Video: ಅಜ್ಜಿಯ ಸಣ್ಣ ವ್ಯಾಪಾರಕ್ಕೆ ನೆರವಾಗಿ ಮೊಗದಲ್ಲಿ ನಗು ಮೂಡಿಸಿದ ಯುವಕ

ಇಳಿ ವಯಸ್ಸಿನಲ್ಲೂ ಮೂರು ಹೊತ್ತಿನ ತುತ್ತಿಗಾಗಿ ಕಷ್ಟ ಪಡುವ ಹಿರಿಜೀವಗಳನ್ನು ಕಂಡಾಗ ಕಣ್ಣಂಚಲಿ ನೀರು ಬರುತ್ತದೆ. ಆದರೆ ಇಲ್ಲೊಬ್ಬ ಯುವಕನು ಅಜ್ಜಿಯ ಸಣ್ಣ ವ್ಯಾಪಾರಕ್ಕೆ ನೆರವಾಗಿ ಹಿರಿಜೀವದ ಮೊಗದಲ್ಲಿ ನಗು ಮೂಡಿಸಿದ್ದಾನೆ. ಈ ಹೃದಯಸ್ಪರ್ಶಿ ವಿಡಿಯೋ ಸದ್ಯ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ ನೋಡಿ.

Video: ಅಜ್ಜಿಯ ಸಣ್ಣ ವ್ಯಾಪಾರಕ್ಕೆ ನೆರವಾಗಿ ಮೊಗದಲ್ಲಿ ನಗು ಮೂಡಿಸಿದ ಯುವಕ
ವೈರಲ್‌ ವಿಡಿಯೋ
Image Credit source: Instagram

Updated on: Dec 09, 2025 | 11:33 AM

ಬದುಕು (life) ಎಲ್ಲರದ್ದೂ ಒಂದೇ ಆಗಿರುವುದಿಲ್ಲ. ಕೆಲವರದ್ದು ತಮ್ಮ ಇಳಿ ವಯಸ್ಸಿನಲ್ಲೂ ದುಡಿದು ತಿನ್ನುವ ಪರಿಸ್ಥಿತಿ. ಕೈ ಕಟ್ಟಿ ಕುಳಿತರೆ ಹೊಟ್ಟೆ ತುಂಬಲ್ಲ. ಹೀಗಾಗಿ  ಸಣ್ಣ ಪುಟ್ಟ ದುಡಿಮೆ ಮಾಡಿ ಜೀವನ ಸಾಗಿಸುತ್ತಾರೆ. ಈ ಅಜ್ಜಿಯದ್ದು ಇದೇ ರೀತಿಯ ಬದುಕು. ರಸ್ತೆಯ ಪಕ್ಕದಲ್ಲಿ ಸಣ್ಣದೊಂದು ಅಂಗಡಿ ಇಟ್ಟುಕೊಂಡು, ಆ ವ್ಯಾಪಾರದಲ್ಲಿ ಬರುವ ಹಣದಲ್ಲೇ ಜೀವನ ನಿರ್ವಹಣೆ. ಹೀಗಿರುವಾಗ ಹೃದಯವಂತ ಯುವಕನೊಬ್ಬ ವೃದ್ಧೆಯನ್ನು (old woman) ಮಾತನಾಡಿಸಿ ವ್ಯಾಪಾರಕ್ಕೆ ನೆರವಾಗಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಯುವಕನ ಒಳ್ಳೆತನವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

ಸ್ಪ್ರೆಡ್ ಕೈಂಡ್ ನೆಸ್ (Spreadkindness77) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಹೃದಯಸ್ಪರ್ಶಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ರಸ್ತೆಯ ಬದಿಯಲ್ಲಿ ಅಂಗಡಿಯಿಟ್ಟುಕೊಂಡಿದ್ದ ಅಜ್ಜಿಯನ್ನು ಯುವಕನು ಮಾತನಾಡಿಸಿದ್ದಾನೆ. ಕಷ್ಟ ಸುಖ ಮಾತನಾಡಿ ಕೊನೆಗೆ ತಾನೇ ನೀರಿನ ಬಾಟಲುಗಳನ್ನು ಖರೀದಿಸಿ ಅಜ್ಜಿಯ ಅಂಗಡಿಯಲ್ಲಿಟ್ಟು ವ್ಯಾಪಾರಕ್ಕೆ ನೆರವಾಗಿರುವುದನ್ನು ಕಾಣಬಹುದು. ಈ ವಿಡಿಯೋದ ಕೊನೆಗೆ ಅಜ್ಜಿಯ ಕೈಗೆ ಒಂದಿಷ್ಟು ಕಾಸು ಇಟ್ಟು ತನ್ನ ಕೈಲಾದಷ್ಟು ಸಹಾಯ ಮಾಡಿರುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ: ದುಡ್ಡಿಲ್ಲದೇ ಅಲೆಯುತ್ತಿದ್ದ ವ್ಯಕ್ತಿಗೆ ಬಸ್ ಟಿಕೆಟ್ ಮಾಡಿಸಿ ಊರು ಸೇರಿಸಿದ ಯುವಕ

ಈ ವಿಡಿಯೋ ಏಳು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ದೇವರು ಬರೋಕಾಗಲ್ಲ ಅಂದ್ರು, ನಿಮ್ಮಂತವರ ರೂಪದಲ್ಲಿ ಕಳುಹಿಸಿ ಕೊಡ್ತಾನೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ತುಂಬಾ ಇಷ್ಟ ಆಯ್ತು ಎಂದರೆ ಮತ್ತೊಬ್ಬರು, ಇನ್ನಷ್ಟು ಒಳ್ಳೆಯ ಕೆಲಸ ಮಾಡುವಂತಾಗಲಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ