AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರುಣಾಚಲ ಪ್ರದೇಶದಲ್ಲಿ ಸಂಪೂರ್ಣ ಕಪ್ಪುಬಣ್ಣಕ್ಕೆ ತಿರುಗಿದ ನದಿ; ಚೀನಾವೇ ಕಾರಣವೆಂದ ಸ್ಥಳೀಯರು

ನದಿ ನೀರು ಕಲುಷಿತಗೊಳ್ಳಲು ಚೀನಾ ಕಾರಣ ಎಂದು ಸ್ಥಳೀಯ ಸೆಪ್ಪಾ ಗ್ರಾಮಸ್ಥರು ದೂಷಿಸಿದ್ದಾರೆ.  ಚೀನಾ ಗಡಿಯಾದ್ಯಂತ ಕಟ್ಟಡಗಳ ನಿರ್ಮಾಣವನ್ನು ಮಿತಿಮೀರಿ ಮಾಡುತ್ತಿದೆ. ಇದರಿಂದಾಗಿ ನದಿಯಲ್ಲಿ ಟಿಡಿಎಸ್​ ಪ್ರಮಾಣ ಅಧಿಕಗೊಂಡಿದೆ.

ಅರುಣಾಚಲ ಪ್ರದೇಶದಲ್ಲಿ ಸಂಪೂರ್ಣ ಕಪ್ಪುಬಣ್ಣಕ್ಕೆ ತಿರುಗಿದ ನದಿ; ಚೀನಾವೇ ಕಾರಣವೆಂದ ಸ್ಥಳೀಯರು
ಕಮೇಂಗ್​ ನದಿ
TV9 Web
| Updated By: Lakshmi Hegde|

Updated on: Oct 30, 2021 | 5:51 PM

Share

ಅರುಣಾಚಲ ಪ್ರದೇಶದಲ್ಲಿ ನದಿಯೊಂದು ಪೂರ್ತಿ ಕಪ್ಪುಬಣ್ಣಕ್ಕೆ ತಿರುಗಿದ್ದು ಆತಂಕ ಮೂಡಿಸಿದೆ. ಅದಕ್ಕಿಂತ ಹೆಚ್ಚಾಗಿ ಈ ನದಿಯಲ್ಲಿದ್ದ ಸಾವಿರಾರು ಮೀನುಗಳು ಸಾವನ್ನಪ್ಪಿವೆ. ಹೀಗಾಗಿ ಇಲ್ಲಿ ಮೀನು ಹಿಡಿದು ತಿನ್ನಬೇಡಿ..ನದಿ ನೀರು ಕುಡಿಯಬೇಡಿ ಎಂದು ಸ್ಥಳೀಯರಿಗೆ ಅಧಿಕಾರಿಗಳು ಸೂಚಿಸಿದ್ದಾರೆ.  ಈ ನದಿ ನೀರು ಹೀಗಾಗಲು ಇದರಲ್ಲಿ ಭಾರೀ ಪ್ರಮಾಣದ ವಿಷಯುಕ್ತ ಅಂಶ ಕರಗಿದ್ದು (ಟಿಡಿಎಸ್​) ಕಾರಣ ಎಂದು ಜಿಲ್ಲಾಡಳಿತ ತಿಳಿಸಿದೆ.

ಅಂದಹಾಗೆ ಹೀಗೆ ನೀರು ಕಪ್ಪಾಗಿದ್ದು ಅರುಣಾಚಲ ಪ್ರದೇಶದ ಪೂರ್ವ ಕಮೇಂಗ್​ ಜಿಲ್ಲೆಯಲ್ಲಿ ಹರಿಯುತ್ತಿರುವ ಕಮೇಂಗ್​​ ನದಿಯಲ್ಲಿ.  ಇಲ್ಲಿನ ಮೀನುಗಾರಿಕಾ ಇಲಾಖೆ ಅಧಿಕಾರಿಗಳು ನದಿ ನೀರನ್ನು ಪರಿಶೀಲಿಸಿದ್ದಾರೆ. ಭಾರಿ ಪ್ರಮಾಣದಲ್ಲಿ ಕರಗಿರುವ ವಿಷಯುಕ್ತ ವಸ್ತುವಿನಿಂದಾಗಿ ಮೀನುಗಳು ಉಸಿರುಗಟ್ಟಿ ಸತ್ತಿವೆ.  ನದಿಯಲ್ಲಿ ಸಾಮಾನ್ಯವಾಗಿ ಲೀಟರ್​​ಗೆ ಸಾಮಾನ್ಯವಾಗಿ 300-1200 ಎಂಜಿಗಳಷ್ಟು ಟಿಡಿಎಸ್​ ಇರಬೇಕು. ಅಂದರೆ ಒಟ್ಟಾರೆ ಕರಗಿರುವ ಘನಪದಾರ್ಥಗಳು. ಅದಕ್ಕಿಂತ ಹೆಚ್ಚಾದರೆ ನದಿ ನೀರು ವಿಷಯುಕ್ತಗೊಳ್ಳುತ್ತದೆ. ಅದೀಗ ಕಮೇಂಗ್​ ನದಿಯಲ್ಲಿ ಪ್ರತಿ ಲೀಟರ್​ಗೆ 6800 ಎಂಜಿಗಳಷ್ಟಾಗಿತ್ತು ಎಂದು ಮೀನುಗಾರಿಕೆ ಅಭಿವೃದ್ಧಿ ಅಧಿಕಾರಿ ಹಲಿ ತಾಜೋ ತಿಳಿಸಿದ್ದಾರೆ.

ಚೀನಾವನ್ನು ದೂಷಿಸಿದ ಸ್ಥಳೀಯರು ನದಿ ನೀರು ಕಲುಷಿತಗೊಳ್ಳಲು ಚೀನಾ ಕಾರಣ ಎಂದು ಸ್ಥಳೀಯ ಸೆಪ್ಪಾ ಗ್ರಾಮಸ್ಥರು ದೂಷಿಸಿದ್ದಾರೆ.  ಚೀನಾ ಗಡಿಯಾದ್ಯಂತ ಕಟ್ಟಡಗಳ ನಿರ್ಮಾಣವನ್ನು ಮಿತಿಮೀರಿ ಮಾಡುತ್ತಿದೆ. ಇದರಿಂದಾಗಿ ನದಿಯಲ್ಲಿ ಟಿಡಿಎಸ್​ ಪ್ರಮಾಣ ಅಧಿಕಗೊಂಡಿದೆ. ಹೀಗಾಗಿ ಕಮೇಂಗ್​ ನದಿ ವಿಷಯುಕ್ತಗೊಂಡಿದೆ ಎಂದು ಹೇಳಿದ್ದಾರೆ.  ಅಷ್ಟೇ ಅಲ್ಲ, ಇದು ಹೀಗೆ ಮುಂದುವರಿದರೆ ಕೆಲವೇ ದಿನಗಳಲ್ಲಿ ಈ ನದಿಯಲ್ಲಿರುವ ಎಲ್ಲ ಜಲಚರಗಳೂ ಸರ್ವನಾಶ ಆಗುತ್ತವೆ ಎಂದೂ ಆತಂಕ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲವು ವಾರಗಳಿಂದಲೂ ಅರುಣಾಚಲ ಪ್ರದೇಶದಲ್ಲಿ ಚೀನಾ ಪೀಪಲ್ಸ್​ ಲಿಬರೇಶನ್​ ಆರ್ಮಿಯ ಕಾರಣದಿಂದಾಗಿ ಭಾರತದ ಸೇನೆ ತನ್ನ ಗಸ್ತು ಹೆಚ್ಚಳ ಮಾಡಿದೆ. ಇನ್ನು ಚೀನಾ ಹಳ್ಳಿಗಳನ್ನೇ ನಿರ್ಮಾಣ ಮಾಡುತ್ತಿರುವ ಬಗ್ಗೆ ಆಗಾಗ ವರದಿಯಾಗುತ್ತಿದೆ. ಈ ಮಧ್ಯೆ ನದಿ ನೀರಿನ ಬಣ್ಣವೂ ಸಂಪೂರ್ಣ ಕಪ್ಪಾಗಿದೆ.

ಇದನ್ನೂ ಓದಿ: ಸಾಯುವ ಕೆಲವೇ ಗಂಟೆಗಳ ಮುನ್ನ ಪುನೀತ್​ ರಾಜ್​ಕುಮಾರ್​ ಮಾತನಾಡಿದ್ದೇನು? ಆಡಿಯೋ ಕ್ಲಿಪ್ ವೈರಲ್​

ಪುನೀತ್​ ನಿಧನದಿಂದ ಮಕ್ಕಳ ಮನಸ್ಸಿಗೆ ಘಾಸಿ; ‘ಅಪ್ಪು ಅಣ್ಣ ಬೇಕು’ ಅಂತ ಅಳುವ ಕಂದಮ್ಮಗಳ ವಿಡಿಯೋ ವೈರಲ್​