕೂ ಸ್ಫೂರ್ತಿದಾಯಕ ಎಂದು ಕ್ರಿಕೆಟಿಡಿಗ ವಿವಿಎಸ್‌ ಲಕ್ಷ್ಮಣ್‌ ಈಕೆಯ ಸ್ಟೋರಿಯನ್ನು  ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಬೆಂಗಳೂರಿನ “ಕರಿ ದೋಸಾ” ಸ್ಟಾಲ್‌ ಮಾಲೀಕರಾದ ವೀಣಾ ಅಂಬರೀಶ್‌ ಎಂಬ ಯುವತಿಯ ಸ್ಪೂರ್ತಿದಾಯಕ ಕಥೆಯಿದು. ಭರತನಾಟ್ಯ ಕಲಾವಿದೆಯಾದ ವೀಣಾ ತನ್ನ  17 ನೇ ವಯಸ್ಸಿನಲ್ಲಿ ಬಸ್‌ ಅಪಘಾತವೊಂದರಲ್ಲಿ ಬಲಗಾಲನ್ನು ಕಳೆದುಕೊಳ್ಳುತ್ತಾಳೆ. ಈ ಭೀಕರ ಅಪಘಾತದ ಆಘಾತದಿಂದ ಖಿನ್ನತೆ ಜಾರಿದ ವೀಣಾ ಆತ್ಮಹತ್ಯೆ ಮಾಡಲು ನಿರ್ಧರಿಸಿದ್ದುಂಟು. ಕೊನೆಗೆ ಅಂಗವೈಕಲ್ಯ ಕೇವಲ ದೇಹಕ್ಕೆ ಹೊರತು, ಮನಸ್ಸಿಗಲ್ಲ ಎಂದು ಬದುಕುವ ದೃಢ ನಿರ್ಧಾರ ಮಾಡಿ ವಿದ್ಯಾಭ್ಯಾಸವನ್ನು ಮುಂದುವರೆಸಿ, ಎಂ.ಬಿ.ಎ ಪದವಿಯನ್ನು ಪಡೆದು IT ಕಂಪೆನಿಯೊಂದರಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುತ್ತಾಳೆ ವೀಣಾ.

ಆದರೆ ಸುದೀರ್ಘ ಕಾಲ ಕುಳಿತು ಕೆಲಸ ಮಾಡಲು ಸಾಧ್ಯವಾಗದ ಕಾರಣ, ಐಟಿ ಕೆಲಸವನ್ನು ಬಿಡಬೇಕಾಗುತ್ತದೆ. ಆದರೆ ನಂತರ ಜೀವನ ಮುನ್ನಡೆಸಲು ಏನು ಮಾಡುವುದು ಎಂದು ಯೋಚಿಸಿದ ವೀಣಾ, ನನಗೆ ಅಡುಗೆ ಮಾಡುವುದೆಂದರೆ ತುಂಬಾನೇ ಇಷ್ಟ ಅಲ್ವಾ, ಅದ್ರಲ್ಲೇ ಏನಾದ್ರೂ ಸಾಧನೆ ಮಾಡ್ತೀನಿ ಎಂದು, 2023 ರಲ್ಲಿ ಬೆಂಗಳೂರಿನಲ್ಲಿ “ಕರಿ ದೋಸಾ” ಎಂಬ ಹೆಸರಿನ ದೋಸೆ ಸ್ಟಾಲ್‌ ಒಂದನ್ನು ಓಪನ್‌ ಮಾಡುತ್ತಾಳೆ. ಇದೀಗ ಆಕೆ ಯಶಸ್ವಿಯಾಗಿ ತಮ್ಮ ಉದ್ಯಮವನ್ನು ನಡೆಸಿಕೊಂಡು ಹೋಗುತ್ತಿದ್ದಾಳೆ.

ಇದನ್ನೂ ಓದಿ: ಮದುವೆ ದಿನ ತೂಕ ಇಳಿಸಿಕೊಂಡು ಸುಂದರವಾಗಿ ಕಾಣಲು ‘ಗ್ಯಾಸ್ಟ್ರಿಕ್ ಬಲೂನ್’ ಸರ್ಜರಿ ಮಾಡಿಸಿದ ಯುವತಿ ಸಾವು

ವೀಣಾ ಅಂಬರೀಶ್‌ ಕುರಿತ  ಈ ಸ್ಪೂರ್ತಿದಾಯಕ ಕಥೆಯನ್ನು ವಿವಿಎಸ್‌ ಲಕ್ಷ್ಮಣ್‌ (@VVSLaxman281) ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಧೃತಿಗೆಡದೆ ಗಟ್ಟಿಯಾಗಿ ನಿಲ್ಲಬೇಕು ಎಂಬ ವೀಣಾ ನಿಲುವು ನಮಗೆಲ್ಲರಿಗೂ ಸ್ಫೂರ್ತಿ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ಮೇ 21 ರಂದು ಹಂಚಿಕೊಳ್ಳಲಾದ ಈ ಪೋಸ್ಟ್‌ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ದಿಟ್ಟ ಹೆಣ್ಣು ನಿಜಕ್ಕೂ ನಮಗೆಲ್ಲರಿಗೂ ಸ್ಫೂರ್ತಿ ಎಂದು ವೀಣಾ ಅವರನ್ನು ನೆಟ್ಟಿಗರು ಕೊಂಡಾಡಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:54 am, Fri, 24 May 24