ನೀವು ಈತನಕ ಸಾಕಷ್ಟು ಮದುವೆಗಳಿಗೆ ಸಾಕ್ಷಿಯಾಗಿದ್ದೀರಿ. ಆದರೆ ಈಗ ನಡೆಯಲಿರುವ ಮದುವೆಯ ವೈಶಿಷ್ಟ್ಯ ಕೇಳಿದರೆ ಖಂಡಿತ ಅಚ್ಚರಿಗೆ ಒಳಗಾಗುತ್ತೀರಿ. ಡಿ. 29ರಂದು ಆಂಧ್ರಪ್ರದೇಶದಲ್ಲಿ ಈ ವಿಶೇಷ ಮದುವೆ ಏರ್ಪಾಡಾಗಿದೆ. ಶ್ರೀಮಂತಿಕೆ, ಆಡಂಬರ, ಅಭಿರುಚಿ ಅಥವಾ ಇನ್ನ್ಯಾವುದೋ ಕಲೆ, ಸಾಹಸ ಪ್ರದರ್ಶನದ ಹಿನ್ನೆಲೆಯಿಂದ ಈ ಮದುವೆ ಆಯೋಜನೆಗೊಂಡಿಲ್ಲ. ಬದಲಾಗಿ ಮಾನವೀಯ ಪ್ರಜ್ಞೆಗೆ ಸಾಕ್ಷಿಯಾಗಲಿದೆ ಈ ಮದುವೆ. ಆ ದಿನ ನವಜೋಡಿ ಅಂಗಾಂಗದಾನ ಪ್ರತಿಜ್ಞೆ ಮೂಲಕ ದಾಂಪತ್ಯಕ್ಕೆ ಕಾಲಿಡಲಿದೆ. ಈ ಜೋಡಿಯ ನಿರ್ಧಾರದಿಂದ ಸ್ಫೂರ್ತಿಗೊಂಡ ಸುಮಾರು 60 ಜನ ಸಂಬಂಧಿಕರು ಅಂಗಾಂಗ ದಾನ ಅರ್ಜಿಗಳನ್ನು ಭರ್ತಿ ಮಾಡಲು ಆಸಕ್ತಿ ತೋರಿದ್ದಾರೆ.
ಸತೀಶ್ ಕುಮಾರ್ ಮತ್ತು ಸಜೀವ ರಾಣಿ ಇದೇ 29ರಂದು ಪೂರ್ವ ಗೋದಾವರಿ ಜಿಲ್ಲೆಯ ನಿಡದವೊಲು ಪಟ್ಟಣದ ಬಳಿ ಇರುವ ವೆಲಿವೆಣ್ಣು ಗ್ರಾಮದಲ್ಲಿ ವಿವಾಹಬಂಧಕ್ಕೆ ಒಳಗಾಗಲಿದ್ದಾರೆ. ಈ ಸಂದರ್ಭದಲ್ಲಿ ಸ್ವಯಂಪ್ರೇರಿತರಾಗಿ ಅವರು ಅಂಗಾಂಗದಾನ ಪ್ರತಿಜ್ಞೆ ಕೈಗೊಳ್ಳಲಿದ್ದಾರೆ. ಇವರಿಂದ ಪ್ರೇರೇಪಣೆಗೊಂಡ ಅವರ ಸಂಬಂಧಿಗಳು ತಾವೂ ಅಂಗಾಗಂದಾನ ಅರ್ಜಿ ಭರ್ತಿ ಮಾಡುವ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಮದುವೆಯ ಮೂಲಕ ಸಮಾಜಕ್ಕೆ ಏನಾದರೂ ಒಳ್ಳೆಯದನ್ನು ಮಾಡಬೇಕು ಎನ್ನುವ ಇರಾದೆಯಿಂದ ಈ ಜೋಡಿ ಈ ನಿರ್ಧಾರ ಕೈಗೊಂಡಿದೆ. ಲಗ್ನಪತ್ರಿಕೆಯಲ್ಲಿ, ‘ಅಂಗಾಂಗದಾನ ಮಾಡಿ ಜೀವರಕ್ಷಕರಾಗಿ’ ಎಂಬ ಸಂದೇಶ ಕಂಡ ಸಂಬಂಧಿಕರು ತಾವೂ ಈ ಮಹತ್ಕಾರ್ಯಕ್ಕೆ ಮುಂದಾಗಿದ್ದಾರೆ. ವಿಶಾಖಪಟ್ಟಣಂನ ಸಾವಿತ್ರಿಬಾಯಿ ಫುಲೆ ಶಿಕ್ಷಣ ಮತ್ತು ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷೆ ಜಿ. ಸೀತಾಮಹಾಲಕ್ಷ್ಮಿ ಮದುವೆಯ ದಿನದಂದು ಅಂಗಾಂಗ ದಾನದ ಅರ್ಜಿ ನಮೂನೆಗಳನ್ನು ಸ್ವೀಕರಿಸಲಿದ್ದಾರೆ.
ಇದನ್ನೂ ಓದಿ : ಮದುವೆ ಮಂಟಪದ ಹೊರಗೆ ಝೊಮ್ಯಾಟೋ ಡೆಲಿವರಿ ಏಜೆಂಟ್ ಡ್ಯಾನ್ಸ್ ವಿಡಿಯೋ ವೈರಲ್
ವಿಲ್ಲಿಂಗ್ ಟು ಹೆಲ್ಪ್ ಫೌಂಡೇಶನ್‌ನ ಸಹಕಾರದೊಂದಿಗೆ ಸತೀಶ್ ಕುಮಾರ್ ತಮ್ಮ ಮದುವೆಯ ದಿನದಂದು ಅಂಗಾಂಗದಾನ ಕಾರ್ಯಕ್ರಮವನ್ನು ಆಯೋಜಿಸಲು ನಿರ್ಧರಿಸಿದರು. ಅಂಗಾಂಗದಾನದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ಈ ವಿಶೇಷ ಮದುವೆಯ ಬಗ್ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 2:07 pm, Tue, 27 December 22