
ಒಬ್ಬರೊಬ್ಬರ ನಡವಳಿಕೆ ಒಂದೊಂದು ರೀತಿ, ಆದರೆ ಕೆಲವರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ವರ್ತಿಸಬೇಕು ಎಂದು ತಿಳಿದಿರುವುದಿಲ್ಲ. ಇನ್ನು ಕೆಲವರು ತಮ್ಮ ಬಗ್ಗೆ ಸುತ್ತಮುತ್ತಲಿನ ಜನರು ಗಮನಿಸುತ್ತಾರೆ ಎನ್ನುವ ಪರಿವೇ ಇಲ್ಲದೇ ಮನಸ್ಸೋ ಇಚ್ಛೆಯಂತೆ ವರ್ತಿಸುತ್ತಾರೆ. ಹೌದು, ವಿದೇಶದಿಂದ ಭಾರತಕ್ಕೆ ಬಂದ ವ್ಯಕ್ತಿಯೊಬ್ಬರು (Foreigner) ಕಾರು ಚಾಲಕರ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಅಂತ್ಯವಿಲ್ಲದ ಫೋನ್ ಕರೆಯಿಂದ ಹಾಗೂ ಓವರ್ ಟೇಕ್ ವರೆಗೆ ಭಾರತೀಯ ಕಾರು ಚಾಲಕರು (car driver) ಇರುವುದು ಹೀಗೆಯೇ ಎನ್ನುವ ಪ್ರಶ್ನೆಯೊಂದು ಈ ವ್ಯಕ್ತಿಯಲ್ಲಿ ಮೂಡಿದೆ. ಈ ಬಗ್ಗೆ ಪೋಸ್ಟ್‌ನಲ್ಲಿ ಹಂಚಿಕೊಂಡು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
r/india ಹೆಸರಿನ ರೆಡ್ಡಿಟ್ ಖಾತೆಯಲ್ಲಿ ವಿದೇಶಿಗರೊಬ್ಬರು ಭಾರತದಲ್ಲಿ ಕಾರಿನಲ್ಲಿ ಓಡಾಡುತ್ತಿದ್ದ ಚಾಲಕನ ನಡವಳಿಕೆಯನ್ನು ಗಮನಿಸಿದ್ದು, ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಈ ಪೋಸ್ಟ್‌ನಲ್ಲಿ ಹೀಗೆ ಬರೆದುಕೊಂಡಿದ್ದು, ಕಳೆದ ಕೆಲವು ವಾರಗಳಿಂದ ನಾನು ವಿವಿಧ ಕಂಪನಿಗಳ ಖಾಸಗಿ ಚಾಲಕರೊಂದಿಗೆ ಭಾರತದಲ್ಲಿ ಪ್ರಯಾಣಿಸುತ್ತಿದ್ದೇನೆ. ಇದು ಭಾರತೀಯ ಚಾಲಕರ ಬಗ್ಗೆ ದೂರುವುದಲ್ಲ. ನನಗೆ ಸಿಕ್ಕ ಎಲ್ಲಾ ಚಾಲಕರು ಮಾಡುವುದನ್ನು ನಾನು ಇಲ್ಲಿ ಹೇಳುತ್ತಿರುವುದು. ನಾನು ನೋಡಿರುವ ಈ ಎರಡು ವಿಷಯಗಳನ್ನು ನಾನು ಅರ್ಥಮಾಡಿಕೊಳ್ಳಲು ಬಯಸುತ್ತೇನೆ ಎಂದಿದ್ದಾರೆ.
ಹೆದ್ದಾರಿಯಲ್ಲಿ ಕಾರು ಚಾಲಕರು ನಿಗದಿಪಡಿಸಿದ ವೇಗ ಮಿತಿಗಿಂತ ಕಡಿಮೆ ವೇಗದಲ್ಲಿ ವಾಹನ ಚಲಾಯಿಸುತ್ತಾರೆ. ನಾವು ಹೆಚ್ಚಾಗಿ ಸ್ಪಷ್ಟವಾದ, ಅಗಲವಾದ ಹಾಗೂ ಸುಗಮವಾಗಿ ಸಂಚರಿಸಬಹುದಾದ ಟೋಲ್ ರಸ್ತೆಗಳಲ್ಲಿ ಪ್ರಯಾಣಿಸಿದೆವು. ಆದರೆ ವೇಗ ಮಿತಿ 100 ಅಥವಾ 120 ಕಿಮೀ ಇದ್ದಾಗಲೂ ಎಲ್ಲಾ ಚಾಲಕರು ವಿನಾಯಿತಿ ಇಲ್ಲದೆ 70-80 ಕಿಮೀ ವೇಗದಲ್ಲಿ ವಾಹನ ಚಲಾಯಿಸಿದರು. ವೇಗ ಮಿತಿಯನ್ನು ಮೀರಲು ಬಯಸುವುದಿಲ್ಲ ಎಂದು ನನಗೆ ಅರ್ಥವಾಗುತ್ತದೆ. ಆದರೆ ಅವರು ಏಕೆ ನಿಧಾನವಾಗಿ ಚಾಲನೆ ಮಾಡುತ್ತಾರೆ? ನನಗೆ ಸಿಕ್ಕ ಚಾಲಕರು ಮಾತ್ರವಲ್ಲ, ಹೆಚ್ಚಿನ ಜನರು ಅದೇ ವೇಗದಲ್ಲಿ ಚಾಲನೆ ಮಾಡುತ್ತಿದ್ದರು. ನಗರಗಳಲ್ಲಿ ಚಾಲಕರು ಇತರಕಾರುಗಳನ್ನು ಹಿಂದಿಕ್ಕಿ ಮುಂದಕ್ಕೆ ಹೋಗುವುದು, ತಪ್ಪಾದ ದಾರಿಯಲ್ಲಿ ವಾಹನ ಚಲಾಯಿಸುವುದು. ಹೆದ್ದಾರಿಗಳಲ್ಲಿ ಚಾಲಕರು ತುಂಬಾ ಜಾಗರೂಕರಾಗಿರುತ್ತಾರೆ. ಆದರೆ ನಗರಗಳಲ್ಲಿ ಹೆಚ್ಚು ಅಜಾಗರೂಕತೆಯಿಂದ ವಾಹನ ಚಲಾಯಿಸುತ್ತಾರೆ ಎಂದು ಬರೆದುಕೊಂಡಿದ್ದಾರೆ.
ಮತ್ತೊಂದು ಕಾರು ಚಾಲಕರಲ್ಲಿ ಗಮನಿಸಿದ ಅಂಶವೆಂದರೆ ಅತಿಯಾದ ಫೋನ್ ಬಳಕೆ. ನಮ್ಮ ರಜಾದಿನಗಳಲ್ಲಿ ನಾವು ಒಟ್ಟಾರೆಯಾಗಿ 30-40 ಗಂಟೆಗಳ ಕಾಲ ವಿವಿಧ ಕಾರುಗಳಲ್ಲಿ ವಿಭಿನ್ನ ಚಾಲಕರೊಂದಿಗೆ ಕಳೆದಿದ್ದೇವೆ. ಆದರೆ ಆ ಸಮಯದಲ್ಲಿ ಅವರು 80% ರಷ್ಟು ಫೋನ್‌ನಲ್ಲಿ ಮಾತನಾಡುತ್ತಿದ್ದರು. ಇಷ್ಟು ಹೊತ್ತು ಏನು ಮಾತನಾಡುತ್ತಿರಬಹುದು, ಅವರು ಚಾಲನೆ ಮಾಡುವಾಗ ಬೇರೆ ಕೆಲಸಗಳನ್ನು ಹೊಂದಿದ್ದಾರೆಯೇ ಅಥವಾ ಇತರ ವ್ಯವಹಾರಗಳನ್ನು ನಡೆಸುತ್ತಾರೆಯೇ?. ಕಾರಿನಲ್ಲಿದ್ದಾಗ, ಇತರ ಚಾಲಕರು ಸಹ ಫೋನ್‌ನಲ್ಲಿ ಮಾತನಾಡುತ್ತಿರುವುದನ್ನು ನಾನು ಗಮನಿಸಿದೆ. ಭಾರತೀಯರು ನಿರಂತರವಾಗಿ ಸ್ನೇಹಿತರು/ಕುಟುಂಬ ಸದಸ್ಯರೊಂದಿಗೆ ಮಾತನಾಡುವುದು ಅಥವಾ ಏನಾದರೂ ಸಾಂಸ್ಕೃತಿಕ ವಿಷಯವೇ? ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: Video: ರಸ್ತೆ ಬದಿಯಲ್ಲಿ ಡ್ಯಾನ್ಸ್ ಮಾಡ್ತಿದ್ದ ವಿದೇಶಿಗನನ್ನು ಅರೆಸ್ಟ್ ಮಾಡಿದ ಪೊಲೀಸರು, ಕಾರಣ ಇದೇ ನೋಡಿ
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಭಾರತಕ್ಕೆ ಸ್ವಾಗತ, ಒಳ್ಳೆಯ ಅವಲೋಕನ ಎಂದು ಹೇಳಿದ್ದಾರೆ. ಮತ್ತೊಬ್ಬರು, ನಮ್ಮಲ್ಲಿ ಹೆಚ್ಚಿನವರು ಟ್ರಾಫಿಕ್ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ, ಹಾಗಾಗಿ ನಮ್ಮ ದೇಶವು ಹೀಗಾಗಿದೆ ಎಂದು ವ್ಯಂಗವಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, ನಮ್ಮ ಭಾರತೀಯರು ಕೆಲಸದ ಸಮಯದಲ್ಲಿ ಮೊಬೈಲ್ ಬಳಕೆ ಹೆಚ್ಚು ಮಾಡುತ್ತಾರೆ. ಫೋನ್ ಕರೆ, ಚಾಟಿಂಗ್‌ನಲ್ಲಿ ಬ್ಯುಸಿ ಆಗಿರುತ್ತಾರೆ ಎಂದು ತಮಾಷೆಯಾಗಿ ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ