Video: ತಾಯಿ-ಮಗುವಿನ ಪುನರ್ಮಿಲನ; ಮರಳಿ ಅಮ್ಮನ ಮಡಿಲು ಸೇರಿದ ಮರಿಯಾನೆಯ ಖುಷಿ ನೋಡಿ
ಪ್ರಾಣಿಗಳಿಗೆ ಸಂಬಂಧಿಸಿದ ಅದರಲ್ಲೂ ಆನೆಗಳ ಆಟ, ತುಂಟಾಟಗಳಿಗೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯ ಕಾಣಸಿಗುತ್ತಿರುತ್ತವೆ. ಇದೀಗ ಅಂತಹದ್ದೇ ಹೃದಯಸ್ಪರ್ಶಿ ದೃಶ್ಯವೊಂದು ವೈರಲ್ ಆಗಿದ್ದು, ಗುಂಪಿನಿಂದ ಬೇರ್ಪಟ್ಟಿದ್ದ ಮರಿಯಾನೆ ಮರಳಿ ತಾಯಿಯ ಮಡಿಲು ಸೇರಿದ ಅಮೂಲ್ಯ ಕ್ಷಣವನ್ನು ಕಂಡು ಪ್ರಾಣಿ ಪ್ರಿಯರು ಭಾವುಕರಾಗಿದ್ದಾರೆ.

ಅಸ್ಸಾಂ, ಜುಲೈ 15: ಆನೆಗಳು (Elephants) ಭಾವನೆಗಳಿಗೆ ಬೆಲೆ ಕೊಡುವ, ತನ್ನ ಕುಟುಂಬದೊಂದಿಗೆ ವಾಸಿಸುವ ಸಂಘಜೀವಿ. ಇವುಗಳು ಯಾವಾಗಲೂ ತಮ್ಮ ತಮ್ಮ ಹಿಂಡಿನೊಂದಿಗೆಯೇ ಇರುತ್ತವೆ. ಆದರೆ ಕೆಲವೊಂದು ಬಾರಿ ಈ ಆನೆ ಮರಿಗಳು ಗುಂಪಿನಿಂದ ಬೇರ್ಪಡುತ್ತವೆ. ಹೀಗೆ ತಾಯಿಯಿಂದ ಬೇರ್ಪಟ್ಟು ಮರಳಿ ಆನೆ ಮರಿ ಅಮ್ಮನ ಮಡಿಲು ಸೇರಿದ ಇಂತಹ ಸಾಕಷ್ಟು ಘಟನೆಗಳು ಈ ಹಿಂದೆಯೂ ನಡೆದಿವೆ. ಇದೀಗ ಅಸ್ಸಾಂನ ರಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲೂ ಇಂತಹದ್ದೇ ಘಟನೆಯೊಂದು ನಡೆದಿದ್ದು, ತಾಯಿಯಿಂದ ಬೇರ್ಪಟ್ಟ ಮರಿಯಾನೆ ಕೊನೆಗೂ ತಾಯಿಯ ಮಡಿಲು ಸೇರಿದೆ. ಗುಂಪಿನಿಂದ ಬೇರ್ಪಟ್ಟು ತಾಯಿಯನ್ನು ಕಾಣದೆ ಕಂಗಾಲಾಗಿದ್ದ ಮರಿಯಾನೆಯನ್ನು ಅರಣ್ಯಾಧಿಕಾರಿಗಳು ತಾಯಿಯೊಂದಿಗೆ ಸೇರಿಸಿದ್ದು, ತಾಯಿ ಮಗುವಿನ ಪುನರ್ಮಿಲನದ (Reunion of baby and mother elephant) ಈ ಸುಂದರ ದೃಶ್ಯ ಇದೀಗ ಸಖತ್ ವೈರಲ್ ಆಗುತ್ತಿದೆ.
ಮರಳಿ ಅಮ್ಮನ ಮಡಿಲು ಸೇರಿದ ಮರಿಯಾನೆಯ ಖುಷಿ ನೋಡಿ:
ಇತ್ತೀಚಿಗೆ ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಚೋಟು ಎಂಬ ಹೆಸರಿನ ಮರಿಯಾನೆ ತನ್ನ ಹಿಂಡಿನಿಂದ ಬೇರ್ಪಟ್ಟಿತ್ತು. ತಾಯಿಯಿಂದ ಬೇರ್ಪಟ್ಟು ಬಹಳ ದುಃಖದಲ್ಲಿದ್ದ ಈ ಆನೆ ಮರಿಯನ್ನು ಅರಣ್ಯಾಧಿಕಾರಿಗಳು ತಾಯಿಯ ಮಡಿಲನ್ನು ಸೇರುವಂತೆ ಮಾಡಿದ್ದಾರೆ.
ತಾಯಿ ಮಗುವಿನ ಪುನರ್ಮಿಲನದ ಈ ಅದ್ಭುತ ದೃಶ್ಯವನ್ನು ಅರಣ್ಯಾಧಿಕಾರಿ ಸುಸುಂತಾ ನಂದ (Susanta Nanda) ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಕಾಜಿರಂಗದಲ್ಲಿ ಚೋಟು ತಾಯಿಯಿಂದ ಬೇರ್ಪಟ್ಟಿತ್ತು. ನಂತರ ಮಾನವ ವಾಸನೆಯನ್ನು ನಿಗ್ರಹಿಸಲು ಅರಣ್ಯಾಧಿಕಾರಿಗಳು ತಾಯಿಯ ಸಗಣಿಯನ್ನು ಮರಿಯಾನೆಗೆ ಲೇಪಿಸಿದ್ದು, ಕೊನೆಗೆ ಮರಿ ತಾಯಿಯ ಮಡಿಲು ಸೇರಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Chotu got separated from mother at Kaziranga. It was united later with its mother. The forest officials applied mother’s dung to the calf to suppress human smell. Happy reunion at the end ☺️ pic.twitter.com/0sN1RbQ55E
— Susanta Nanda IFS (Retd) (@susantananda3) July 6, 2025
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಹಿಂಡಿನಿಂದ ಬೇರ್ಪಟ್ಟಿದ್ದ ಮರಿಯಾನೆ ತಾಯಿಯನ್ನು ಕಾಣದೆ ಚಡಪಡಿಸುತ್ತಾ ಅತ್ತಿಂದಿತ್ತ ಓಡಾಡುತ್ತಿರುವ ದೃಶ್ಯವನ್ನು ಕಾಣಬಹುದು. ನಂತರ ಅರಣ್ಯಾಧಿಕಾರಿಗಳ ಸಹಾಯದಿಂದ ಮರಿ ಕೊನೆಗೂ ತಾಯಿಯ ಮಡಿಲು ಸೇರಿದೆ. ತಾಯಿ-ಮಗುವಿನ ಪುನರ್ಮಿಲನದ ಈ ದೃಶ್ಯವನ್ನು ಕಂಡು ನೋಡುಗರು ಭಾವುಕರಾಗಿದ್ದಾರೆ.
ಇದನ್ನೂ ಓದಿ: ಮಹಿಳೆಯ ಕೈಯಲ್ಲಿ ಕಲ್ಲಂಗಡಿ ಹಣ್ಣು ಕಂಡೊಡನೆ ಓಡೋಡಿ ಬಂದ ಮರಿಯಾನೆ, ಮಾಡಿದ್ದೇನು ನೋಡಿ
ಜುಲೈ 06 ರಂದು ಹಂಚಿಕೊಳ್ಳಲಾದ ಈ ವಿಡಿಯೋ 8 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಮಗುವನ್ನು ತಾಯಿಯ ಮಡಿಲು ಸೇರಲು ಸಹಾಯ ಮಾಡಿದ ಅರಣ್ಯಾಧಿಕಾರಿಗಳಿಗೆ ಧನ್ಯವಾದಗಳುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಆಹಾ… ಎಷ್ಟು ಅದ್ಭುತವಾದ ದೃಶ್ಯವಿದುʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಚೋಟು ತುಂಬಾ ಮುದ್ದಾಗಿದ್ದಾನೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








