19ನೇ ವಯಸ್ಸಿಗೆ ಮದುವೆ, ಸುಪ್ರೀಂಕೋರ್ಟ್ನಲ್ಲಿ ಪ್ರಕರಣ, ಸಿನಿಮಾ-ರಾಜಕೀಯದಲ್ಲಿ ಯಶಸ್ಸು; ಜಗ್ಗೇಶ್ ಬದುಕಿನ ಅಪರೂಪದ ವಿಚಾರಗಳು
Jaggesh Birthday: ಸಿನಿಮಾ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಅವರಿಗೆ ಯಶಸ್ಸು ಸಿಕ್ಕಿದೆ. ಜಗ್ಗೇಶ್ ನಡೆದು ಬಂದ ಹಾದಿ ತುಂಬಾನೇ ಏಳುಬೀಳುಗಳಿಂದ ಕೂಡಿತ್ತು. ಆ ಬಗ್ಗೆ ಇಲ್ಲಿದೆ ಮಾಹಿತಿ.

ಜಗ್ಗೇಶ್ (Jaggesh) ಅವರು ಇಂದು (ಮಾರ್ಚ್ 17) 60ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಜಗ್ಗೇಶ್ ಬದುಕಿನ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ. ಅವರು ಸಾಕಷ್ಟು ಏಳುಬೀಳುಗಳನ್ನು ಕಂಡು ಈ ಹಂತಕ್ಕೆ ಬಂದಿದ್ದಾರೆ. ಅವರ ಯಶಸ್ಸಿನ ಹಿಂದೆ ಹಲವು ವರ್ಷಗಳ ಶ್ರಮ ಇದೆ. ಸಿನಿಮಾ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಅವರಿಗೆ ಯಶಸ್ಸು ಸಿಕ್ಕಿದೆ. ಜಗ್ಗೇಶ್ (Jaggesh Birthday) ನಡೆದು ಬಂದ ಹಾದಿ ತುಂಬಾನೇ ಏಳುಬೀಳುಗಳಿಂದ ಕೂಡಿತ್ತು. ಆ ಬಗ್ಗೆ ಇಲ್ಲಿದೆ ಮಾಹಿತಿ.
ಸಣ್ಣ ವಯಸ್ಸಲ್ಲೇ ಮದುವೆ
ಜಗ್ಗೇಶ್ ಮತ್ತು ಪರಿಮಳಾ ಅವರದ್ದು ಲವ್ ಮ್ಯಾರೇಜ್. ಕೆಲವೇ ಕೆಲವು ಸ್ನೇಹಿತರ ಸಮ್ಮುಖದಲ್ಲಿ 1984ರ ಮಾ.22ರಂದು ಜಗ್ಗೇಶ್ ಮತ್ತು ಪರಿಮಳಾ ರಿಜಿಸ್ಟರ್ ಮ್ಯಾರೇಜ್ ಆದರು. ಆಗ ಪರಿಮಳಾ ಅವರಿಗೆ ಕೇವಲ 14 ವರ್ಷ. ಜಗ್ಗೇಶ್ ಅವರಿಗೆ 19ರ ಪ್ರಾಯ. ಈ ಮದುವೆಗೆ ಮನೆಯವರಿಂದ ವಿರೋಧ ವ್ಯಕ್ತವಾಯಿತು. ಮದುವೆಯಾದ ಮೂರನೇ ದಿನವೇ ಪರಿಮಳಾ ತಂದೆ ಬಂದು ಪರಿಮಳಾರನ್ನು ಕರೆದುಕೊಂಡು ಮದ್ರಾಸ್ಗೆ ಹೋದರು. ನಂತರ ಒಂದೂವರೆ ವರ್ಷ ಜಗ್ಗೇಶ್ ಹಾಗೂ ಪರಿಮಳಾ ಇಬ್ಬರ ನಡುವೆ ಸಂಪರ್ಕ ಇರಲಿಲ್ಲ. ಬಳಿಕ ಬೆಂಗಳೂರಿನಿಂದ ಮದ್ರಾಸ್ಗೆ ತೆರಳಿದ ಜಗ್ಗೇಶ್ ಅವರು ಮಡದಿಯನ್ನು ಕರೆದುಕೊಂದು ಬಂದೇ ಬಿಟ್ಟರು. ಪರಿಮಳಾ ತಂದೆ ಜಗ್ಗೇಶ್ ವಿರುದ್ಧ 6 ಕೇಸ್ ದಾಖಲಿಸಿದರು. ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಅಲ್ಲಿ ಜಗ್ಗೇಶ್-ಪರಿಮಳಾ ಪ್ರೀತಿಗೆ ಜಯ ಸಿಕ್ಕಿತು.
ಹೀರೋ ಆಗಲು ಬೇಕಾಯ್ತು 10 ವರ್ಷ
1982ರಲ್ಲಿ ರಿಲೀಸ್ ಆದ ‘ಇಬ್ಬನಿ ಕರಗಿತು’ ಅವರು ಬಣ್ಣ ಹಚ್ಚಿದ ಮೊದಲ ಸಿನಿಮಾ. ಜಗ್ಗೇಶ್ ಅವರು ಹೀರೋ ಆಗಿ ಮಿಂಚಿದ ಮೊದಲ ಸಿನಿಮಾ ಉಪೇಂದ್ರ ನಿರ್ದೇಶನದ ‘ತರ್ಲೆ ನನ್ಮಗ’. 1992ರಲ್ಲಿ ರಿಲೀಸ್ ಆದ ಈ ಚಿತ್ರದಿಂದ ಜಗ್ಗೇಶ್ಗೆ ದೊಡ್ಡ ಯಶಸ್ಸು ಸಿಕ್ಕಿತು. ನಂತರ ಸಾಲು ಸಾಲು ಆಫರ್ಗಳು ಅವರ ಕೈ ಸೇರಿದವು. ಜಗ್ಗೇಶ್ ಹೀರೋ ಆಗೋಕೆ ತೆಗೆದುಕೊಂಡಿದ್ದು ಬರೋಬ್ಬರಿ 10 ವರ್ಷ. 30ಕ್ಕೂ ಅಧಿಕ ಚಿತ್ರಗಳಲ್ಲಿ ಪೋಷಕ ಪಾತ್ರ, ವಿಲನ್ ಪಾತ್ರ ಮಾಡಿದ ನಂತರ ಅವರಿಗೆ ಹೀರೋ ಆಗುವ ಅವಕಾಶ ಸಿಕ್ಕಿತು.
ಹೀರೋ ಆಗಿ ಒಪ್ಪಿಕೊಂಡ ಸಿನಿಮಾ ‘ಭಂಡ ನನ್ ಗಂಡ’
ಜಗ್ಗೇಶ್ ಹೀರೋ ಆಗಿ ಒಪ್ಪಿಕೊಂಡ ಮೊದಲ ಸಿನಿಮಾ ‘ಭಂಡ ನನ್ನ ಗಂಡ’. ಆದರೆ, ಮೊದಲು ರಿಲೀಸ್ ಆಗಿದ್ದು, ‘ತರ್ಲೆ ನನ್ಮಗ’. ಈ ಚಿತ್ರಕ್ಕೆ ಜಗ್ಗೇಶ್ ಅವರ ಭಾವ ಬಂಡವಾಳ ಹೂಡಿದ್ದರು. ಈ ಚಿತ್ರದಲ್ಲಿ ಅಂಬರೀಷ್ ಅವರು ಅತಿಥಿ ಪಾತ್ರ ಮಾಡಿದ್ದರು. ಜಗ್ಗೇಶ್ಗೆ ಅವರು ಬೆಂಬಲವಾಗಿ ನಿಂತಿದ್ದರು.
ಕನ್ನಡ ಚಿತ್ರರಂಗಕ್ಕೆ ಸೇವೆ
ಜಗ್ಗೇಶ್ ಅವರು ಕನ್ನಡ ಚಿತ್ರರಂಗ ಬಿಟ್ಟು ಹೊರಗೆ ಹೋದವರಲ್ಲ. ಪರಭಾಷೆಯಿಂದ ಆಫರ್ಗಳು ಬಂದರೂ ಅದನ್ನು ಒಪ್ಪಿಲ್ಲ. ಅವರ ಕಲಾ ಸೇವೆ ಕನ್ನಡಕ್ಕೆ ಮಾತ್ರ ಮುಡಿಪಿದೆ. ಈ ಕಾರಣಕ್ಕೂ ಅವರು ತುಂಬಾನೇ ವಿಶೇಷ ಎನಿಸಿಕೊಳ್ಳುತ್ತಾರೆ.
ನಿರ್ದೇಶನ, ನಿರ್ಮಾಣ
ಜಗ್ಗೇಶ್ ಅವರು ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದರು. ‘ಗುರು’ ಹಾಗೂ ‘ಮೇಲುಕೋಟೆ ಮಂಜ’ ಚಿತ್ರವನ್ನು ಅವರು ನಿರ್ದೇಶನ ಮಾಡಿದ್ದರು. ‘ಮೇಕಪ್’ ಹೆಸರಿನ ಚಿತ್ರವನ್ನು ಜಗ್ಗೇಶ್ ನಿರ್ಮಾಣ ಮಾಡಿದ್ದರು. ಇದಕ್ಕೆ ಕಥೆ ಬರೆದಿದ್ದು ಅವರ ಮಗ ಗುರುರಾಜ್. ಸಿಂಗೀತಂ ಶ್ರೀನಿವಾಸರಾವ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಆದರೆ, ಚಿತ್ರ ಹೇಳಿಕೊಳ್ಳುವಂತಹ ಯಶಸ್ಸು ಕಂಡಿಲ್ಲ.
ರಾಜ್ಕುಮಾರ್ ಕುಟುಂಬದ ಜೊತೆ ಒಡನಾಟ
ರಾಜ್ಕುಮಾರ್ ಕುಟುಂಬದ ಜೊತೆ ಜಗ್ಗೇಶ್ಗೆ ಒಳ್ಳೆಯ ಒಡನಾಟ ಇದೆ. ರಾಜ್ಕುಮಾರ್ ಬಗ್ಗೆ ಜಗ್ಗೇಶ್ಗೆ ತುಂಬಾನೇ ಪ್ರೀತಿ ಹಾಗೂ ವಿಶೇಷ ಗೌರವ ಇದೆ. ಪುನೀತ್ ಅವರನ್ನು ಕಂಡರೂ ಅಷ್ಟೇ. ಇಬ್ಬರೂ ಹುಟ್ಟಿದ ದಿನಾಂಕ ಒಂದೇ ಅನ್ನೋದು ವಿಶೇಷ.
ರಾಘವೇಂದ್ರ ಸ್ವಾಮಿ ಭಕ್ತರು
ಜಗ್ಗೇಶ್ ಅವರು ಇಷ್ಟು ಎತ್ತರಕ್ಕೆ ಬೆಳೆಯಲು ರಾಯರ ಕೃಪೆ ಕಾರಣ ಎಂದು ಅತೀವವಾಗಿ ನಂಬುತ್ತಾರೆ. ಪ್ರತಿ ಹಂತದಲ್ಲೂ ಗುರು ರಾಘವೇಂದ್ರ ಸ್ವಾಮಿಯನ್ನು ಅವರು ನೆನೆಯುತ್ತಾರೆ.
ರಾಜಕೀಯದಲ್ಲಿ ಯಶಸ್ಸು
ಜಗ್ಗೇಶ್ ಮೊದಲು ಕಾಂಗ್ರೆಸ್ನಲ್ಲಿದ್ದರು. ನಂತರ ಬಿಜೆಪಿಗೆ ಬಂದರು. ಸದ್ಯ ರಾಜ್ಯಸಭಾ ಸದಸ್ಯನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದರ ಜೊತೆಗೆ ಅವರು ಚಿತ್ರರಂಗದಲ್ಲೂ ಆ್ಯಕ್ಟೀವ್ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:02 am, Fri, 17 March 23