Viral Video : ಮುಂಬೈನ ಥಾಣೆ-ಪನ್ವೆಲ್ ಲೋಕಲ್ ರೈಲಿನ ಮಹಿಳಾ ಕಂಪಾರ್ಟ್‌ಮೆಂಟ್‌ನಲ್ಲಿ ಮಹಿಳೆಯರು ಪರಸ್ಪರ ಜಗಳಕ್ಕೆ ಇಳಿದಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಕರ್ತವ್ಯ ನಿರತರಾಗಿದ್ದ ಮಹಿಳಾ ಪೊಲೀಸರೊಬ್ಬರು ಗಾಯಗೊಂಡಿದ್ದಾರೆ. ವಾಶಿ ಸರ್ಕಾರಿ ರೈಲ್ವೇ ಪೊಲೀಸ್ ಇನ್ಸ್‌ಪೆಕ್ಟರ್ ಸಂಭಾಜಿ ಕಟಾರೆ ಪ್ರಕಾರ, ರೈಲಿನೊಳಗಿನ ಸೀಟುಗಳಿಗಾಗಿ ಮೂವರು ಮಹಿಳಾ ಪ್ರಯಾಣಿಕರ ಮಧ್ಯೆ ಜಗಳ ಶುರುವಾಗಿದೆ. ನಂತರ ಈ ಜಗಳದಲ್ಲಿ ಉಳಿದ ಮಹಿಳೆಯರೂ ತೊಡಗಿಕೊಂಡಾಗ ಅದು ತೀವ್ರ ಹೊಡೆದಾಟಕ್ಕೆ ತಿರುಗಿಕೊಂಡು ಇಡೀ ಕಂಪಾರ್ಟ್‌ಮೆಂಟ್‌ನಲ್ಲಿ ಭಯಾನಕ ದೃಶ್ಯ ನಿರ್ಮಾಣವಾಗಿದೆ.
ಈ ಜಗಳವನ್ನು ಬಗೆಹರಿಸಲು ಮಹಿಳಾ ಪೊಲೀಸ್ ಪ್ರಯತ್ನಿಸಿದಾಗ ಕೆಲ ಮಹಿಳೆಯರಿಂದಲೇ ಪೊಲೀಸ್ ಹಲ್ಲೆಗೊಳಗಾದರು. ಮಹಿಳಾ ಪೊಲೀಸ್ ಸೇರಿದಂತೆ ಮೂರು ಮಹಿಳೆಯರು ಗಾಯಗೊಂಡಿದ್ದಾರೆ. ಪೊಲೀಸ್ ಮತ್ತು ಇನ್ನೊಬ್ಬ ಮಹಿಳೆಯ ಹಣೆಗೆ ಏಟು ಬಿದ್ದು ರಕ್ತಸ್ರಾವವಾಗಿದೆ. ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿರುವುದಾಗಿ ಕಟಾರೆ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ತುರ್ಭೆ ನಿಲ್ದಾಣದಲ್ಲಿ ಸೀಟು ಖಾಲಿಯಾದಾಗ ಮಹಿಳಾ ಪ್ರಯಾಣಿಕರೊಬ್ಬರು ಇನ್ನೊಬ್ಬ ಮಹಿಳೆಗೆ ಸೀಟಿನಲ್ಲಿ ಕುಳಿತುಕೊಳ್ಳಲು ಅವಕಾಶ ಮಾಡಿಕೊಡಲು ಪ್ರಯತ್ನಿಸಿದರು. ಆದರೆ ಮತ್ತೊಬ್ಬ ಮಹಿಳೆಯು ಅದೇ ಸೀಟಿನಲ್ಲಿ ಕುಳಿತುಕೊಳ್ಳಲು ಪ್ರಯತ್ನಿಸಿದರು. ಆಗ ವಾಗ್ವಾದ ಶುರುವಾಗಿ ಪರಸ್ಪರ ಹೊಡೆದಾಟಕ್ಕೆ ಇದು ತಿರುಗಿಕೊಂಡುಬಿಟ್ಟಿತು. ಪ್ರಯಾಣಿಕರೂ ಈ ಜಗಳದಲ್ಲಿ ತೊಡಗಿದ್ದರಿಂದ ಇಡೀ ಕಂಪಾರ್ಟ್ಮೆಂಟ್ ಅಲ್ಲೋಕಲ್ಲೋಲ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:33 am, Fri, 7 October 22