ಮದುವೆ ದಿನ ತೂಕ ಇಳಿಸಿಕೊಂಡು ಸುಂದರವಾಗಿ ಕಾಣಲು ‘ಗ್ಯಾಸ್ಟ್ರಿಕ್ ಬಲೂನ್’ ಸರ್ಜರಿ ಮಾಡಿಸಿದ ಯುವತಿ ಸಾವು; ಏನಿದು ಸರ್ಜರಿ?
ಯುವತಿಯೊಬ್ಬಳು ತನ್ನ ಮದುವೆಯ ದಿನ ಗೌನ್ನಲ್ಲಿ ಗೊಂಬೆಯಂತೆ ಕಾಣಲು ತೂಕ ಇಳಿಸಿಕೊಳ್ಳಲು ಮುಂದಾಗಿದ್ದಾಳೆ. ಸುಮಾರು 8ಕೆಜಿ ತೂಕ ಕಳೆದುಕೊಳ್ಳಲು ಬಯಸಿದ್ದು, ಇದಕ್ಕಾಗಿ ಏಪ್ರಿಲ್ 26 ರಂದು ಹೊಟ್ಟೆಯೊಳಗೆ 'ಗ್ಯಾಸ್ಟ್ರಿಕ್ ಬಲೂನ್' ಸರ್ಜರಿ ಮಾಡಿಸಿಕೊಂಡಿದ್ದಾಳೆ. ಏನಿದು ಸರ್ಜರಿ? ಇಲ್ಲಿದೆ ವಿವರ
ಬ್ರೆಜಿಲ್: ಮದುವೆ ಎಂಬುದು ಪ್ರತಿಯೊಬ್ಬರ ಜೀವನದಲ್ಲಿ ಒಂದು ಸುಂದರ ಮತ್ತು ಅಪರೂಪದ ಕ್ಷಣವಾಗಿದೆ. ಈ ವಿಶೇಷ ದಿನದಂದು ಸುಂದರವಾಗಿ ಕಾಣಬೇಕೆಂಬುದು ಪ್ರತಿಯೊಬ್ಬರ ಕನಸು. ಇದೀಗ ಬ್ರೆಜಿಲ್‌ನ ಯುವತಿಯೊಬ್ಬಳು ತನ್ನ ಮದುವೆಯ ದಿನ ಗೌನ್ನಲ್ಲಿ ಗೊಂಬೆಯಂತೆ ಕಾಣಲು ತೂಕ ಇಳಿಸಿಕೊಳ್ಳಲು ಮುಂದಾಗಿದ್ದಾಳೆ. ಆದರೆ ತೂಕ ಇಳಿಕೆಯ ಡಯೆಟ್ ಆಕೆಯನ್ನು ಮದುವೆ ಪಲ್ಲಕ್ಕಿಯಲ್ಲಿ ಕೂರಿಸುವ ಬದಲಾಗಿ ಶವದ ಪೆಟ್ಟಿಗೆಯಲ್ಲಿ ಮಲಗುವಂತೆ ಮಾಡಿದೆ.
ಮೃತ ಯುವತಿ ಲಾರಾ ಫೆರ್ನಾಂಡಿಸ್ ಕೋಸ್ಟಾ(31) ಎಂದು ಗುರುತಿಸಲಾಗಿದೆ. ಲಾರಾ ತನ್ನ ಬಹುಕಾಲದ ಪ್ರಿಯಕರ ಮ್ಯಾಥ್ಯೂಸ್ ನೊಂದಿಗೆ ವಿವಾಹವಾಗಲು ಸೆಪ್ಟೆಂಬರ್ 7ರಂದು ದಿನ ನಿಗದಿಯಾಗಿತ್ತು. ಇನ್ನೇನು ಮದುವೆಗೆ ತಿಂಗಳುಗಳು ಬಾಕಿ ಇರುವಾಗ ತೂಕ ಇಳಿಸಿಕೊಳ್ಳಲು ಬಯಸಿದ್ದಾಳೆ. ಹೀಗಾಗಿ ಸುಮಾರು 8ಕೆಜಿ ತೂಕ ಕಳೆದುಕೊಳ್ಳಲು ಬಯಸಿದ್ದು, ಇದಕ್ಕಾಗಿ ಏಪ್ರಿಲ್ 26 ರಂದು ಬ್ರೆಜಿಲ್‌ನ ಬೆಲೊ ಹಾರಿಜಾಂಟೆಯ ಕ್ಲಿನಿಕ್‌ನಲ್ಲಿ ಹೊಟ್ಟೆಯೊಳಗೆ ‘ಗ್ಯಾಸ್ಟ್ರಿಕ್ ಬಲೂನ್’ ಸರ್ಜರಿ ಮಾಡಿಸಿಕೊಂಡಿದ್ದಾಳೆ. ಆದರೆ ಸರ್ಜರಿಯಾದ ಕೆಲ ದಿನಗಳ ಬಳಿಕ ಆರೋಗ್ಯದಲ್ಲಿ ಏರುಪೇರಾಗಿದ್ದು, ಮೇ 01ರಂದು ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ತಾಳಿ ಕಟ್ಟುವಾಗ ವಧುವಿಗೆ ಮುತ್ತಿಟ್ಟ ವರ; ರಣರಂಗವಾದ ಕಲ್ಯಾಣ ಮಂಟಪ
ವೈದ್ಯರು ಆಕೆಯನ್ನು ಪರೀಕ್ಷಿಸಿ ಆಕೆಯ ಹೊಟ್ಟೆಯೊಳಗಿದ್ದ ಗ್ಯಾಸ್ಟ್ರಿಕ್ ಬಲೂನ್ ಹೊರ ತೆಗೆದಿದ್ದಾರೆ. ಬಳಿಕ ಆಕೆಯ ಹೊಟ್ಟೆಯಲ್ಲಿ ರಂಧ್ರ ಉಂಟಾಗಿದ್ದು, ಅದು ಹೊಟ್ಟೆಯ ಸುತ್ತಲೂ ಸೋಂಕನ್ನು ಉಂಟುಮಾಡಿದೆ ಎಂದು ವೈದ್ಯರು ತಿಳಿಸಿದ್ದಾರೆ. ತೀವ್ರ ನಿಗಾ ಘಟಕದಲ್ಲಿದ್ದ ಯುವತಿ ಮೇ 07ರಂದು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಏನಿದು ‘ಗ್ಯಾಸ್ಟ್ರಿಕ್ ಬಲೂನ್’ ಸರ್ಜರಿ?
ಗ್ಯಾಸ್ಟ್ರಿಕ್ ಬಲೂನ್ ಅನ್ನು ಇಂಟ್ರಾಗ್ಯಾಸ್ಟ್ರಿಕ್ ಬಲೂನ್ ( IGB ) ಅಥವಾ ಹೊಟ್ಟೆಯ ಬಲೂನ್ ಎಂದೂ ಕರೆಯುತ್ತಾರೆ. ಗಾಳಿ ತುಂಬಿದ ಬಲೂನ್ ಅನ್ನು ಟ್ಯೂಬ್ ಮೂಲಕ ಮೌಖಿಕವಾಗಿ ನಿಮ್ಮ ಹೊಟ್ಟೆಯೊಳಗೆ ಇರಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ, ಲವಣಯುಕ್ತ ತುಂಬಿದ ಸಿಲಿಕೋನ್ ಚೀಲ ಹೊಟ್ಟೆಯೊಳಗೆ ಪೂರ್ಣತೆಯ ಭಾವನೆಯನ್ನು ಉಂಟುಮಾಡುತ್ತದೆ. ಹೀಗಾಗಿ ಹೆಚ್ಚು ತಿನ್ನುವುದನ್ನು ತಡೆಯುತ್ತದೆ. ಹೀಗಾಗಿ ವೇಗವಾಗಿ ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ