Kameng River: ನಿಗೂಢವಾಗಿ ಕಪ್ಪು ಬಣ್ಣಕ್ಕೆ ತಿರುಗಿದ ಕಮೆಂಗ್ ನದಿ; ಸಾವಿರಾರು ಮೀನುಗಳು ಸಾವು
Shocking News: ಜನರು ಕಾಮೆಂಗ್ ನದಿಯ ಬಳಿ ಮೀನು ಹಿಡಿಯಲು ಹೋಗದಂತೆ ಮತ್ತು ಮುಂದಿನ ಆದೇಶದವರೆಗೆ ಸತ್ತ ಮೀನುಗಳನ್ನು ಸೇವಿಸದಂತೆ ಹಾಗೂ ಮಾರಾಟ ಮಾಡದಂತೆ ಪೂರ್ವ ಕಮೆಂಗ್ ಜಿಲ್ಲಾಡಳಿತವು ಜನರಲ್ಲಿ ಮನವಿ ಮಾಡಿದೆ.
ಇಟಾನಗರ: ಈಶಾನ್ಯ ರಾಜ್ಯವಾದ ಅರುಣಾಚಲ ಪ್ರದೇಶದ (Arunachal Pradesh) ನದಿಯೊಂದು ಇತ್ತೀಚೆಗೆ ನಿಗೂಢವಾಗಿ ಕಪ್ಪು ಬಣ್ಣಕ್ಕೆ ತಿರುಗಿದ್ದು, ಸಾವಿರಾರು ಮೀನುಗಳು ಸತ್ತು ತೇಲುತ್ತಿರುವುದು ಸ್ಥಳೀಯ ನಿವಾಸಿಗಳು ಮತ್ತು ಅಧಿಕಾರಿಗಳಲ್ಲಿ ಆತಂಕ ಮೂಡಿಸಿದೆ. ಅರುಣಾಚಲ ಪ್ರದೇಶದ ಪೂರ್ವ ಕಮೆಂಗ್ (Kameng River) ಜಿಲ್ಲೆಯ ಕಮೆಂಗ್ ನದಿಯು ಇದ್ದಕ್ಕಿದ್ದಂತೆ ಕಪ್ಪು ಬಣ್ಣಕ್ಕೆ ತಿರುಗಿದೆ. ಈ ನದಿಯ ದಡದಲ್ಲಿರುವ ಸೆಪ್ಪಾ ಗ್ರಾಮದ ನಿವಾಸಿಗಳು ಈ ಘಟನೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಈ ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಭಾರೀ ಭೂಕುಸಿತದಿಂದ (Landslide) ಮಣ್ಣು ನೀರಿನಲ್ಲಿ ಸೇರಿ ಕಪ್ಪು ಬಣ್ಣಕ್ಕೆ (Black Colour) ತಿರುಗಿರಬಹುದು ಎಂದು ಹೇಳಲಾಗುತ್ತಿದೆ.
ಈ ಘಟನೆಯ ನಂತರ, ಜನರು ಕಾಮೆಂಗ್ ನದಿಯ ಬಳಿ ಮೀನು ಹಿಡಿಯಲು ಹೋಗದಂತೆ ಮತ್ತು ಮುಂದಿನ ಆದೇಶದವರೆಗೆ ಸತ್ತ ಮೀನುಗಳನ್ನು ಸೇವಿಸದಂತೆ ಹಾಗೂ ಮಾರಾಟ ಮಾಡದಂತೆ ಪೂರ್ವ ಕಮೆಂಗ್ ಜಿಲ್ಲಾಡಳಿತವು ಜನರಲ್ಲಿ ಮನವಿ ಮಾಡಿದೆ. ಕಮೆಂಗ್ ನದಿಯ ನೀರಿನ ಬಣ್ಣದಲ್ಲಿ ಹಠಾತ್ ಬದಲಾವಣೆ ಮತ್ತು ಹೆಚ್ಚಿನ ಪ್ರಮಾಣದ ಮೀನುಗಳ ಸಾವಿನ ಹಿಂದಿನ ಕಾರಣವನ್ನು ಕಂಡುಹಿಡಿಯಲು ತಕ್ಷಣ ತಜ್ಞರ ಸಮಿತಿಯನ್ನು ರಚಿಸಬೇಕೆಂದು ಸೆಪ್ಪಾ ಪೂರ್ವ ಶಾಸಕ ತಪುಕ್ ಟಕು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಶಾಸಕ ಟಕು, ಕಮೆಂಗ್ ನದಿಯಲ್ಲಿ ಈ ಘಟನೆ ಹಿಂದೆಂದೂ ಸಂಭವಿಸಿರಲಿಲ್ಲ ಎಂದು ಹೇಳಿದರು. ಇದು ಕೆಲವು ದಿನಗಳಿಗಿಂತ ಹೆಚ್ಚು ಕಾಲ ಮುಂದುವರಿದರೆ, ನದಿಯಿಂದ ಜಲಚರಗಳು ಸಂಪೂರ್ಣವಾಗಿ ನಿರ್ಮೂಲನೆಯಾಗುತ್ತವೆ. ಭಾರೀ ಭೂಕುಸಿತದಿಂದ ನದಿಯ ನೀರಿನ ಬಣ್ಣ ಕಪ್ಪಾಗಿರಬಹುದು ಎಂದು ಅವರು ಹೇಳಿದ್ದಾರೆ.
ಪ್ರಾಥಮಿಕ ಸಂಶೋಧನೆಗಳ ಪ್ರಕಾರ, ಒಟ್ಟು ಕರಗಿದ ವಸ್ತುಗಳ (ಟಿಡಿಎಸ್) ಹೆಚ್ಚಿನ ಅಂಶದಿಂದಾಗಿ ನದಿಯ ನೀರು ಕಪ್ಪು ಬಣ್ಣಕ್ಕೆ ತಿರುಗಿದೆ ಎಂದು ಜಿಲ್ಲಾ ಮೀನುಗಾರಿಕೆ ಅಭಿವೃದ್ಧಿ ಅಧಿಕಾರಿ (ಡಿಎಫ್‌ಡಿಒ) ಹಾಲಿ ತಾಜೋ ಹೇಳಿದ್ದಾರೆ. ಮತ್ತು, ಸಾವಿರಾರು ಮೀನುಗಳ ಸಾವಿಗೆ ಕಾರಣವೆಂದರೆ, ಟಿಡಿಎಸ್ನ ದೊಡ್ಡ ಉಪಸ್ಥಿತಿಯಿಂದಾಗಿ ಇದು ನೀರಿನಲ್ಲಿ ಕಡಿಮೆ ಗೋಚರತೆ ಮತ್ತು ಜಲಚರ ಪ್ರಭೇದಗಳಿಗೆ ಉಸಿರಾಟದ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಸೇರಿಸಲಾಗಿದೆ.
ನದಿ ನೀರಿನಲ್ಲಿ ಹೆಚ್ಚಿನ ಟಿಡಿಎಸ್ ಇರುವುದರಿಂದ, ಮೀನುಗಳಿಗೆ ಆಮ್ಲಜನಕವನ್ನು ಉಸಿರಾಡಲು ಸಾಧ್ಯವಾಗಲಿಲ್ಲ ಎಂದು ತಾಜೋ ಹೇಳಿದರು. ನದಿಯಲ್ಲಿನ ಟಿಡಿಎಸ್ ಪ್ರತಿ ಲೀಟರ್‌ಗೆ 6,800 ಮಿಲಿ ಗ್ರಾಂ ಇತ್ತು, ಇದು ಪ್ರತಿ ಲೀಟರ್‌ಗೆ ಸಾಮಾನ್ಯ ಶ್ರೇಣಿಯ 300-1,200 ಮಿಲಿ ಗ್ರಾಂಗಿಂತ ಹೆಚ್ಚಾಗಿದೆ ಎಂದು ಅವರು ವರದಿಯನ್ನು ಉಲ್ಲೇಖಿಸಿ ಹೇಳಿದ್ದಾರೆ. ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವ ಮೀನುಗಳನ್ನು ಸೇವಿಸಬೇಡಿ ಎಂದು ತಾಜೋ ಜನರಿಗೆ ಮನವಿ ಮಾಡಿದ್ದಾರೆ.
ಅರುಣಾಚಲ ಪ್ರದೇಶದಲ್ಲಿ ನದಿಯೊಂದು ಕಪ್ಪು ಬಣ್ಣಕ್ಕೆ ತಿರುಗುತ್ತಿರುವುದು ಇದೇ ಮೊದಲಲ್ಲ. 2017ರ ನವೆಂಬರ್ನಲ್ಲಿ ರಾಜ್ಯದ ಪೂರ್ವ ಸಿಯಾಂಗ್ ಜಿಲ್ಲೆಯ ಪಾಸಿಘಾಟ್‌ನಲ್ಲಿರುವ ಸಿಯಾಂಗ್ ನದಿ ಕೂಡ ಇದೇ ರೀತಿ ಕಪ್ಪು ಬಣ್ಣಕ್ಕೆ ತಿರುಗಿತ್ತು. ಚೀನಾದಲ್ಲಿ 10,000 ಕಿ.ಮೀ ಉದ್ದದ ಸುರಂಗವನ್ನು ನಿರ್ಮಿಸಿದ ಪರಿಣಾಮ ನದಿ ನೀರು ಕಪ್ಪಾಗಿದೆ ಎಂದು ಅರುಣಾಚಲ ಪೂರ್ವದ ಕಾಂಗ್ರೆಸ್ ಸಂಸದ ನಿನೊಂಗ್ ಎರಿಂಗ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಆದರೆ, ಚೀನಾ ಈ ಆರೋಪವನ್ನು ನಿರಾಕರಿಸಿತ್ತು.
ಇದನ್ನೂ ಓದಿ: ಸಮುದ್ರ ಪ್ರವಾಸಕ್ಕೆ ಪ್ಲಾನ್ ಮಾಡಿದ್ದರೆ ಮರವಂತೆಗೆ ಭೇಟಿ ನೀಡಿ; ಒಂದೇ ಕಡೆ ಸಿಗಲಿದೆ ಬೀಚ್ ಮತ್ತು ನದಿಯ ಅದ್ಭುತ ಅನುಭವ
ಅರುಣಾಚಲ ಪ್ರದೇಶದಲ್ಲಿ ಸಂಪೂರ್ಣ ಕಪ್ಪುಬಣ್ಣಕ್ಕೆ ತಿರುಗಿದ ನದಿ; ಚೀನಾವೇ ಕಾರಣವೆಂದ ಸ್ಥಳೀಯರು
Published On - 3:49 pm, Mon, 8 November 21