ನಮ್ಮ ಬೆಂಗಳೂರಿನ ಟ್ರಾಫಿಕ್ ಜಾಮ್ ಸಮಸ್ಯೆ ಹೊಸದೇನಲ್ಲ ಬಿಡಿ. ನಗರದ ಒಂದಲ್ಲಾ ಒಂದು ಕಡೆ ಪ್ರತಿನಿತ್ಯ ಟ್ರಾಫಿಕ್ ಜಾಮ್ ಆಗುತ್ತಲೇ ಇರುತ್ತದೆ. ಇನ್ನೂ ವಾಹನ ಸವಾರರು, ಕೆಲಸಕ್ಕೆ ಹೋಗೋರು ಗಂಟೆಗಟ್ಟಲೆ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಹೆಣಗಾಡುತ್ತಿರುತ್ತಾರೆ. ಇದೀಗ ಬಸ್ಸು, ಬೈಕು, ಕಾರು ಇತರೆ ವಾಹನಗಳ ಜೊತೆಗೆ ರೈಲಿಗೂ ಕೂಡಾ ನಮ್ಮ ಬೆಂಗಳೂರಿನ ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿ ಹಾಕಿಕೊಳ್ಳುವಂತಹ ಪರಿಸ್ಥಿತಿ ಬಂದಿದೆ. ರೈಲೊಂದು ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿಹಾಕಿಕೊಂಡಿರುವಂತಹ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಈ ದೃಶ್ಯ ಕಂಡು ನಮ್ ಬೆಂಗ್ಳೂರು ಅಂದ್ರೆ ಸುಮ್ನೇನಾ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಈ ಘಟನೆ ಬೆಂಗಳೂರಿನ ಮಾರತಹಳ್ಳಿ ಸಮೀಪದ ಮುನ್ನೆಕೊಲ್ಲಾಲ ರೈಲ್ವೆ ಕ್ರಾಸಿಂಗ್ ಬಳಿ ನಡೆದಿದ್ದು, ಟ್ರಾಫಿಕ್ ಜಾಮ್‌ನಿಂದ ರೈಲ್ವೆ ಕ್ರಾಸಿಂಗ್ ಬಳಿಯೂ ಸಾಲಾಗಿ ವಾಹನಗಳು ನಿಂತಿದ್ದರ ಪರಿಣಾಮ ರೈಲ್ವೆ ಕ್ರಾಸಿಂಗ್ ದಾಟಲು ಸಾಧ್ಯವಾಗದೇ ರೈಲು ಕೂಡಾ ಟ್ರಾಫಿಕ್ ಜಾಮ್‌ನಲ್ಲಿಯೇ ಸಿಲುಕಿದೆ. ಈ ಕುರಿತ ವಿಡಿಯೋವೊಂದನ್ನು ಸುಧೀರ್ ಚಕ್ರವರ್ತಿ (sudhirchakravarthi4142) ಎಂಬವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, “ನಾನು ಅಥವಾ ನೀವು ಮಾತ್ರವಲ್ಲ ರೈಲಿಗೂ ಕೂಡಾ ಬೆಂಗಳೂರು ಟ್ರಾಫಿಕ್‌ನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಾರತಹಳ್ಳಿ ಸಮೀಪದ ಮುನ್ನೆಕೊಲ್ಲಾಲ ರೈಲ್ವೆ ಕ್ರಾಸಿಂಗ್ ಬಳಿ ವಾಹನ ದಟ್ಟಣೆಯಿಂದದ ಟ್ರಾಫಿಕ್ ಜಾಮ್ ಆಗಿದ್ದು, ಈ ಟ್ರಾಫಿಕ್ ಜಾಮ್‌ನಲ್ಲಿ ಕ್ರಾಸಿಂಗ್ ದಾಟಲಾಗದೆ ಒಂದು ರೈಲು ಕೂಡಾ ಸಿಕ್ಕಿ ಹಾಕಿಕೊಂಡಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಮನೆ ಮಕ್ಕಳನ್ನು ರಕ್ಷಿಸಲು ಕಾಳಿಂಗ ಸರ್ಪವನ್ನೇ ಕಚ್ಚಿ ಕೊಂದ ಪಿಟ್ ಬುಲ್
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1.5 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಸ್ಟೇಷನ್ ಮಾಸ್ಟರ್ ರೈಲು ಏಕೆ ತಡವಾಗಿ ಬಂತು ಎಂದು ಕೇಳಿದ್ರೆ ಪಾಪ ಲೋಕೋ ಪೈಲೆಟ್ ಟ್ರಾಫಿಕ್ ಸಮಸ್ಯೆ ಅಂತ ಅದು ಹೆಂಗ್ ಹೇಳ್ತಾರೋʼ ಎಂಬ ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಪ್ರತಿ ಸಾರಿ ರೈಲು ದಾಟುವಾಗ ನಾವು ಕಾಯ್ತೇವೆ. ಈ ಸಲ ರೈಲು ನಾವು ದಾಟುವವರೆಗೆ ಕಾಯಲಿʼ ಎಂದು ತಮಾಷೆ ಮಾಡಿದ್ದಾರೆ. ಇನ್ನೂ ಅನೇಕರು ನಮ್ಮ ಬೆಂಗ್ಳೂರು ಅಂದ್ರೆ ಸುಮ್ನೇನಾ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:38 pm, Wed, 25 September 24