ಮದುವೆ ಪ್ರತಿಯೊಬ್ಬರ ಜೀವನದಲ್ಲಿ ನಡೆಯುವ ಮರೆಯಲಾಗದ ವಿಶೇಷ ದಿನ. ಈ ದಿನ ವಿಶೇಷವಾಗಿರಬೇಕು, ಯಾವುದೇ ರೀತಿಯಲ್ಲಿ ಕುಂದು ಕೊರತೆಗಳು ಬರಬಾರದೆಂದು, ಒಂದೆರಡು ತಿಂಗಳುಗಳ ಹಿಂದಿನಿಂದಲೇ ಸಾಕಷ್ಟು ತಯಾರಿಗಳನ್ನು ನಡೆಸಲಾಗುತ್ತದೆ. ಆದೇ ರೀತಿ ಇಲ್ಲೊಂದು ಕುಟುಂಬವು ಸಕಲ ಸೌಕರ್ಯದೊಂದಿಗೆ ಮದುವೆ ನಡೆಸಲು ಮುಂದಾಗಿದೆ. ಜೊತೆಗೆ ವಧುವಿನ ಮನೆಯಲ್ಲಿ ಮದುವೆ ಆಯೋಜಿಸಿದ್ದರಿಂದ, ವರನ ಕುಟುಂಬವು ಮದುವೆಯ ಅದ್ಧೂರಿ ಮೆರವಣಿಗೆಗಾಗಿ 4 ಕಾರುಗಳನ್ನು ವ್ಯವಸ್ಥೆಗೊಳಿಸಲಾಗಿತ್ತು, ಆದರೆ ವರ ಹಾಗೂ ಆತನ ಕುಟುಂಬದವರು ಸುಮಾರೂ 28 ಕಿಲೋ ಮೀ ಅಂದರೆ ರಾತ್ರೀ ಪೂರ್ತಿ ನಡೆದು ಮರುದಿನ ಮುಂಜಾನೆ ವಧುವಿನ ಮನೆಗೆ ತಲುಪಿದ್ದಾರೆ. ಅಷ್ಟೆಲ್ಲಾ ವಾಹನಗಳ ವ್ಯವಸ್ಥೆ ಇದ್ದರು ಕೂಡ ನಡೆದುಕೊಂಡು ಯಾಕೆ ಬರಬೇಕಿತ್ತು? ಎಂಬುದು ಸಾಕಷ್ಟು ಜನರಲ್ಲಿ ಕಾಡುವ ಪ್ರಶ್ನೆ. ಹಾಗಿದ್ರೆ ಈ ಸ್ಟೋರಿ ಪೂರ್ತಿಯಾಗಿ ಓದಿ.
ಒಡಿಶಾದ ರಾಯಗಡ ಜಿಲ್ಲೆಯ ವಧುವಿನ ಗ್ರಾಮಕ್ಕೆ ಮದುವೆಗಾಗಿ ವರ ನರೇಶ್ ಪ್ರಾಸ್ಕಾ(22) ಮತ್ತು ಅವರ ಕುಟುಂಬ ಸದಸ್ಯರು 28 ಕಿಲೋಮೀಟರ್ ನಡೆದುಕೊಂಡು ಹೋಗಿದ್ದಾರೆ. ಕಲ್ಯಾಣಸಿಂಗ್‌ಪುರ ಬ್ಲಾಕ್‌ನ ಸುನಖಂಡಿ ಪಂಚಾಯಿತಿಯಿಂದ ಗುರುವಾರ ರಾತ್ರಿಯಿಡೀ ನಡೆದುಕೊಂಡು ದಿಬಳಪಾಡು ಗ್ರಾಮಕ್ಕೆ ಆಗಮಿಸಿ ಅಲ್ಲಿ ಶುಕ್ರವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಒಡಿಶಾದಲ್ಲಿ ಚಾಲಕರ ಮುಷ್ಕರ ನಡೆಯುತ್ತಿದ್ದ ಕಾರಣದಿಂದಾಗಿ ವಾಹನ ವ್ಯವಸ್ಥೆಗೆ ತಡೆಯಾಗಿದೆ. ವಿಮೆ, ಪಿಂಚಣಿ, ಕಲ್ಯಾಣ ಮಂಡಳಿ ರಚನೆ ಮತ್ತಿತರ ಸಮಾಜ ಕಲ್ಯಾಣ ಕ್ರಮಗಳಿಗೆ ಆಗ್ರಹಿಸಿ ಚಾಲಕ ಏಕತಾ ಮಹಾಸಂಘ ಬುಧವಾರದಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದು, ಇದುವೇ ಈ ವರನ ಕುಟುಂಬಕ್ಕೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಒಡಿಶಾದಲ್ಲಿ ವಾಣಿಜ್ಯ ವಾಹನಗಳ ಚಾಲಕರು ನಡೆಸುತ್ತಿದ್ದ ಮುಷ್ಕರವನ್ನು ಶುಕ್ರವಾರ 90 ದಿನಗಳ ಕಾಲ ತಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ ರಾಜ್ಯ ಸರ್ಕಾರವು ಭರವಸೆ ನೀಡಿದ ನಂತರ ಸ್ಥಗಿತಗೊಳಿಸಲಾಯಿತು.
ಇದನ್ನೂ ಓದಿ: ಬಿಎಂಟಿಸಿಯ ಎಲೆಕ್ಟ್ರಿಕ್ ಬಸ್ನ ವಿಶೇಷ ಸೌಲಭ್ಯ ಕಂಡು ಕಂಡಕ್ಟರ್ಗೆ ಕೈಮುಗಿದ ವಿದೇಶಿ ಪ್ರಜೆ
ಮುಖ್ಯ ಕಾರ್ಯದರ್ಶಿ ಪಿಕೆ ಜೆನಾ ಮತ್ತು ಡಿಜಿಪಿ ಎಸ್‌ಕೆ ಬನ್ಸಾಕ್ ಅವರು ಮುಷ್ಕರವನ್ನು ಹಿಂಪಡೆಯುವಂತೆ ಮುಷ್ಕರ ನಿರತ ಚಾಲಕರಿಗೆ ಮನವಿ ಮಾಡಿದ ಕೆಲವೇ ಗಂಟೆಗಳ ನಂತರ ಚಾಲಕರ ಏಕತಾ ಮಹಾಸಂಘದ ಪ್ರಕಟಣೆ ಹೊರಬಿದ್ದಿದೆ. ಚಾಲಕರ ಮುಷ್ಕರದಿಂದಾಗಿ ಯಾವುದೇ ಸಾರಿಗೆ ಲಭ್ಯವಿಲ್ಲ. ನಾವು ಹಳ್ಳಿಗೆ ತಲುಪಲು ರಾತ್ರಿಯಿಡೀ ನಡೆದಿದ್ದೇವೆ. ನಮಗೆ ಬೇರೆ ದಾರಿ ಇರಲಿಲ್ಲ” ಎಂದು ವರನ ಕುಟುಂಬದ ಸದಸ್ಯರೊಬ್ಬರು ಮಧ್ಯಮಗಳಿಗೆ ತಿಳಿಸಿದ್ದಾರೆ.
ದ್ವಿಚಕ್ರ ವಾಹನಗಳಲ್ಲಿ ಮದುವೆಗೆ ಬೇಕಾದ ಸಾಮಗ್ರಿಗಳನ್ನು ಕಳುಹಿಸಲಾಗಿತ್ತು. ಎಂಟು ಮಹಿಳೆಯರು ಸೇರಿದಂತೆ ಕುಟುಂಬದ ಸುಮಾರು 30 ಸದಸ್ಯರು, ಸಂಬಂಧಿಕರು ಮತ್ತು ಸ್ನೇಹಿತರು ಕಾಲ್ನಡಿಗೆಯಲ್ಲಿ ವಧುವಿನ ಮನೆಗೆ ಹೋಗಲು ನಿರ್ಧರಿಸಿದೆವು. ಇದು ಸ್ಮರಣೀಯ ಅನುಭವ” ಎಂದು ವರ ನರೇಶ್ ಹೇಳಿದ್ದಾರೆ. ಮಹಿಳೆಯರು ಸೇರಿದಂತೆ ವರ ಮತ್ತು ಅವರ ಕುಟುಂಬ ಸದಸ್ಯರು ರಾತ್ರಿಯಲ್ಲಿ ನಡೆದುಕೊಂಡು ಹೋಗುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: