Viral News: 33 ವರ್ಷಗಳ ಹಿಂದೆಯೇ ಸತ್ತು ಹೋಗಿದ್ದ ಎನ್ನಲಾಗಿದ ವ್ಯಕ್ತಿ ಮರಳಿ ಮನೆಗೆ, ಅಚ್ಚರಿಗೊಂಡ ಕುಟುಂಬಸ್ಥರು
1989ರಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು 33 ವರ್ಷಗಳ ನಂತರ ತಮ್ಮ ಮನೆಗೆ ಮರಳಿ ಬಂದಿದ್ದಾರೆ. ಆತ ಸತ್ತಿದ್ದಾನೆ ಎಂದುಕೊಂಡಿದ್ದ ಮನೆಯವರು ಕುಟುಂಬದ ಹಿರಿ ವ್ಯಕ್ತಿ ಬದುಕಿರುವುದನ್ನು ಕಂಡು ಬೆರಗಾಗಿದ್ದಾರೆ.
ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು, 1989ರಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು 33 ವರ್ಷಗಳ ನಂತರ ತಮ್ಮ ಮನೆಗೆ ಮರಳಿ ಬಂದಿದ್ದಾರೆ. ಆತ ಸತ್ತಿದ್ದಾನೆ ಎಂದುಕೊಂಡಿದ್ದ ಮನೆಯವರು ಕುಟುಂಬದ ಹಿರಿ ವ್ಯಕ್ತಿ ಬದುಕಿರುವುದನ್ನು ಕಂಡು ಬೆರಗಾಗಿದ್ದಾರೆ. ಪ್ರಸ್ತುತ 75 ವರ್ಷ ವಯಸ್ಸಿನ ಹನುಮಾನ್ ಸೈನಿ ಎಂಬವರು 1989ರಲ್ಲಿ ದೆಹಲಿಯ ಖಾರಿ ಬಾವೊಲಿ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಂದ ಅವರು ಹಠಾತ್ತನೆ ಕಾಣೆಯಾದರು. ಈ ಘಟನೆ ನಡೆದು ಸುಮಾರು 3 ದಶಕಗಳ ನಂತರ ಮೇ 30 ರಂದು ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಬನ್ಸೂರ್ ಗ್ರಾಮದ ತಮ್ಮ ಮನೆಗೆ ಮರಳಿ ಬಂದಿದ್ದಾರೆ. ಕುಟುಂಬದ ಜೊತೆ ಆ ವ್ಯಕ್ತಿಯ ಪುನರ್ಮಿಲನದ ಸಂತೋಷದ ಕ್ಷಣವನ್ನು ಕಣ್ತುಂಬಿಕೊಳ್ಳಲು ಊರಿನ ಜನರೆಲ್ಲರೂ ಅವರ ಮನೆಯ ಬಳಿ ನೆರೆದಿದ್ದರು.
ವರದಿಗಳ ಪ್ರಕಾರ 33 ವರ್ಷಗಳ ಹಿಂದೆ ಕಾಣೆಯಾಗಿದ್ದ ಹನುಮಾನ್ ಸೈನಿ ಅವರು ನಿಜವಾಗಿಯೂ ಹೋಗಿದ್ದು, ಹಿಮಾಚಲ ಪ್ರದೇಶದ ಕಾಂಗ್ರಾ ಮಾತಾ ದೇವಸ್ಥಾನಕ್ಕೆ. ಅಲ್ಲಿ ಅವರು 33 ವರ್ಷಗಳ ಕಾಲ ಧ್ಯಾನ ಮಾಡುತ್ತಿದ್ದರಂತೆ. ಈ ವ್ಯಕ್ತಿಯು ಕಾಣೆಯಾಗಿದ್ದಾರೆ ಎಂದು ಭಾವಿಸಿ ಅವರ ಕುಟುಂಬವು ದಶಕಗಳಿಂದ ಅವರನ್ನು ಹುಡುಕಲು ಪ್ರಯತ್ನಿಸಿದರು. ಕೊನೆಗೂ ಅವರ ಹುಡುಕಾಟ ಫಲಕಾರಿಯಾಗದೆ, ತಂದೆಯು ಸತ್ತು ಹೋಗಿರಬಹುದೆಂದು ಭಾವಿಸಿ ಕಳೆದ ವರ್ಷ ಸೈನಿಯವರ ಅಂತಿಮ ವಿಧಿ ವಿಧಾನವನ್ನು ಕೂಡಾ ನಡೆಸಿದರು. ಮಾತ್ರವಲ್ಲದೆ ಅವರ ಮರಣ ಪತ್ರವನ್ನು ಸಹ ಪಡೆದಿದ್ದರು. ಆದರೆ ಇದೀಗ ಹಠಾತ್ತನೆ ಈ ವ್ಯಕ್ತಿಯು ಮನೆಗೆ ಮರಳಿ ಬಂದಿರುವುದು ಕುಟುಂಬದವರನ್ನು ಆಶ್ಚರ್ಯಚಕಿತಗೊಳಿಸಿದೆ.
1989ರಲ್ಲಿ ನಾನು ರೈಲಿನಲ್ಲಿ ಹತ್ತಿದಾಗ ಟಿಕೆಟ್ ಕಲೆಕ್ಟರ್ ಟಿಕೆಟ್ ಕೇಳಿದರು ಆದರೆ ನನ್ನ ಬಳಿ ಕೇವಲ 20 ರೂಪಾಯಿ ಮಾತ್ರ ಇತ್ತು. ಅವರು ನನಗೆ ಪಠಾಣ್ ಕೋಟ್ ವರೆಗೆ ಟಿಕೆಟ್ ನಿಡಿದರು. ಅಲ್ಲಿಂದ ನಾನು ಹಿಮಾಚಲದ ಕಂಗ್ರಾ ಮಾತಾ ದೇವಸ್ಥಾನವನ್ನು ತಲುಪಿ ಅಲ್ಲಿ 33 ವರ್ಷಗಳ ಕಾಲ ಧ್ಯಾನ ಮತ್ತು ಪೂಜೆಯಲ್ಲಿ ತೊಡಗಿದೆ. ಈ ನಡುವೆ ನಾನು ಕೋಲ್ಕತ್ತಾದ ಗಂಗಾಸಾಗರ್ ಮತ್ತು ಕಾಳಿ ಮೈಯಾ ದೇವಸ್ಥಾನಕ್ಕೂ ಹೋಗಿದ್ದೆ. ಅಂತಿಮವಾಗಿ ನನ್ನ ಧ್ಯಾನ ಮತ್ತು ಪೂಜೆಯನ್ನು ಮುಗಿಸಿದ ನಂತರ, ದೇವಿಯು ಮನೆಗೆ ಮರಳಲು ನನಗೆ ಅದೇಶಿಸಿದರು ಮತ್ತು ನಾನು ನನ್ನ ಮನೆಗೆ ಹಿಂತಿರುಗಿದೆ ಎಂದು ಹನುಮಾನ್ ಸೈನಿ ಅವರು ಸುದ್ದಿ ಸಂಸ್ಥೆ ಎಎನ್ಐ ಗೆ ತಿಳಿಸಿದರು.
ಇದನ್ನೂ ಓದಿ:Viral Video: ಮೋಡಗಳ ಮೇಲೆ ವಿಹರಿಸಬೇಕೆ? ಹಾಗಿದ್ದರೆ ಟರ್ಕಿಗೆ ಬನ್ನಿ
75 ವರ್ಷದ ಸೈನಿಯವರು ಮೇ 29ರಂದು ರೈಲಿನ ಮೂಲಕ ಖೈರ್ತಾಲ್ಗೆ ಬಂದಿಳಿದರು. ನಂತರ ಕಾಲ್ನಡಿಗೆಯ ಮೂಲಕ ಬಂದು ಮನೆಯ ಹುಡುಕಾಟವನ್ನು ನಡೆಸುತ್ತಿದ್ದರು. ಮೇ 30 ರಂದು ಸ್ಥಳೀಯರು ಅವರನ್ನು ಪತ್ತೆಹಚ್ಚಿ, ಅವರನ್ನು ಅಲ್ವಾರ್ ನಲ್ಲಿರುವ ತಮ್ಮ ಮನೆಯನ್ನು ಸೇರಲು ಸಹಾಯ ಮಾಡಿದರು.
ಸೈನಿಯವರಿಗೆ ಮೂರು ಹೆಣ್ಣು ಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳಿದ್ದು ಅವರೆಲ್ಲರಿಗೂ ವಿವಾಹವಾಗಿದೆ. ತಂದೆ ಬದುಕುವ ಭರವಸೆಯನ್ನು ಬಿಟ್ಟು ಬಿಟ್ಟಿದ್ದೆವು. ಆದರೆ ಅವರು ಮರಳಿ ಬಂದಿರುವುದು ನಮಗೆ ಸಂತೋಷ ತಂದಿದೆ. ಅವರು ಕಾಣೆಯಾಗಿದ್ದಾಗ ನಾವು ತುಂಬಾ ಸಣ್ಣವರಿದ್ದೆವು ಮತ್ತು ಅವರ ಜೊತೆ ಸರಿಯಾಗಿ ಸಮಯ ಕೂಡಾ ಕಳೆದಿರಲಿಲ್ಲ. ಇಂದು ನಮ್ಮ ತಂದೆ ಕುಟುಂಬಕ್ಕೆ ಮರಳಿ ಬಂದಿರುವುದು ನಮಗೆ ಬಹಳ ಸಂತೋಷವಾಗಿದೆ ಎಂದು ಹನುಮಂತ ಸೈನಿಯವರ ಹಿರಿಯ ಪುತ್ರ ರಾಮಚಂದ್ರ ಸೈನಿಯವರು ಹೇಳಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ