ನಮ್ಮ ದೇಶದಲ್ಲಿ ಪ್ರತಿಭೆಗಳಿಗೆ ಯಾವ ಕೊರತೆಯೂ ಇಲ್ಲ. ಹಲವಾರು ಜನ ತಮ್ಮ ಕಲ್ಪನೆಗೆ ಹೊಸ ರೆಕ್ಕೆಯನ್ನು ಕಟ್ಟಿ ತಮ್ಮ ನೆಚ್ಚಿನ ವಾಹನಗಳ ಲುಕ್ ಅನ್ನು ವಿನ್ಯಾಸಗೊಳಿಸುವಂತಹದ್ದೋ ಅಥವಾ ಇನ್ಯಾವುದಾದರೂ ಮನೆಯಲ್ಲಿ ಕೆಟ್ಟು ಹೋದ ವಸ್ತುಗಳಿಂದ ಕಡಿಮೆ ಖರ್ಚಿನಲ್ಲಿ ಹೊಸ ಬಗೆಯ ವಸ್ತುಗಳನ್ನು ತಯಾರಿಸುವಂತಹ ಸಣ್ಣ ಪುಟ್ಟ ಆವಿಷ್ಕಾರಗಳನ್ನು ಮಾಡುತ್ತಿರುತ್ತಾರೆ. ಇಂತಹ ಜುಗಾಡ್ ಐಡಿಯಾಗಳಿಗೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಇಂತಹ ಸುದ್ದಿಗಳು ನಮ್ಮಲ್ಲಿ ಅಚ್ಚರಿಯನ್ನು ಮೂಡಿಸುತ್ತವೆ. ಸದ್ಯ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದ್ದು, ವ್ಯಕ್ತಿಯೊಬ್ಬರು ತಮ್ಮ ದೇಸಿ ಐಡಿಯಾವನ್ನು ಉಪಯೋಸಿಕೊಂಡು ಆರಾಮದಾಯಕವಾಗಿ ಸವಾರಿ ಮಾಡಬಹುದಾದಂತಹ ವಿಶಿಷ್ಟ ಬಗೆಯ ಸೈಕಲ್ ಒಂದನ್ನು ತಯಾರಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಜುಗಾಡ್ ಐಡಿಯಾವನ್ನು ಉಪಯೋಗಿಸಿಕೊಂಡು ತಯಾರಿಸಿದ ವಿಶಿಷ್ಟ ಬಗೆಯ ಸೈಕಲ್ ಅಲ್ಲಿ ವ್ಯಕ್ತಿಯೊಬ್ಬರು ಆರಾಮದಾಯಕವಾಗಿ ಕುಳಿತು ಸವಾರಿ ಮಾಡುತ್ತಿರುವಂತಹ ದೃಶ್ಯವನ್ನು ಕಾಣಬಹುದು. ಈ ವಿಡಿಯೋವನ್ನು ಬನ್ನಿ ಪುನಿಯಾ (@bunnypunia) ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಇದು ಏನು ಎಂದು ಯಾರಿಗಾದರೂ ತಿಳಿದಿದೆಯೇ? ದೆಹಲಿಯ ರಸ್ತೆಯೊಂದರಲ್ಲಿ ಸರ್ದಾರ್ ಜಿಯೊಬ್ಬರು ಕೂಲ್ ಆಗಿ ಈ ವಿಶಿಷ್ಟ ವಾಹವನ್ನು ಚಲಾಯಿಸಿಕೊಂಡು ಹೋಗುತ್ತಿದ್ದರು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಸರ್ದಾರ್ ಜಿಯೊಬ್ಬರು ನಗರದ ಬೀದಿಗಳಲ್ಲಿ ಆರಾಮದಾಯಕವಾಗಿ ಕುಳಿತುಕೊಳ್ಳಬಹುದಾದ ವಿಶಿಷ್ಟ ಬಗೆಯ ಸೈಕಲ್ ಅಲ್ಲಿ ಸವಾರಿ ಹೊರಟಿರುವ ದೃಶ್ಯವನ್ನು ಕಾಣಬಹುದು. ಈ ವಿಶೇಷ ಸೈಕಲ್ಗೆ ಕುಶನ್ ಸೀಟ್ ಬದಲಿಗೆ ಕಾರ್ ಸೀಟ್ ಅನ್ನು ಅಳವಡಿಸಲಾಗಿದೆ. ಅಷ್ಟೇ ಅಲ್ಲದೆ ಸೈಕಲಿನ ಪೆಡಲ್ಗಳ ಸ್ಥಳವನ್ನೂ ಬದಲಾಯಿಸಲಾಗಿದೆ. ಸಾಮಾನ್ಯವಾಗಿ ಎಲ್ಲಾ ಸೈಕಲ್ ಗಳಲ್ಲಿಯೂ ಪೆಡಲ್ಗಳು ಕೆಳಭಾಗದಲ್ಲಿ ಚಕ್ರದ ಪಕ್ಕದಲ್ಲಿಯೇ ಇರುತ್ತವೆ. ಆದ್ರೆ ಈ ಜುಗಾಡ್ ಸೈಕಲ್ ಅಲ್ಲಿ ಪೆಡಲ್ ಗಳನ್ನು ಸ್ವಲ್ಪ ಮೇಲ್ಭಾಗದಲ್ಲಿ ಜೋಡಿಸಲಾಗಿದೆ. ಈ ವಿಶಿಷ್ಟ ಆವಿಷ್ಕಾರದ ಸಹಾಯದಿಂದ ಆ ವ್ಯಕ್ತಿ ಆರಾಮದಾಯಕವಾಗಿ ಕುಳಿತುಕೊಂಡು ಸೈಕಲ್ ಓಡಿಸಿದ್ದಾರೆ.
ಇದನ್ನೂ ಓದಿ: ಸಿದ್ದೇಶ್ವರ ಶ್ರೀಗಳ ಸುಂದರ ಚಿತ್ರವನ್ನು ಬಿಡಿಸಿದ ಕಲಾವಿದನಿಗೆ ಕಿರು ಕಾಣಿಕೆ ನೀಡಿದ ಅಜ್ಜ
ಫೆಬ್ರವರಿ 26 ರಂದು ಹಂಚಿಕೊಳ್ಳಲಾದ ಈ ವಿಡಿಯೋ 46 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರರು ʼಇಂತಹ ಪ್ರತಿಭೆಗಳನ್ನು ಭಾರತದಲ್ಲಿ ಮಾತ್ರ ಕಾಣಸಿಗಲು ಸಾಧ್ಯʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಸೀಟ್ ಬೆಲ್ಟ್ ಧರಿಸಿ ಸಾಹೇಬ್ರೆ ಇಲ್ಲ ಅಂದ್ರೆ ನಿಮಗೂ ದಂಡ ವಿಧಿಸಬಹುದುʼ ಎಂದು ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಇದ್ಯಾವುದು ವಿಚಿತ್ರ ಬಗೆಯ ಸೈಕಲ್ ಎಂದು ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ