
ತಂದೆ ತಾಯಿಗೆ ತಮ್ಮ ಮಕ್ಕಳು ಚೆನ್ನಾಗಿ ಓದಿ ಒಳ್ಳೆಯ ಉದ್ಯೋಗ ಪಡೆದು ಜೀವನದಲ್ಲಿ ಸೆಟಲ್ ಆಗಬೇಕೆನ್ನುವ ಆಸೆಯಿರುವುದು ಸಹಜ. ಅದೇ ರೀತಿ ಒಂದೊಳ್ಳೆ ಉದ್ಯೋಗ ಸಿಕ್ಕ ಬಳಿಕ ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕೆನ್ನುವುದಿರುತ್ತದೆ. ಒಂದೊಳ್ಳೆ ಸಂಸ್ಥೆಯಲ್ಲಿ ಉದ್ಯೋಗ ಪಡೆದು ಅಪ್ಪ ಅಮ್ಮನ ಆಸೆಗಳನ್ನು ಈಡೇರಿಸುವ ಘಳಿಗೆ ಬಂದರೆ ಅದಕ್ಕಿಂತ ಒಳ್ಳೆಯ ಕ್ಷಣ ಯಾವುದಿದೆ. ಗೂಗಲ್‌ನ ಯೂಟ್ಯೂಬ್‌ನಲ್ಲಿ ಪ್ರಾಡಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ಭಾರತೀಯ ಯುವಕ ಅಭಿಜಯ್ ಅರೋರಾ ವುಯ್ಯುರು (Abhijay Arora Vuyyuru), ತನ್ನ ತಾಯಿಯನ್ನು ಗೂಗಲ್‌ನ ಸ್ಯಾನ್ ಫ್ರಾನ್ಸಿಸ್ಕೋ (San Francisco) ಕಚೇರಿಗೆ ಕರೆದೊಯ್ದು, ಅಮ್ಮನ ಮೊಗದಲ್ಲಿ ನಗು ತರಿಸಿದ್ದಾರೆ. ಈ ಭಾವನಾತ್ಮಕ ಕ್ಷಣದ ವಿಡಿಯೋವನ್ನು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈ ಹೃದಯಸ್ಪರ್ಶಿ ದೃಶ್ಯ ನೋಡಿ ಖುಷಿ ಪಟ್ಟಿದ್ದಾರೆ.
ಅಭಿಜಯ್ ಅರೋರಾ (abhijayaarora) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದ ಶೀರ್ಷಿಕೆಯಲ್ಲಿ ಈ ದಿನವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಾನು ನನ್ನ ಅಮ್ಮನಿಗೆ ನನ್ನ ಕಚೇರಿಯನ್ನು ತೋರಿಸಿದೆ. ನಾನು ಅವಳನ್ನು ಗೂಗಲ್ ಸ್ಯಾನ್ ಫ್ರಾನ್ಸಿಸ್ಕೋಗೆ ಕರೆದೊಯ್ದೆ. ಅವಳು ನನಗಾಗಿ ಎಲ್ಲವನ್ನೂ ತ್ಯಾಗ ಮಾಡಿದಳು. ನನ್ನ ಬೆಂಬಲ ವ್ಯವಸ್ಥೆ ಆಕೆ. ಕಷ್ಟದ ಸಮಯದಲ್ಲಿ ನನ್ನೊಂದಿಗೆ ನಿಂತವಳು ನನ್ನ ತಾಯಿ. ನಾನು ಶಾಲೆ ಬದಲಾಯಿಸಿದಾಗಲೆಲ್ಲಾ ನಾನು ಆರಾಮದಾಯಕವಾಗಿದ್ದೇನೆ ಎಂದು ಖಚಿತಪಡಿಸಿಕೊಂಡವಳು.
ನನ್ನ ಎಲ್ಲಾ ಪ್ರಯತ್ನಗಳ ಮಹತ್ವವನ್ನು ನನಗೆ ತಿಳಿಸಿದವಳು. ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ ಬೆಳಗ್ಗೆ 4 ಗಂಟೆಗೆ ನನ್ನೊಂದಿಗೆ ಎಚ್ಚರಗೊಂಡು ನನಗೆ ಬೆಂಬಲವಾಗಿ ನಿಂತವಳು. ನಮ್ಮ ಸೀಮಿತ ಆದಾಯದೊಂದಿಗೆ ನಾನು ಅತ್ಯುತ್ತಮ ಜೀವನವನ್ನು ನಡೆಸುತ್ತೇನೆ ಎಂದು ಖಚಿತಪಡಿಸಿಕೊಂಡವಳು. ಈ ಜೀವನದಲ್ಲಿ ನಾನು ನೀಡಬಹುದಾದ ಯಾವುದೇ ಸಣ್ಣ ವಿಷಯವು ಈ ನಿನ್ನ ತ್ಯಾಗಗಳಿಗೆ ಸರಿಸಮಾನವಾದದ್ದು ಅಲ್ಲ. ಇದು ನಿಮಗಾಗಿ ಅಮ್ಮ. ನಾನು ಎಲ್ಲವನ್ನು ಹಿಂದಿರುಗಿಸಲು ಬಯಸುತ್ತೇನೆ. ಎಲ್ಲವನ್ನು ಮೀರಿ ಹೆಚ್ಚಿನ ಜನರ ಮೇಲೆ ಪ್ರಭಾವ ಬೀರಲು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಅಭಿಜಯ್ ವುಯ್ಯುರು ತನ್ನ ತಾಯಿಗೆ ಗೂಗಲ್ ಕಚೇರಿಯ ವಿವಿಧ ಕೆಲಸದ ಸ್ಥಳಗಳನ್ನು ತೋರಿಸುವುದನ್ನು ಕಾಣಬಹುದು. ಆ ಬಳಿಕ ಕಚೇರಿಯ ಕೆಫೆಟೇರಿಯಾದಲ್ಲಿ ಇಬ್ಬರೂ ಕುಳಿತುಕೊಂಡು ಊಟ ಮಾಡುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ:Video: ದೂರದ ಊರಿನಲ್ಲಿ ವಾಸಿಸುವ ಹುಡುಗರ ವ್ಯಥೆ ಇದು; ಮನೆಗೆ ಹೋದ್ರೆ ಅಮ್ಮ ಹೇಳುವ ಕೆಲಸ
ಈ ವಿಡಿಯೋ ಮೂವತ್ತಾರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಮಕ್ಕಳ ಯಶಸ್ಸು ನೋಡುವುದೇ ತಂದೆ ತಾಯಿಯರ ಜೀವನದ ಸಾರ್ಥಕ ಕ್ಷಣ ಎಂದಿದ್ದಾರೆ. ಮತ್ತೊಬ್ಬರು ನಿಮ್ಮ ತಾಯಿಯ ನಗು ಎಲ್ಲವನ್ನೂ ಹೇಳುತ್ತದೆ, ಎಂತಹ ಹೆಮ್ಮೆಯ ಕ್ಷಣ” ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಆಕೆ ನಿಮ್ಮ ಬಗ್ಗೆ ನಿಜಕ್ಕೂ ಹೆಮ್ಮೆ ಪಡುತ್ತಾಳೆ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:34 am, Mon, 6 October 25