Trending : ಜಗತ್ತಿನಾದ್ಯಂತ ಕೊವಿಡ್ ಆವರಿಸಿದಾಗ ಆರಂಭದಲ್ಲಿ ಸಾಕಷ್ಟು ಜನರಿಗೆ ವರ್ಕ್ ಫ್ರಂ ಹೋಮ್ ನಿಭಾಯಿಸುವುದು ಕಷ್ಟವೆನ್ನಿಸುತ್ತಿತ್ತು. ಶಾಂತವಾಗಿ ಕಚೇರಿಯಲ್ಲಿ ಕುಳಿತು ಕೆಲಸ ಮಾಡಿದ ಇಷ್ಟುವರ್ಷಗಳ ಅಭ್ಯಾಸ ಮತ್ತು ಮನಸ್ಥಿತಿಗೆ ಮನೆಯಿಂದ ಕೆಲಸ ಮಾಡುವುದೆಂದರೆ ಸಂಕಷ್ಟದಂತೆ ತೋರಿತು. ಇಂಟರ್ನೆಟ್ ಸಮಸ್ಯೆ, ವಿದ್ಯುತ್ ಸಮಸ್ಯೆ, ಮನೆಮಂದಿಯೆಲ್ಲ ವರ್ಕ್ ಫ್ರಂ ಹೋಂನಲ್ಲಿಯೇ ತೊಡಗಿರುವುದು, ಮಕ್ಕಳು ಮರಿ ಸಂಸಾರ ಹೀಗೆ ಒಟ್ಟಾರೆ ನಾನಾ ರೀತಿಯ ಗೋಜು ಗೊಂದಲಗಳು. ಇದೆಲ್ಲ ಕಳೆದು ಜನಜೀವನ ಸಮಸ್ಥಿತಿಗೆ ಬರುತ್ತಿದ್ದಂತೆ ಅಚ್ಚರಿಯೆಂಬಂತೆ ಅನೇಕರು ವರ್ಕ್ ಫ್ರಂ ಹೋಮ್ ಸಂಸ್ಕೃತಿಗೆ ಹೊಂದಿಕೊಂಡುಬಿಟ್ಟರು. ಅತ್ತ ಕಂಪೆನಿಗಳು ಖರ್ಚು ವೆಚ್ಚಗಳನ್ನೆಲ್ಲ ಲೆಕ್ಕ ಹಾಕಿ ಶಾಶ್ವತವಾಗಿ ವರ್ಕ್ ಫ್ರಂ ಹೋಂ ವ್ಯವಸ್ಥೆಯನ್ನು ಅಳವಡಿಸಿಕೊಂಡುಬಿಟ್ಟವು. ಆದರೆ ಇದೀಗ, ಈ ಹೊಂದಾಣಿಕೆಯೇ ಬ್ರಿಟನ್ನಲ್ಲಿರುವ ಬಾರ್ ವರ್ತಕರನ್ನು ಚಿಂತೆಗೀಡು ಮಾಡಿರುವುದು. ಹಾಗಾಗಿ ಬಾರ್ಗಳು ಮತ್ತೆ ಮೊದಲಿನ ಸ್ಥಿತಿಗೆ ಬರಲು ಹೂಡಿರುವ ಉಪಾಯವೇ ವರ್ಕ್ ಫ್ರಂ ಪಬ್.
ಬ್ರಿಟನ್ನ ಹಲವಾರು ಪಬ್‌ಗಳು ವರ್ಕ್ ಪ್ರಂ ಪಬ್ ಸೌಲಭ್ಯ ಕಲ್ಪಿಸುವುದಾಗಿ ಗ್ರಾಹಕರನ್ನು ಇದೀಗ ಆಹ್ವಾನಿಸುತ್ತಿವೆ. ವಿವಿಧ ರೀತಿಯ ಆಫರ್ ಮತ್ತು ಪ್ಯಾಕೇಜ್ ನೀಡಿ ಆಕರ್ಷಿಸುತ್ತಿವೆ. ಕೆಲಸ ಮಾಡಲು ಎಂಥ ವಾತಾವರಣ ಮತ್ತು ಸೌಲಭ್ಯಗಳು ಬೇಕು ಎನ್ನುವುದರ ಮೇಲೆ ಪ್ಯಾಕೇಜ್ಗಳು ಲಭ್ಯವಿವೆ. ವೈಫೈ, ಚಾರ್ಜಿಂಗ್ ಸ್ಪಾಟ್, ತಿಂಡಿತಿನಿಸು ಮತ್ತು ಪಾನೀಯಗಳುಳ್ಳ ಪ್ಯಾಕೇಜ್ಗಳು ಗ್ರಾಹಕರ ಬೇಡಿಕೆಗೆ ತಕ್ಕಂತೆ ಲಭ್ಯವಾಗುತ್ತಿವೆ. ಗ್ರಾಹಕರ ನಿರೀಕ್ಷೆಗೆ ತಕ್ಕಂತೆ ಎಲ್ಲ ರೀತಿ ವ್ಯವಸ್ಥೆಯನ್ನೂ ಬಾರ್ಗಳು ಸಿದ್ಧವಾಗಿವೆ. ಈಗಾಗಲೇ ಕೆಲ ದೇಶಗಳಲ್ಲಿ ವರ್ಕ್ ಫ್ರಂ ಪಬ್ ಕಲ್ಚರ್ ಚಾಲ್ತಿಯಲ್ಲಿದೆ.
ದಿ ಗಾರ್ಡಿಯನ್‌ನ ವರದಿಯ ಪ್ರಕಾರ, 380 ಪಬ್‌ಗಳು ಫುಲ್ಲರ್ಸ್ ಚೈನ್ ಆಫರ್ನಲ್ಲಿ ಊಟ ಮತ್ತು ಪಾನೀಯ ಪೂರೈಸಲು ದಿನಕ್ಕೆ ರೂ. 900 ನಿಗದಿಮಾಡಿವೆ. ಬ್ರೇವರಿ ಯಂಗ್ಸ್ ಆಫರ್ಗೆ 185 ಪಬ್‌ಗಳು ಒಪ್ಪಂದ ಮಾಡಿಕೊಂಡಿವೆ. ಒಂದು ಪಬ್ನಿಂದ ಇನ್ನೊಂದು ಪಬ್ಗೆ ದರದಲ್ಲಿ ವ್ಯತ್ಯಾಸವಿರುತ್ತದೆ.
ವರ್ಕ್ ಫ್ರಂ ಪಬ್ ಭಾರತಕ್ಕೆ ಕಾಲಿಟ್ಟರೆ ಹೇಗಿರುತ್ತದೆ? ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ಟ್ರೆಂಡಿಂಗ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 10:48 am, Thu, 13 October 22