ಬೆಂಗಳೂರಿಗರೇ, ಎಲ್ಲಿ ಗುಂಡಿ ಕಂಡರೂ ಗುಂಡಿ ಗಮನ ಆ್ಯಪ್ ಬಳಸಿ ದುರಸ್ತಿಗೆ ಕೈಜೋಡಿಸಿ
ಬೆಂಗಳೂರಿನ ವಾಹನ ಸವಾರರ ಪಾಡು ಹೇಳತೀರದು. ಎಲ್ಲಿ ನೋಡಿದರಲ್ಲಿ ರಸ್ತೆಯ ತುಂಬಾ ಗುಂಡಿಗಳದ್ದೇ ರಾಶಿ. ಮಳೆಬಂದರಂತೂ ಕೇಳುವುದೇ ಬೇಡ. ಆದರೆ ಇದೀಗ 'ಗುಂಡಿ ಗಮನ' ಆ್ಯಪ್ ಮೂಲಕ ಗುಂಡಿಗಳ ಮೇಲ್ವಿಚಾರಣೆ ಸೇರಿದಂತೆ ದುರಸ್ತಿಗಳನ್ನು ತ್ವರಿತಗೊಳಿಸಬಹುದು, ಈ ಬಗ್ಗೆ ದೂರನ್ನು ಸ್ವತಃ ನಾಗರಿಕರೇ ಬಿಬಿಪಿಎಂಗೆ ನೀಡಬಹುದಾಗಿದ್ದು, ಬಗ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ. ಈ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ.

ಬೆಂಗಳೂರು, ಆಗಸ್ಟ್ 28: ಅದೆಷ್ಟೋ ಜನರ ಬದುಕಿಗೆ ಆಸರೆಯಾಗಿದ್ದು, ಅಭಿವೃದ್ಧಿಯತ್ತ ಸಾಗುತ್ತಿರುವ ನಗರವೇ ಈ ಬೆಂಗಳೂರು (Bengaluru). ಆದರೆ ಇಲ್ಲಿನ ರಸ್ತೆಗಳ ತುಂಬೆಲ್ಲಾ ಗುಂಡಿಗಳದ್ದೇ ರಾಶಿ. ಮಳೆಗಾಲ ಶುರುವಾಗುತ್ತಿದ್ದಂತೆ ವಾಹನ ಸವಾರರು ಈ ರಸ್ತೆಗಳಲ್ಲಿ ತಮ್ಮ ಪ್ರಾಣಪಣಕ್ಕಿಟ್ಟು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಬೆಂಗಳೂರಿನ ರಸ್ತೆಗಳ ಗುಂಡಿ ಮುಚ್ಚುವ ಕಾಮಗಾರಿ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (Deputy Chief Minister DK Shivakumar) ಆಗಸ್ಟ್ 25 ರ ರಾತ್ರಿ ಬೆಂಗಳೂರಿನ ಈಶಾನ್ಯ ಭಾಗದಲ್ಲಿರುವ ಬಾಗಲೂರು ಬಳಿ ನಡೆಯುತ್ತಿರುವ ಗುಂಡಿ ಮುಚ್ಚುವ ಕಾರ್ಯವನ್ನು ಪರಿಶೀಲಿಸಿದ್ದು ಈ ವೇಳೆ ರಸ್ತೆ ಗುಂಡಿ ಗಮನ ಆಪ್ ಬಗ್ಗೆ ಮಾಹಿತಿ ನೀಡಿದ್ದಾರೆ.
ಗುಂಡಿ ಗಮನ ಆ್ಯಪ್ ಬಳಸಿ
ಇದೇ ವೇಳೆ ಮಾತನಾಡಿದ ಡಿ.ಕೆ. ಶಿವಕುಮಾರ್ ನಾಗರಿಕ ಪ್ರಾಧಿಕಾರವು ‘ಗುಂಡಿ ಗಮನ’ ಎಂಬ ಸಾರ್ವಜನಿಕ ಕೇಂದ್ರಿತ ಅಪ್ಲಿಕೇಶನ್ ಮೂಲಕ ಗುಂಡಿಗಳ ಮೇಲ್ವಿಚಾರಣೆ ಹಾಗೂ ದುರಸ್ತಿಯನ್ನು ತ್ವರಿತಗೊಳಿಸಲು ಹೊಸ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಾಗರಿಕರು ಈ ಆ್ಯಪ್ ಮೂಲಕ ದೂರುಗಳನ್ನು ಸಲ್ಲಿಸಬಹುದು. ಪೊಲೀಸರು ತಮ್ಮ ವ್ಯಾಪ್ತಿಯಲ್ಲಿರುವ ಗುಂಡಿಗಳ ವರದಿಗಳನ್ನು ಸಲ್ಲಿಸುವಂತೆ ನಿರ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಗುಂಡಿ ಮುಚ್ಚುವ ಕಾರ್ಯ
ಈಗಾಗಲೇ ಈ ಬೆಂಗಳೂರಿನಾದ್ಯಂತ 5,000 ಕ್ಕೂ ಹೆಚ್ಚು ಗುಂಡಿಗಳನ್ನು ಗುರುತಿಸಲಾಗಿದ್ದು, ಇವುಗಳಲ್ಲಿ 4,400 ಗುಂಡಿಗಳನ್ನು ಮುಚ್ಚಲು ಹೆಚ್ಚು ಒತ್ತು ನೀಡಲಾಗಿದೆ. ಕಳೆದ ನಾಲ್ಕು ದಿನಗಳಲ್ಲಿ 2,200 ಗುಂಡಿಗಳನ್ನು ಮುಚ್ಚಲಾಗಿದೆ. ಈ ದುರಸ್ತಿ ಕಾರ್ಯದ ಜೊತೆಗೆ, ನಾಗರಿಕ ಸಂಸ್ಥೆಯು ಸ್ಕೈವಾಕ್‌ಗಳನ್ನು ಸ್ವಚ್ಛಗೊಳಿಸುವುದು, ಸ್ವಚ್ಛತೆಯನ್ನು ಸುಧಾರಿಸಲು ಉಪಕ್ರಮಗಳನ್ನು ಕೈಗೊಂಡಿದೆ. ಈ ರಸ್ತೆ ಗುಂಡಿಗಳನ್ನು ಮುಚ್ಚಿದರೆ ಸಾಲದು, ಗುಣಮಟ್ಟವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಈ ಹಿನ್ನಲೆ ಪ್ರಸ್ತುತ, ಹಾಟ್ ಮಿಕ್ಸ್, ಕೋಲ್ಡ್ ಮಿಕ್ಸ್ ಮತ್ತು ಇಕೋ-ಫಿಕ್ಸ್ ಸೇರಿದಂತೆ ಮೂರು ವಿಧಾನಗಳನ್ನು ಬಳಸಿಕೊಂಡು ಗುಂಡಿಗಳನ್ನು ದುರಸ್ತಿ ಮಾಡಲಾಗುತ್ತಿದೆ ಎಂದಿದ್ದಾರೆ.
ಕಾಂಕ್ರೀಟ್ ರಸ್ತೆಗಳಿಗೆ ಹೆಚ್ಚು ಒತ್ತು
ರಸ್ತೆ ನಿರ್ಮಾಣದ ಕಳಪೆ ಗುಣಮಟ್ಟದ ಕುರಿತು ಮಾತನಾಡಿ, ಭಾರೀ ಸಂಚಾರ, ಮಳೆಗಾಲ ಸೇರಿದಂತೆ ಇತರ ಕಾರಣಗಳಿಂದ ರಸ್ತೆ ಬಾಳಿಕೆಯ ಮೇಲೆ ಪರಿಣಾಮ ಬೀರುತ್ತವೆ. ಅದಕ್ಕಾಗಿಯೇ ನಾವು ಕ್ರಮೇಣ ಕಾಂಕ್ರೀಟ್ ರಸ್ತೆಗಳ (ವೈಟ್ ಟಾಪಿಂಗ್) ಕಡೆಗೆ ಸಾಗುತ್ತಿದ್ದೇವೆ. ಅದು 30 ವರ್ಷಗಳವರೆಗೆ ಬಾಳಿಕೆ ಬರುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Video: ಬೆಂಗಳೂರಿನ ದೊಮ್ಮಲೂರು-ಇಂದಿರಾನಗರ ಪಾದಚಾರಿ ಮಾರ್ಗ ಹೇಗಿತ್ತು? ಹೇಗಾಯಿತು ನೋಡಿ, ಇದು ವಿದೇಶಿಗನ ಕೈಚಳಕ
ಏನಿದು ಗುಂಡಿ ಗಮನ ಆ್ಯಪ್?
ಬೆಂಗಳೂರಿನ ನಿವಾಸಿಗಳು ತಮ್ಮ ಬಡಾವಣೆ, ದಿನನಿತ್ಯ ಓಡಾಡುವ ರಸ್ತೆಗಳಲ್ಲಿ ಗುಂಡಿ ಕಾಣಿಸಿಕೊಂಡರೆ ಈ ಆ್ಯಪ್ ಮೂಲಕ ದೂರು ನೀಡಿದರೆ ಬಿಬಿಪಿಎಂ ಅದನ್ನು ದುರಸ್ತಿ ಮಾಡಲು ತಕ್ಷಣವೇ ಕ್ರಮ ಕೈಗೊಳ್ಳುತ್ತವೆ. ರಸ್ತೆ ಗುಂಡಿಗಳನ್ನು ಮುಚ್ಚಲು ಮಾಹಿತಿ ನೀಡುವ ಈ ಗುಂಡಿ ಗಮನ ಅಪ್ಲಿಕೇಶನ್ ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಯಲ್ಲೂ ಲಭ್ಯವಿದ್ದು, ಇದನ್ನು ಡೌನ್ಲೋಡ್ ಮಾಡಿಕೊಂಡು ಗುಂಡಿಗಳನ್ನು ಕಂಡರೆ ಈ ಆ್ಯಪ್ ಮೂಲಕ ಮಾಹಿತಿ ನೀಡಿ ಗುಂಡು ಮುಚ್ಚುವ ಕಾರ್ಯಕ್ಕೆ ನಾಗರಿಕರು ಕೈಜೋಡಿಸಬಹುದು.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








