
ಬೆಂಗಳೂರು, ಸೆಪ್ಟೆಂಬರ್ 01: ಅದೃಷ್ಟ ಹೇಗೂ ಬದಲಾಗುತ್ತದೆ. ಏನು ಇಲ್ಲದವರೂ ರಾತ್ರಿ ಬೆಳಗಾಗುವಷ್ಟರಲ್ಲಿ ಶ್ರೀಮಂತರಾಗಬಹುದು. ಎಲ್ಲಾ ಇದ್ದವರು ಬೀದಿಗೆ ಬೀಳಲು ಬಹುದು. ಈ ವ್ಯಕ್ತಿಯನ್ನು ನೋಡಿದ ಮೇಲೆ ಈ ಮಾತು ಅಕ್ಷರಶಃ ಸತ್ಯವೆನಿಸುತ್ತದೆ. ಸರಿಸುಮಾರು ಹದಿನಾಲ್ಕು ವರ್ಷಗಳ ಕಾಲ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಬೆಂಗಳೂರಿನ (Bengaluru) ವ್ಯಕ್ತಿಯಿವರು. ಆದರೆ ಇಂದು ಉದ್ಯೋಗವಿಲ್ಲದ, ಇರಲು ಸೂರು ಇಲ್ಲದೇ ಫುಟ್‌ಪಾಟ್‌ನಲ್ಲಿ ಜೀವನ ನಡೆಸುತ್ತಿದ್ದಾರೆ. ತನಗೆ ಕೆಲಸವಿಲ್ಲ, ಇರಲು ಮನೆಯೂ ಇಲ್ಲ ಎಂದು ಬರೆದಿರುವ ಚೀಟಿ ಹಿಡಿದುಕೊಂಡು ಈ ವ್ಯಕ್ತಿಯೂ ಸಹಾಯಕ್ಕಾಗಿ ಬೇಡುತ್ತಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬದುಕು ಹೇಗೆ ಹೊಡೆತ ಕೊಡುತ್ತದೆ ಎನ್ನುವುದಕ್ಕೆ ಇದುವೇ ಸಾಕ್ಷಿ ಎಂದಿದ್ದಾರೆ.
Being-Brilliant ಎಂದು ರೆಡ್ಡಿಟ್ ಬಳಕೆದಾರರು ಈ ಪೋಸ್ಟ್ ಹಂಚಿಕೊಂಡಿದ್ದು, “ಬೆಂಗಳೂರಿನ ಪ್ರಮುಖ ಸಿಗ್ನಲ್‌ನಲ್ಲಿ ಈ ವ್ಯಕ್ತಿಯನ್ನು ಭೇಟಿಯಾದೆ. ಅವನನ್ನು ನೋಡುವುದು ಎಷ್ಟೇ ಹೃದಯವಿದ್ರಾವಕವಾಗಿದ್ದರೂ, ಇದು ಸಮಾಜದ ವೈಫಲ್ಯದ ಪರಿಣಾಮವೇ ಅಥವಾ ವೈಯಕ್ತಿಕ ಆಯ್ಕೆಗಳ ಪರಿಣಾಮವೇ ಎಂದು ನನಗೆ ಆಶ್ಚರ್ಯವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ವ್ಯಕ್ತಿಯೊಬ್ಬನು ಫುಟ್‌ಪಾತ್‌ನಲ್ಲಿ ಕುಳಿತಿರುವುದನ್ನು ಕಾಣಬಹುದು. ಆದರೆ ಈ ವ್ಯಕ್ತಿಯೂ ಕೈಯಲ್ಲಿ ಹಿಡಿದು ಕೊಂಡಿದ್ದ ಕಾಗದ ಮೇಲೆ ಕೆಲವು ಸಾಲುಗಳನ್ನು ಬರೆಯಲಾಗಿದೆ. ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿ ಬರೆಯಲಾಗಿದ್ದು, “ನನಗೆ ಕೆಲಸವಿಲ್ಲ, ಮನೆ ಇಲ್ಲ, ದಯವಿಟ್ಟು ನನಗೆ ಸಹಾಯ ಮಾಡಿ. ನನಗೆ ಬ್ಯಾಂಕಿಂಗ್‌ನಲ್ಲಿ 14 ವರ್ಷಗಳ ಕೆಲಸದ ಅನುಭವವಿದೆ.ನಾನು ಪದವೀಧರ ಎಂದಿರುವ ಸಾಲುಗಳನ್ನು ನೀವಿಲ್ಲಿ ನೋಡಬಹದು. ಇನ್ನು ಡಿಜಿಟಲ್ ಪಾವತಿಗಾಗಿ ಕ್ಯೂ ಆರ್ ಕೋಡ್ ಹೊಂದಿರುವ ಸಣ್ಣ ಹಾಳೆಯನ್ನು ಕೈಯಲ್ಲಿ ಹಿಡಿದುಕೊಂಡಿರುವುದನ್ನು ಕಾಣಬಹುದು.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಹಲವಾರು ಬಳಕೆದಾರರು ಇದಕ್ಕೆ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಒಬ್ಬ ಬಳಕೆದಾರರು, ಈ ರೀತಿ ಭಿಕ್ಷೆ ಬೇಡಲು ಯಾವುದೇ ನೆಪವಿಲ್ಲ, ವಿಶೇಷವಾಗಿ ಬೆಂಗಳೂರಿನಂತಹ ನಗರದಲ್ಲಿ ಕೆಲಸ ಮಾಡಲು ಸಿದ್ಧರಿದ್ದರೆ ಸಾಕಷ್ಟು ಕೆಲಸಗಳಿವೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಬದುಕು ಹೇಗೆ ಮಕಾಡೆ ಮಲಗಿಸುತ್ತದೆ ಎನ್ನುವುದಕ್ಕೆ ಈ ದೃಶ್ಯ ಸಾಕ್ಷಿ. ಈ ವ್ಯಕ್ತಿಯ ಪರಿಸ್ಥಿತಿಯೂ ನೋಡಿ ಬೇಸರವಾಯಿತಿ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರ, ಈ ವ್ಯಕ್ತಿಯ ಹಿನ್ನಲೆಯನ್ನು ತಿಳಿಯದೆ ಆತನನ್ನು ನಿರ್ಣಯಿಸುವುದು ತಪ್ಪಾಗುತ್ತದೆ. ಸಾಧ್ಯವಾದರೆ ಅವನಿಗೆ ಒಳ್ಳೆಯ ಉದ್ಯೋಗ ಹುಡುಕಿ ಕೊಟ್ಟು ಬದುಕಿಗೆ ಆಸರೆಯಾಗಿ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ