Viral: ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ್ರೂ ಈ ನಗರಕ್ಕೆ ನಾನು ಹೊರಗಿನವ, ಅಸಲಿ ಕಾರಣ ಬಿಚ್ಚಿಟ್ಟ ಬೆಂಗಳೂರಿಗ
ಕೆಲವರಿಗೆ ಬೆಂಗಳೂರು ಅಂದರೆ ಅದೇನೋ ಸೆಳೆತ, ಹೀಗಾಗಿ ಉದ್ಯೋಗ ಅರಸುತ್ತಾ ಬೆಂಗಳೂರಿಗೆ ಬರುವವರೇ ಹೆಚ್ಚು. ಈ ಮಾಯಾನಗರಿ ಬೆಂಗಳೂರು ಅನೇಕರಿಗೆ ಬದುಕು ಕಟ್ಟಿಕೊಟ್ಟಿದೆ. ಹೀಗಾಗಿ ತಮ್ಮ ಹುಟ್ಟೂರಿನಂತೆಯೇ ಈ ಊರನ್ನು ಕೂಡ ಅಷ್ಟೇ ಇಷ್ಟ ಪಡುತ್ತಾರೆ. ಆದರೆ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಈ ವ್ಯಕ್ತಿಗೆ, ಈ ಊರಿಗೆ ತಾನು ಹೊರಗಿನವ ಎನ್ನುವ ಭಾವನೆ ಮೂಡಿದೆಯಂತೆ. ಹೀಗೆ ಹೇಳಲು ಕಾರಣವೇನು? ಈ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ.

ಬೆಂಗಳೂರಿಗೆ (Bengaluru) ಯಾರೇ ಬಂದ್ರು, ಅವರಿಗೆ ಬದುಕು ಕಟ್ಟಿಕೊಡುತ್ತದೆ ಈ ಸುಂದರ ನಗರ. ಹೀಗಾಗಿ ಹೆಚ್ಚಿನವರು ಓದು ಮುಗಿಯುತ್ತಿದ್ದಂತೆ ಬೆಂಗಳೂರಿನತ್ತ ಹೆಜ್ಜೆ ಹಾಕುತ್ತಾರೆ. ಟ್ರಾಫಿಕ್ ಸಮಸ್ಯೆ, ಇಲ್ಲಿನ ಜನರದ್ದು ಯಾಂತ್ರಿಕ ಬದುಕು ಎಂದೆನಿಸಿದರೂ ಅದನ್ನೇ ಖುಷಿಯಿಂದ ಸ್ವೀಕರಿಸಿ ಇಷ್ಟ ಪಟ್ಟು ಇಲ್ಲಿ ಬದುಕುತ್ತಾರೆ. ದಿನ ಕಳೆಯುತ್ತಾ ಹೋದಂತೆ ಇದು ನನ್ನದೇ ಊರು ಎನ್ನುವಷ್ಟು ಹತ್ತಿರವಾಗಿ ಬಿಡುತ್ತದೆ. ಆದರೆ ಬೆಂಗಳೂರಿನ ನಿವಾಸಿಗೆ ತನ್ನ ಹುಟ್ಟೂರು ತನ್ನದೇ ಊರು ಎಂದೆನಿಸುತ್ತಿಲ್ಲವಂತೆ. ತಾನು ಈ ಊರಿಗೆ ಹೊರಗಿನವ ಎನ್ನುವ ಭಾವನೆ ಬರುತ್ತಿದೆಯಂತೆ. ಈ ರೀತಿ ಭಾವನೆ ಬರಲು ಕಾರಣವನ್ನು ವಿವರಿಸಿದ್ದಾರೆ ಈ ವ್ಯಕ್ತಿ. ಈ ಕುರಿತಾದ ಪೋಸ್ಟ್ ವೈರಲ್ ಆಗಿದೆ.
r/Bengaluru ರೆಡ್ಡಿಟ್ ಖಾತೆಯಲ್ಲಿ ಬೆಂಗಳೂರಿನ ವ್ಯಕ್ತಿಯೂ ಪೋಸ್ಟ್ ಮಾಡಿಕೊಂಡಿದ್ದು, ನಾನು ಬೆಂಗಳೂರಿನವನು, ಆದರೆ ನನ್ನ ಸ್ವಂತ ನಗರದಲ್ಲಿ ನಾನು ಅಪರಿಚಿತನಂತೆ ಅನಿಸುತ್ತಿದೆ. ಅದರಲ್ಲಿಯೂ ವಿಶೇಷವಾಗಿ ಕೆಲಸದ ಸ್ಥಳದಲ್ಲಿ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ನಾನು ಬೆಂಗಳೂರು ನಗರದಲ್ಲಿ ಹುಟ್ಟಿ ಬೆಳೆದಿದ್ದರೂ, ತಾವು ಬೆಳೆದ ಸಂಸ್ಕೃತಿ ಹಾಗೂ ಇಲ್ಲಿನ ಜನರು ಮರೆಯಾಗುತ್ತಿದ್ದಾರೆ. ಕನ್ನಡಿಗನಾಗಿದ್ರು, ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ರು ನನ್ನ ಸ್ವಂತ ಊರು ನನಗೆ ಹೊರಗಿನವಂತೆ ಎನ್ನುವಂತ ಭಾವನೆ ಉಂಟು ಮಾಡುತ್ತಿದೆ. ಇದು ನನಗೆ ಮನೆಯಂತೆ ಭಾಸವಾಗುತ್ತಿಲ್ಲ. ಬೇರೆ ಊರಿನವರು ಇಲ್ಲಿಗೆ ಬಂದು ತಮ್ಮದೇ ಆದ ಸಮುದಾಯಗಳನ್ನು ಕಟ್ಟಿಕೊಂಡಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ನಾನು ಹೇಳುವ ಮಾತುಗಳು ಇಲ್ಲಿಗೆ ಬಂದು ನೆಲೆಸಿರುವ ಪಕ್ಕದ ರಾಜ್ಯದ ಜನರಿಗೆ ನೋವುಂಟು ಮಾಡಬಾರದು. ಆದರೆ ನೀವು ನಮ್ಮ ಈ ಬೆಂಗಳೂರನ್ನು ನಿಮ್ಮ ಮನೆಯನ್ನಾಗಿ ಮಾಡಿಕೊಂಡಿರುವುದು ಸಂತೋಷದ ವಿಷಯವೇನೋ ಸರಿ. ಆದರೆ ಎಲ್ಲೋ ಒಂದು ಕಡೆ ಬೆಂಗಳೂರು ನನಗೆ ಮನೆಯಂತೆ ಭಾಸವಾಗುವುದನ್ನು ನಿಲ್ಲಿಸಿದೆ. ನನ್ನ ಆಫೀಸಿನ ತಂಡದಲ್ಲಿ ತಾನೊಬ್ಬನೇ ದಕ್ಷಿಣ ಭಾರತೀಯನಾಗಿದ್ದೇನೆ. ನಮ್ಮ ಆಫೀಸಿನಲ್ಲಿ 400 ಜನರಿದ್ದಾರೆ. ಈ ಜನರಲ್ಲಿ ಒಬ್ಬ ಬೆಂಗಳೂರಿನವರನ್ನು ಹುಡುಕುವುದು ಕಷ್ಟವಾಗಿದೆ. ತನ್ನ ಸುತ್ತಮುತ್ತಲಿನ ಜನರೊಂದಿಗೆ ಸಂಭಾಷಣೆಗಳು ಹಿಂದಿಯಲ್ಲಿ ಮಾತ್ರ. ಹೀಗಾಗಿ ನಮ್ಮ ಸಂಸ್ಕೃತಿ ಮರೆಯಾಗುತ್ತಿದ್ದು, ವಿಚಿತ್ರ ಹಾಗೂ ಖಾಲಿ ಭಾವನೆ ಉಂಟಾಗುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಬೆಂಗಳೂರಿಗರೇ, ಎಲ್ಲಿ ಗುಂಡಿ ಕಂಡರೂ ಗುಂಡಿ ಗಮನ ಆ್ಯಪ್ ಬಳಸಿ ದುರಸ್ತಿಗೆ ಕೈಜೋಡಿಸಿ
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರೊಬ್ಬರು, ನಿಮ್ಮಂತೆ ನನಗೂ ಅನಿಸಿದೆ. ಆದರೆ ನಮ್ಮ ಊರಿಗೆ ನಾವು ಹೊರಗಿನವ ಎಂದೆನಿಸುವುದು ನಿಜಕ್ಕೂ ಬೇಸರದ ಸಂಗತಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ಬೆಂಗಳೂರಿನಲ್ಲಿ ಕನ್ನಡ ಬಿಟ್ಟು ಬೇರೆ ಭಾಷೆಗಳನ್ನು ಮಾತನಾಡುವವರೇ ಹೆಚ್ಚು, ಆದರೆ ಎಲ್ಲವನ್ನು ಅರ್ಥ.ಮಾಡಿಕೊಂಡು ಹೊಂದಾಣಿಕೆ ಮಾಡಿಕೊಂಡು ಬದುಕುವುದು ಅನಿವಾರ್ಯ ಎಂದು ಕಾಮೆಂಟ್ ಮಾಡಿದ್ದಾರೆ. ನಾನು ಪದವಿ ಹಾಗೂ ಕೆಲಸ ಮಾಡುವಾಗ ಈ ಅನುಭವವಾಗಿತ್ತು. ಆದರೆ ನಾನೀಗ ವಿದೇಶದಲ್ಲಿದ್ದೇನೆ. ಇಲ್ಲೂ ಅದೇ ರೀತಿಯ ಅನುಭವವಾಗುತ್ತಿದೆ ಎಂದು ವಾಸ್ತವ ಸ್ಥಿತಿಯ ಬಗ್ಗೆ ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿ ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








