ತಮ್ಮ ಕೆಲಸದಿಂದಲೇ ನೆಟ್ಟಿಗರ ಗಮನ ಸೆಳೆದ ಐಎಎಸ್ ಅಧಿಕಾರಿ: ಅಷ್ಟಕ್ಕೂ ಯಾರಿದು ಕೀರ್ತಿ ಜಲ್ಲಿ?

| Updated By: ಗಂಗಾಧರ​ ಬ. ಸಾಬೋಜಿ

Updated on: May 30, 2022 | 7:22 AM

ಭೀಕರ ಪರಿಸ್ಥಿತಿಯ ನಡುವೆ, ಅಸ್ಸಾಂನ ಕ್ಯಾಚಾರ್‌ನ ಡೆಪ್ಯುಟಿ ಕಮಿಷನರ್ (ಡಿಸಿ) ಆಗಿರುವ ಐಎಎಸ್ ಅಧಿಕಾರಿ ಕೀರ್ತಿ ಜಲ್ಲಿ ಅವರು ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಕೆಲವು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ತಮ್ಮ ಕೆಲಸದಿಂದಲೇ ನೆಟ್ಟಿಗರ ಗಮನ ಸೆಳೆದ ಐಎಎಸ್ ಅಧಿಕಾರಿ: ಅಷ್ಟಕ್ಕೂ ಯಾರಿದು ಕೀರ್ತಿ ಜಲ್ಲಿ?
ಅಸ್ಸಾಂನ ಕ್ಯಾಚಾರ್ ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳನ್ನು ಸಮೀಕ್ಷೆ ಮಾಡುತ್ತಿರುವ ಐಎಎಸ್ ಅಧಿಕಾರಿ ಕೀರ್ತಿ ಜಲ್ಲಿ
Follow us on

ಐಎಎಸ್ ದಂಪತಿಗಳಾದ ಸಂಜೀವ್ ಖಿರ್ವಾರ್ ಮತ್ತು ಅವರ ಪತ್ನಿ ರಿಂಕು ದುಗ್ಗಾ ಅವರು ತಮ್ಮ ನಾಯಿಯನ್ನು ದೆಹಲಿಯ ತ್ಯಾಗರಾಜ್ ಸ್ಟೇಡಿಯಂನಲ್ಲಿ ವಾಕಿಂಗ್​ ಕರೆದುಕೊಂಡು ಹೋಗಿ ಅಲ್ಲಿನ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ತೀರ್ವ ಟೀಕೆಗೆ ಗುರಿಯಾಗಿದ್ದರು. ಆದರೆ ಮತ್ತೊಬ್ಬ ಐಎಎಸ್ ಅಧಿಕಾರಿ ಅಸ್ಸಾಂನಲ್ಲಿ ಇತ್ತೀಚಿಗೆ ಉಂಟಾದ ಪ್ರವಾಹದ ಸಮಯದಲ್ಲಿ ತನ್ನ ಕೆಲಸದಿಂದಾಗಿ ಜನರ ಮೆಚ್ಚುಗೆ ಗಳಿಸುವುದಲ್ಲದೆ, ಸಾಕಷ್ಟು ವೈರಲ್ ಕೂಡ ಆಗಿದ್ದಾರೆ. ಅಸ್ಸಾಂನಲ್ಲಿ ಪ್ರವಾಹ ಮತ್ತು ಭೂಕುಸಿತದಿಂದಾಗಿ ಸುಮಾರು 4.5 ಲಕ್ಷ ಜನರು ಸಂತ್ರಸ್ತರಾಗಿದ್ದು, 32 ಜನ ಸಾವನ್ನಪ್ಪಿದ್ದಾರೆ. ಸದ್ಯ ನದಿಗಳ ನೀರಿನ ಮಟ್ಟವು ಕಡಿಮೆಯಾಗಲು ಪ್ರಾರಂಭಿಸಿರುವುದರಿಂದ ಅಸ್ಸಾಂ ಪರಿಸ್ಥಿತಿ ಸುಧಾರಿಸುತ್ತಿದೆ.

ಭೀಕರ ಪರಿಸ್ಥಿತಿಯ ನಡುವೆ, ಅಸ್ಸಾಂನ ಕ್ಯಾಚಾರ್‌ನ ಡೆಪ್ಯುಟಿ ಕಮಿಷನರ್ (ಡಿಸಿ) ಆಗಿರುವ ಐಎಎಸ್ ಅಧಿಕಾರಿ ಕೀರ್ತಿ ಜಲ್ಲಿ ಅವರು ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಕೆಲವು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳನ್ನು ಪರಿಶೀಲಿಸಲು ಐಎಎಸ್ ಅಧಿಕಾರಿ ಬರಿಗಾಲಿನಲ್ಲಿ ಕೇಸರಿನಲ್ಲಿ ಅಲೆದಾಡಿ ಸಮೀಕ್ಷೆ ಮಾಡಿದ್ದಾರೆ. ಅನೇಕ ಟ್ವಿಟರ್ ಬಳಕೆದಾರರು ಕೀರ್ತಿ ಜಲ್ಲಿ ಅವರ ಸಮರ್ಪಣೆ ಮತ್ತು ಸೇವೆಯ ಬದ್ಧತೆಗಾಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕೀರ್ತಿ ದೇಶಾದ್ಯಂತ ಮಹಿಳೆಯರಿಗೆ ಬಹುದೊಡ್ಡ ಸ್ಫೂರ್ತಿ ಎಂದು ನೆಟ್ಟಿಗರು ಹೇಳಿದ್ದಾರೆ.


ಮೇ 25 ರಂದು, ಕೀರ್ತಿ ಜಲ್ಲಿ ಅವರು ಚೆಸ್ರಿ ಜಿಪಿ (ಗ್ರಾಮ ಪಂಚಾಯತ್), ಚುತ್ರಸಂಗನ ಗ್ರಾಮದ ಬೋರ್ಖೋಲಾ ಅಭಿವೃದ್ಧಿ ಬ್ಲಾಕ್ ವ್ಯಾಪ್ತಿಯ ಪ್ರವಾಹ ಮತ್ತು ಸವೆತ ಪೀಡಿತ ಪ್ರದೇಶಗಳನ್ನು ಕೇಸರಿನಲ್ಲಿ ಕಾಲ್ನಡಿಗೆಯಲ್ಲಿ ಪರಿಶೀಲಿಸಿದರು. ಅಲ್ಲಿ ಅವರು ಪ್ರವಾಹ ಮತ್ತು ಭೂಕುಸಿತದಿಂದ ಸ್ಥಳೀಯ ಜನರೊಂದಿಗೆ ಸಂವಾದ ನಡೆಸಿದರು. ಪ್ರವಾಹ ಮತ್ತು ಸವೆತದಿಂದ ಭೂಮಿಯನ್ನು ರಕ್ಷಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಅವರು ಪ್ರವಾಹ ಪೀಡಿತ ಜನರಿಗೆ ಪರಿಹಾರ ಸಾಮಗ್ರಿಗಳನ್ನು ವಿತರಿಸಿದರು. ವೈರಲ್ ಆಗಿರುವ ವಿಡಿಯೋದಲ್ಲಿ, ಐಎಎಸ್ ಅಧಿಕಾರಿ ಸ್ಥಳೀಯರೊಬ್ಬರಿಗೆ ನನ್ನ ಪಾದಗಳನ್ನು ಸ್ವಚ್ಛಗೊಳಿಸಲು ಶುದ್ಧ ನೀರು ಬೇಕಾಗಿಲ್ಲ, ನನಗೆ ಪ್ರವಾಹದ ನೀರನ್ನು ಕೊಡಿ ಎಂದು ಹೇಳುತ್ತಿರುವುದು ಕಾಣಬಹುದು.

ಐಎಎಸ್ ಕೀರ್ತಿ ಜಲ್ಲಿ ಯಾರು?

ಕೀರ್ತಿ ಜಲ್ಲಿ ಅವರು ಹೈದರಾಬಾದ್‌ನ ಬರೆಂಗಲ್ ಜಿಲ್ಲೆಯಲ್ಲಿ 1989 ರಲ್ಲಿ ಜನಿಸಿದರು. ಕೀರ್ತಿ ಜಲ್ಲಿ 2012 ರಲ್ಲಿ IAS ಅಧಿಕಾರಿಯಾಗಿದ್ದು, ಅವರು ಅಸ್ಸಾಂ ಬರಾಕ್ ಕಣಿವೆಯ ಹೈಲಕಂಡಿ ಜಿಲ್ಲೆಯಲ್ಲಿ ಮೊದಲ ಮಹಿಳಾ ಜಿಲ್ಲಾಧಿಕಾರಿಯಾಗಿ ತಮ್ಮ ಜವಾಬ್ದಾರಿಯನ್ನು ವಹಿಸಿಕೊಂಡರು. 2020 ರಲ್ಲಿ, ಜಿಲ್ಲೆಯ ವಿವಿಧ ಸಮಸ್ಯೆಗಳನ್ನು ನಿಯಂತ್ರಿಸಲು ಮತ್ತು ಸಾರ್ವಜನಿಕ ಸೇವೆಯಲ್ಲಿ ಅತ್ಯುತ್ತಮ ಕ್ರಮಗಳನ್ನು ತೆಗೆದುಕೊಂಡಿದ್ದಕ್ಕಾಗಿ ಅವರಿಗೆ ಅತ್ಯುತ್ತಮ ಆಡಳಿತಗಾರತಿ ಎಂಬ ಬಿರುದನ್ನು ನೀಡಲಾಗಿದೆ.


ಅವರ ಅತ್ಯುತ್ತಮ ಕೆಲಸವನ್ನು ಗಮನಿಸಿ ಆಕೆಯನ್ನು ಅಸ್ಸಾಂನ ಕ್ಯಾಚಾರ್ ಜಿಲ್ಲೆಗೆ ವರ್ಗಾಯಿಸಲಾಯಿತು. ಅಂದಿನಿಂದ, ಕೀರ್ತಿ ಜಲ್ಲಿ ತನ್ನ ಜವಾಬ್ದಾರಿಯನ್ನು ಸಂಪೂರ್ಣ ಸಮರ್ಪಣಾ ಭಾವದಿಂದ ನಿರ್ವಹಿಸಿದ್ದಾರೆ. ಅವರು ಕ್ಯಾಚಾರ್ ಜಿಲ್ಲೆಯ ಆದಿತ್ಯ ಶಶಿಕಾಂತ್ ಅವರನ್ನು ವಿವಾಹವಾಗಿದ್ದಾರೆ. ಕ್ಯಾಚಾರ್ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಜವಾಬ್ದಾರಿಯನ್ನು ಅತ್ಯಂತ ಸಮರ್ಪಣಾ ಭಾವದಿಂದ ನಿರ್ವಹಿಸಿದ ಕೀರ್ತಿ ಜಲ್ಲಿಯವರು, ಜಿಲ್ಲೆಯ ವಿವಿಧೆಡೆ ಸಂತ್ರಸ್ತರಾದ ಜನರ ಗಮನಕ್ಕೆ ತಂದು ಅವರ ಸಮಸ್ಯೆಗಳನ್ನು ಪರಿಹರಿಸಿದ್ದಾರೆ.

 ಕರ್ತವ್ಯಕ್ಕಾಗಿ ಮದುವೆ ಮುಂದೂಡಿಕೆ

COVID-19 ಪರಿಸ್ಥಿತಿ ಹದಗೆಟ್ಟಾಗ ಆಕೆಯ ಕೆಲಸಕ್ಕಾಗಿ ಶ್ಲಾಘಿಸಲಾಯಿತು. ಅಸ್ಸಾಂನಲ್ಲಿ ಕೋವಿಡ್ ಪರಿಸ್ಥಿತಿಯಿಂದಾಗಿ ಕೀರ್ತಿ ಜಲ್ಲಿ ತನ್ನ ಮದುವೆಯನ್ನು ಮುಂದೂಡಿದ್ದರು. ಕಳೆದ ವರ್ಷ ಆಗಸ್ಟ್‌ನಲ್ಲಿ ಆದಿತ್ಯ ಶಶಿಕಾಂತ್ ಅವರೊಂದಿಗೆ ವಿವಾಹದ ಪ್ರತಿಜ್ಞೆ ವಿನಿಮಯ ಮಾಡಿಕೊಳ್ಳಲು ಅವರು ಉದ್ದೇಶಿಸಿದ್ದರು. ಆದಾಗ್ಯೂ, ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ನಡುವೆ ಅವರು ತಮ್ಮ ಜಿಲ್ಲೆಯನ್ನು ತೊರೆಯಲು ನಿರಾಕರಿಸಿದರು ಮತ್ತು ಅವರು ತಮ್ಮ ವೈಯಕ್ತಿಕ ಸಂತೋಷಕ್ಕಿಂತ ತಮ್ಮ ಕರ್ತವ್ಯಕ್ಕೆ ಆದ್ಯತೆ ನೀಡಿದರು.

ತನ್ನ ಜನರನ್ನು ನೋಡಿಕೊಳ್ಳುವುದು ತನ್ನ ಮೊದಲ ಆದ್ಯತೆಯಾಗಿದ್ದು, ಮದುವೆ ಮುಂದಿನ ದಿನಗಳಲ್ಲಿ ಮಾಡಿಕೊಳ್ಳುತ್ತೇನೆಂದು ಕೀರ್ತಿ ತನ್ನ ಕುಟುಂಬಕ್ಕೆ ಹೇಳಿದರು. ಇದು ಮದುವೆಯನ್ನು ಮುಂದೂಡಲು ಕುಟುಂಬವನ್ನು ಪ್ರೇರೇಪಿಸಿತು ಮತ್ತು ಆಕೆಯ ಪತಿ ಆದಿತ್ಯ ಶಶಿಕಾಂತ್ ಕೂಡ ಒಪ್ಪಿದರು. ಒಂದು ತಿಂಗಳ ನಂತರ ಅಸ್ಸಾಂನ ಸಿಲ್ಚಾದಲ್ಲಿ ಸರಳವಾಗಿ ಸಪ್ತಪದಿ ತುಳಿದಿದ್ದು, ಮದುವೆಯಾದ ಮರುದಿನವೇ ಮತ್ತೆ ಕೆಲಸಕ್ಕೆ ಹಾಜರಾಗಿದ್ದರು.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.