
ಟ್ರಿಪ್ ಎಂದರೆ ಯಾರಿಗೇ ತಾನೇ ಇಷ್ಟ ಹೇಳಿ, ಕೆಲವರು ಸೋಲೋ ಟ್ರಿಪ್ (Trip) ಪ್ಲ್ಯಾನ್ ಮಾಡಿಕೊಂಡ್ರೆ, ಇನ್ನು ಕೆಲವರು ಫ್ಯಾಮಿಲಿ ಸ್ನೇಹಿತರ ಜೊತೆಗೆ ಸುತ್ತಾಡಲು ಹೋಗುತ್ತಾರೆ. ಆದರೆ ಇಲ್ಲೊಬ್ಬ ಯುವಕನು ತನ್ನ ಪ್ರೀತಿಯ ಶ್ವಾನದೊಂದಿಗೆ ಸೈಕಲ್‌ನಲ್ಲಿ ಭಾರತವನ್ನು (India) ಸುತ್ತುವ ಮೂಲಕ ವಿವಿಧ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾನೆ. ಈ ಬಿಹಾರದ ಯುವಕನ ಹೆಸರು ಸೋನು (Sonu). ಇಲ್ಲಿಯವರೆಗೆ ಸರಿಸುಮಾರು 12,000 ಕಿಮೀಗೂ ಹೆಚ್ಚು ಸೈಕಲ್ ತುಳಿದುಕೊಂಡೇ ಸುತ್ತಾಟ ನಡೆಸಿದ್ದಾನೆ. ತನ್ನ ಚಾರ್ಲಿಯೊಂದಿಗೆ ಈತನ ಸುತ್ತಾಟದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.
safarmeinrahi ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ಈ ಯುವಕನನ್ನು ಮಾತನಾಡಿಸುವ ಪ್ರಯತ್ನ ಮಾಡಿದ್ದು ಈ ವೇಳೆಯಲ್ಲಿ ತನ್ನ ಚಾರ್ಲಿಯೊಂದಿಗೆ ಸೈಕಲ್‌ನಲ್ಲಿ ಭಾರತ ಸುತ್ತುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಈ ವಿಡಿಯೋದ ಪ್ರಾರಂಭದಲ್ಲಿ ನನ್ನ ಹೆಸರು ಸೋನು, ನಾನು ಬಿಹಾರದವನು, ನಾನು ಇಲ್ಲಿಯವರೆಗೆ 12000 ಕಿಮೀಗೂ ಹೆಚ್ಚು ಸೈಕಲ್‌ನಲ್ಲಿಯೇ ಸವಾರಿ ಮಾಡಿದ್ದೇನೆ. ಕಳೆದ 11 ತಿಂಗಳಿನಿಂದ ಮನೆಯಿಂದ ಸಂಪೂರ್ಣವಾಗಿ ದೂರವಿದ್ದೇನೆ. ನನ್ನ ಈ ಪ್ರಯಾಣದಲ್ಲಿ ಜೊತೆಯಾಗಿರುವುದು ನನ್ನ ಚಾರ್ಲಿ. ಅವನು ಎಂದಿಗೂ ನನ್ನನ್ನು ಬಿಡುವುದಿಲ್ಲ. ನಾನು ಸೈಕಲ್‌ನಲ್ಲಿ ಹೊರಟು ನಿಂತಾಗ ನನ್ನನ್ನು ಹಿಂಬಾಲಿಸುತ್ತಾನೆ ಎಂದಿದ್ದಾನೆ.
ಸೋನು ಈ ಚಾರ್ಲಿಯನ್ನು ಮೊದಲು ಭೇಟಿಯಾದದ್ದು ಉತ್ತರ ಪ್ರದೇಶದಲ್ಲಿಯಂತೆ. ಈ ಶ್ವಾನವು ಅಪಘಾತದಲ್ಲಿ ಗಾಯಗೊಂಡಿತ್ತು. ಆ ವೇಳೆಯಲ್ಲಿ ಈತನೇ ಶ್ವಾನಕ್ಕೆ ಚಿಕಿತ್ಸೆ ಕೊಡಿಸಿದ್ದು, ಇವರಿಬ್ಬರ ಸ್ನೇಹವು ಅಲ್ಲಿಂದ ಶುರುವಾಯಿತು. ಇಲ್ಲಿಯವರೆಗೆ ಇಬ್ಬರೂ ಜೊತೆಯಾಗಿ ರಾಮೇಶ್ವರಂ, ಕೇದಾರನಾಥ ಹಾಗೂ ಬದರಿನಾಥಕ್ಕೆ ಭೇಟಿ ನೀಡಿದ್ದಾರಂತೆ. ಇದೀಗ ಇಬ್ಬರೂ ಜೊತೆಯಾಗಿ ಪ್ರಯಾಗ್ ರಾಜ್ ಕಡೆಗೆ ಪ್ರಯಾಣ ಬೆಳೆಸಿದ್ದು ಈ ಬಗ್ಗೆ ಯುವಕನು ಹೇಳಿರುವುದನ್ನು ನೀವಿಲ್ಲಿ ನೋಡಬಹುದು.
ಈ ವಿಡಿಯೋ ಈವರೆಗೆ ಐದು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಬಳಕೆದಾರರೊಬ್ಬರು ದೇವರು ನಿಮ್ಮಿಬ್ಬರನ್ನು ಆಶೀರ್ವಾದಿಸಲಿ ಎಂದಿದ್ದಾರೆ. ಇನ್ನೊಬ್ಬರು, ಈ ಜಗತ್ತಿನಲ್ಲಿ ಈ ಯುವಕನಂತಹವರು ಇದ್ದರೆ ಯಾವುದೇ ಪ್ರಾಣಿಗಳು ಒಂಟಿಯಾಗಿರುವುದಿಲ್ಲ ಎಂದಿದ್ದಾರೆ. ಮತ್ತೊಬ್ಬರು, ನಿಜ ಜೀವನದ ಚಾರ್ಲಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ನಿಷ್ಕಲ್ಮಶ ಪ್ರೀತಿಯನ್ನು ಈ ಮುಗ್ಧ ಪ್ರಾಣಿಗಳಿಂದ ನಿರೀಕ್ಷಿಸಲು ಮಾತ್ರ ಸಾಧ್ಯ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ