Delhi Metro : ಬಸ್ಸು ಆದರೇನು, ಆಟೋ ಆದರೇನು, ರೈಲು ಆದರೇನು, ವಿಮಾನವಾದರೇನು ಮತ್ತೀಗ ಮೆಟ್ರೋ ಆದರೇನು? ಎಲ್ಲೆಡೆ ಪ್ರಯಾಣಿಸುವವರು ಮನುಷ್ಯರೇ ಅಲ್ಲವೆ? ಸಾರಿಗೆಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ನಾಗರಿಕರಾದ ಪ್ರತಿಯೊಬ್ಬರೂ ಶಿಸ್ತು, ನಿಯಮಗಳನ್ನು ಪಾಲಿಸಲೇಬೇಕು. ಆದರೆ ಕೆಲವರಿಗೆ ಇದು ಕಷ್ಟವಾಗುತ್ತದೆ. ಯಾಕೆ ಕಷ್ಟವಾಗುತ್ತದೆ? ಕಾರಣ ಹುಡುಕುತ್ತ ಹೋದರೆ ಅದಕ್ಕೆ ಕೊನೆಯೇ ಇಲ್ಲ. ರೀಲಿಗರ ಹಾವಳಿಯಿಂದ ದೆಹಲಿ ಮೆಟ್ರೋ ದಿನವೂ ಜಾಲತಾಣಗಳಲ್ಲಿ ಚಾಲ್ತಿಯಲ್ಲೇ ಇರುವಂಥಾಗಿದೆ. ಆದರೆ ಇಂದಿನ ಸುದ್ದಿ ರೀಲಿಗೆ (Reel) ಸಂಬಂಧಿಸಿದ್ದಲ್ಲ. ಮನುಷ್ಯತ್ವ ಇರುವ ಪ್ರತಿಯೊಬ್ಬರು ನಾಚಿಕೆಪಟ್ಟುಕೊಳ್ಳುವಂಥದ್ದು. ಅಸಹಾಯಕತೆಯಿಂದ ಕೈಕೈ ಹಿಸುಕಿಕೊಳ್ಳುವಂಥದ್ದು.
ಸುಯಶ್ ಚೌಧರಿ ಎನ್ನುವವರು 2 ಭಾಗಗಳಲ್ಲಿ ಈ ವಿಡಿಯೋ ಅನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಮಹಿಳೆಯೊಬ್ಬರು ಮೆಟ್ರೋದಲ್ಲಿ ಪ್ರಯಾಣಿಸುತ್ತಿರುವ ಸಹ ಮಹಿಳಾ ಪ್ರಯಾಣಿಕರ ಮೇಲೆ ವಿನಾಕಾರಣ ಹರಿ ಹಾಯ್ದಿದ್ದಾರೆ. ತಿಳಿಗುಲಾಬಿ ಉಡುಗೆ ತೊಟ್ಟ ಆ ಮಹಿಳೆ ಎದುರಿಗೆ ನಿಂತ ಮಹಿಳೆಯ ಮೇಲೆ ಒಂದೇ ಸಮಯ ಬಾಯಿಗೆ ಬಂದಂತೆ ಕೂಗಾಡುತ್ತಿರೆ. ಆಕೆ ಎಷ್ಟು ಕೂಗಾಡುತ್ತೀ ಕೂಗಾಡು ಎಂದು ಮೊಬೈಲ್ನಲ್ಲಿ ಮೌನವಾಗಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ : Viral: ಬಾರ್ಬಿ ಕೇಕ್; ದೆಹಲಿ ಕೇರಳದ ಬೇಕರ್ಗಳಿಗೆ ಅಂಟಿದ ಗುಲಾಬಿ ಜ್ವರ!
ಈ ಕೆಳಗಿನ ವಿಡಿಯೋದಲ್ಲಿ ಗುಲಾಬಿ ದಿರಿಸು ತೊಟ್ಟ ಅದೇ ಮಹಿಳೆ ಮಗುವಿನೊಂದಿಗೆ ಪ್ರಯಾಣಿಸುತ್ತಿರುವ ಇನ್ನೊಬ್ಬ ಮಹಿಳೆಯ ಮೇಲೂ ಕೂಗಾಡಿದ್ದಾರೆ. ಆದರೆ ಆ ಮಹಿಳೆಗೆ ಕೋಪ ಬಂದು ವಾಗ್ವಾದಕ್ಕೆ ತೊಡಗಿ ಕೊನೆಗೆ ಸುಮ್ಮನಾಗಿದ್ದಾರೆ. ಈ ಇಬ್ಬರೂ ಮಹಿಳೆಯರ ಮೇಲೆ ಮನಬಂದಂತೆ ಕೂಗಾಡುತ್ತಿರುವ ಮಹಿಳೆಯೆಡೆ ಮೊಬೈಲ್ ಹಿಡಿದು ವಿಡಿಯೋ ಮಾಡಲು ತಾಳ್ಮೆ, ಸಮಯ ಇತ್ತು. ಆದರೆ ಒಮ್ಮೆ ಆಕೆಯ ಮೈದಡವಿ ಸಮಾಧಾನಿಸಬೇಕು ಎಂದು ಅಲ್ಲಿರುವ ಯಾರಿಗೂ ಅನ್ನಿಸಲೇ ಇಲ್ಲವಲ್ಲ?
ಆಕೆಗೆ ಆಪ್ತವಾದ ಸ್ಪರ್ಶ, ಸಾಂತ್ವನ, ಸಲಹೆ ಮತ್ತು ಚಿಕಿತ್ಸೆಯ ಅವಶ್ಯಕತೆ ಇದೆ. ಯಾರ ಮಗಳೋ, ಯಾರ ಅಕ್ಕ ತಂಗಿಯೋ, ಯಾರ ಹೆಂಡತಿಯೋ, ಯಾರ ಅಮ್ಮನೋ ಎಂತೋ ಏನೋ. ಯಾರೋ ಯಾವಾಗಲೋ ಯಾರಿಗೋ ಬಿಟ್ಟ ಬಾಣ ಅಮಾಯಕ ಮಹಿಳೆಗೆ ತಾಕಿದೆ. ಇಷ್ಟೊಂದು ದಿಕ್ಕೆಟ್ಟು ಆಕೆ ವರ್ತಿಸುವುದನ್ನು ನೋಡಿದಾಗ ಕರುಳು ಹಿಂಡಿದಂತಾಗುವುದಿಲ್ಲವೆ? ಮೊಬೈಲ್ನಲ್ಲಿ ವಿಡಿಯೋ ಮಾಡುವುದಕ್ಕಿಂತ ಹೊರತಾಗಿ ಯೋಚಿಸುವುದನ್ನು ಕಲಿಯುವುದು ಇನ್ನೂ ಯಾವಾಗ? ರೈಲ್ವೆ ಇಲಾಖೆಯ ಗಮನಕ್ಕೆ ಖುದ್ದಾಗಿ ತಿಳಿಸಿದ್ದರೆ ಅಥವಾ ಸಮೀಪದ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದರೆ ಆಪ್ತಸಲಹೆ ಅಥವಾ ಅವಶ್ಯಕ ಮನೋಚಿಕಿತ್ಸೆಗೆ ಒಂದು ದಾರಿಯಾಗುತ್ತಿತ್ತಲ್ಲವೆ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 3:25 pm, Thu, 3 August 23