Viral : ಟ್ರಾಫಿಕ್ ಜಾಮ್, ವಾತಾವರಣ, ಇಲ್ಲಿನ ಜೀವನಶೈಲಿಗೆ ಹೊಂದಿಕೊಳ್ಳೋದೇ ಕಷ್ಟ : ಭಾರತೀಯನ ಪರಿಸ್ಥಿತಿ ನೋಡಿ
ಈಗಿನ ಕಾಲದಲ್ಲಿ ಓದು ಮುಗಿಸಿ ಒಂದೊಳ್ಳೆ ಉದ್ಯೋಗಕ್ಕೆಂದು ವಿದೇಶಕ್ಕೆ ತೆರಳುವವರೇ ಹೆಚ್ಚು. ಹೀಗಾಗಿ ಕೆಲವರಿಗೆ ಅಲ್ಲಿನ ಜೀವನಶೈಲಿಗೆ ಹೊಂದಿಕೊಳ್ಳಲು ಕಷ್ಟವಾಗುತ್ತದೆ. ಆದರೆ ವಿದೇಶದಲ್ಲಿ ವಾಸವಿದ್ದ ಭಾರತೀಯರೊಬ್ಬರು ಇದೀಗ ಇಲ್ಲಿಗೆ ಬಂದು ನೆಲೆಸಿದ್ದಾರೆ. ಈ ವ್ಯಕ್ತಿಗೆ ಭಾರತದ ಜೀವನಶೈಲಿಗೆ ಹೊಂದಿಕೊಳ್ಳುವುದಕ್ಕೆ ಕಷ್ಟವಾಗುತ್ತಿದೆಯಂತೆ. ಈ ಕುರಿತಾದ ಪೋಸ್ಟ್‌ವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ತಮಗೆ ಯಾಕೆ ಇಲ್ಲಿ ಹೊಂದಿಕೊಳ್ಳಲು ಆಗುತ್ತಿಲ್ಲ ಎನ್ನುವ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ.

ಇತ್ತೀಚೆಗಿನ ದಿನಗಳಲ್ಲಿ ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ (education and job) ವಿದೇಶಕ್ಕೆ ಹೆಚ್ಚಿನವರು ಹೋಗುತ್ತಾರೆ. ಹೀಗೆ ವಿದೇಶಕ್ಕೆ ಹಾರಿದ ಅದೆಷ್ಟೋ ಜನರು ಅಲ್ಲೇ ಸೆಟ್ಲ್ ಆಗುತ್ತಾರೆ ಕೂಡ. ಆದರೆ ಭಾರತಕ್ಕೆ ಬರುವ ಯೋಚನೆ ಮಾಡುವುದೇ ಕಡಿಮೆ. ಒಂದೋ ಎರಡು ವರ್ಷಕ್ಕೊಮ್ಮೆ ಇಲ್ಲಿಗೆ ಬಂದು ಹೆತ್ತವರು ಕುಟುಂಬದವರೊಂದಿಗೆ ಸಮಯ ಕಳೆಯುತ್ತಾರೆ. ವಿದೇಶದಲ್ಲಿ ನೆಲೆಸಿರುವ ವ್ಯಕ್ತಿಗಳು ತಾಯ್ನಾಡಿಗೆ ಬಂದ ವೇಳೆಯಲ್ಲಿ ಇಲ್ಲಿನ ವಾತಾವರಣ ಹಾಗೂ ಜೀವನಶೈಲಿಗೆ (lifestyle) ಹೊಂದಿಕೊಳ್ಳಲು ಕಷ್ಟ ಪಡುವುದಿದೆ. ಇದೀಗ ಇಂತಹದ್ದೆ ಪರಿಸ್ಥಿತಿಯನ್ನು ಕೆನಡಾದಲ್ಲಿ ನೆಲೆಸಿದ್ದ ಭಾರತೀಯರೊಬ್ಬರು ಅನುಭವಿಸುತ್ತಿದ್ದಾರೆ. ವಿದೇಶದಲ್ಲಿ ವಾಸವಿದ್ದ ದೆಹಲಿಯ ವ್ಯಕ್ತಿಯೊಬ್ಬರು ಕಳೆದ ವರ್ಷವಷ್ಟೇ ಭಾರತಕ್ಕೆ ವಾಪಾಸ್ಸಾಗಿದ್ದಾರೆ. ಆರು ವರ್ಷಗಳ ಕಾಲ ಕೆನಡಾದಲ್ಲಿದ್ದ (Canada) 31 ವರ್ಷದ ಈ ವ್ಯಕ್ತಿಗೆ ಇದೀಗ ಭಾರತದಲ್ಲಿ ಇರಲು ಕಷ್ಟವಾಗುತ್ತಿದೆ ಎನ್ನುವುದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವ್ಯಕ್ತಿ ಮಾಡಿದ ಪೋಸ್ಟ್ ವೈರಲ್ ಆಗುತ್ತಿದ್ದು ಬಳಕೆದಾರರು ಅವರ ಮಾತನ್ನು ಒಪ್ಪಿಕೊಂಡಿದ್ದಾರೆ.
ವೈಯುಕ್ತಿಕ ಕಾರಣಗಳಿಂದ ವಿದೇಶದಲ್ಲಿ ಭಾರತಕ್ಕೆ ಮರಳಿದ ಈ ವ್ಯಕ್ತಿಯೂ ಇದೀಗ ತನ್ನ ಹೆತ್ತವರೊಂದಿಗೆ ಡೆಹ್ರಾಡೂನ್ ವಾಸವಿದ್ದಾರಂತೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದು, ಭಾರತದಲ್ಲಿ ಬದುಕಲು ನನಗೆ ಕಷ್ಟ ಆಗುತ್ತಿದೆ, ಸಲಹೆ ನೀಡುವಿರಾ ಎಂದು ಕೇಳಿದ್ದಾರೆ. ರೆಡ್ಡಿಟ್ ಖಾತೆಯಲ್ಲಿ ಶೇರ್ ಮಾಡಲಾದ ಪೋಸ್ಟ್‌ನಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದು, ನನಗೆ 31 ವರ್ಷ ವಯಸ್ಸು, ಮೂಲತಃ ದೆಹಲಿಯವನು. ಕೆಲಸ ಹಾಗೂ ಓದಿಗಾಗಿ ಸರಿಸುಮಾರು ಆರು ವರ್ಷಗಳ ಕಾಲ ಕೆನಡಾದಲ್ಲಿ ಇದ್ದೆ. ಕಳೆದ ವರ್ಷ, ಕೆಲವು ವೈಯಕ್ತಿಕ ಕಾರಣಗಳಿಂದಾಗಿ ನಾನು ಕುಟುಂಬಕ್ಕೆ ಹತ್ತಿರವಾಗಲು ಭಾರತಕ್ಕೆ ಮರಳಿದೆ. ನನ್ನ ಕುಟುಂಬಕ್ಕೆ ಮತ್ತೆ ಹತ್ತಿರವಾಗುವುದು, ಇಲ್ಲಿನ ಆಹಾರವನ್ನು ಆನಂದಿಸುವುದು ನನಗೆ ನಿಜವಾಗಿಯೂ ಇಷ್ಟವಾದರೂ, ಆದರೆ ಇಲ್ಲಿ ಹೊಂದಿಕೊಳ್ಳಲು ಆಗುತ್ತಿಲ್ಲ ಎಂದಿದ್ದಾರೆ.
ನಾನು ಎರಡು ಪ್ರಪಂಚಗಳ ನಡುವೆ ಸಿಲುಕಿಕೊಂಡಿದ್ದೇನೆ ಎಂದೆನಿಸುತ್ತದೆ. ಒಂದು ಪರಿಚಿತವಾಗಿದೆ, ಆದರೆ ನಿರಾಶಾದಾಯಕವಾಗಿದೆ. ನಾನು ಈ ಹಿಂದೆ ಕೆನಡಾದಲ್ಲಿ ವಾಸವಿದ್ದಾಗ ನನಗೆ ಕೆಲವೊಮ್ಮೆ ಒಂಟಿತನ ಕಾಡಿತ್ತು. ಆದರೆ ಅಲ್ಲಿನ ವ್ಯವಸ್ಥೆ, ಸವಲತ್ತು ಹಾಗೂ ಅವಕಾಶಗಳು ನನಗೆ ಬದುಕಲು ಸಾಕಷ್ಟು ಸ್ವಾತಂತ್ರ್ಯ ನೀಡಿತ್ತು. ಭಾರತದಲ್ಲಿ ನನಗೆ ಯಾರೊಂದಿಗೂ ಬೆರೆಯಲು ಆಗುತ್ತಿಲ್ಲ. ನಾನು ಅಲ್ಲೇ ನೆಲೆಸಿದ್ದ ಕಾರಣ, ನನ್ನ ಹಳೆಯ ಸ್ನೇಹಿತರು ಅಲ್ಲೇ ಇದ್ದಾರೆ. ಹೀಗಾಗಿ ನನ್ನ ಹಳೆಯ ಸ್ನೇಹಿತರ ಜೊತೆಗೆ ಯಾವುದೇ ಒಡನಾಟ ಅಷ್ಟಾಗಿ ಇಲ್ಲ. ಇಲ್ಲಿ ಹೊಸ ಸ್ನೇಹಿತರನ್ನು ಮಾಡಿಕೊಳ್ಳುವುದು ಅಷ್ಟು ಸುಲಭವಿಲ್ಲ. ಅದಲ್ಲದೇ ಇಲ್ಲಿ ನನ್ನ ಓದಿಗೆ ತಕ್ಕಂತಹ ಉದ್ಯೋಗ ಹುಡುಕುವುದಂತೂ ದೂರದ ಮಾತು. ನನಗೆ ಸೂಕ್ತವಾದ ಕೆಲಸ ಸಿಗುತ್ತಿಲ್ಲ. ಕೆನಡಾದಲ್ಲಿ ಹಲವು ಅವಕಾಶವಿತ್ತು, ಆದರೆ ಇಲ್ಲಿ ಕೆಲಸವೇ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಪಾಕಿಸ್ತಾನದ ಬೀದಿಗಳಲ್ಲಿ ಭಾರತೀಯ ಕ್ರಿಕೆಟ್ ತಂಡದ ಜೆರ್ಸಿ ಹಾಕಿಕೊಂಡು ಅಡ್ಡಾಡಿದ ಬ್ರಿಟಿಷ್ ಪ್ರಜೆ
ಇಲ್ಲಿನ ವಾತಾವರಣ ಹಾಗೂ ಜೀವನಶೈಲಿಯೂ ಅಷ್ಟೇನು ಇಷ್ಟವಾಗುತ್ತಿಲ್ಲ. ಕೆನಡಾದಲ್ಲಿ ವ್ಯಾಯಾಮ ಮಾಡಲು ಹಾಗೂ ಆರೋಗ್ಯ ಕಾಪಾಡಲು ಒಳ್ಳೆಯ ವಾತಾವರಣವಿತ್ತು. ಆದರೆ ಇಲ್ಲಿ ಆ ರೀತಿಯ ಪರಿಸ್ಥಿತಿಯಿಲ್ಲ. ಎಲ್ಲೆಂದರಲ್ಲಿ ಕಸ, ಟ್ರಾಫಿಕ್ ಜಾಮ್ ಸೇರಿದಂತೆ ಇತರ ಸಮಸ್ಯೆಗಳು ನನ್ನ ತಾಳ್ಮೆಯ ಕಟ್ಟೆ ಒಡೆಯುವಂತೆ ಮಾಡಿದೆ. ಜೀವನೋತ್ಸಾಹದಿಂದ ಬದುಕಲು ನನ್ನಿಂದ ಆಗುತ್ತಿಲ್ಲ. ಇಲ್ಲಿ ನಾಗರಿಕ ಪ್ರಜ್ಞೆಯ ಕೊರತೆ ಹಾಗೂ ಇಲ್ಲಿನ ಗೊಂದಲಮಯ ವಾತಾವರಣವನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಬರೆದುಕೊಂಡಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಈ ವ್ಯಕ್ತಿಯ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸಮಾಧಾನ ಹೇಳಿದ್ದಾರೆ. ಬಳಕೆದಾರರೊಬ್ಬರು, ನಿಮ್ಮ ಹಾಗೂ ನನ್ನ ಪರಿಸ್ಥಿತಿಯೂ ಭಿನ್ನವಾಗಿಲ್ಲ, ಸಮಯ ಸಂದರ್ಭ ಎಲ್ಲವನ್ನು ಹೊಂದಿಕೊಳ್ಳುವಂತೆ ಮಾಡುತ್ತದೆ, ಸಮಯ ತೆಗೆದುಕೊಂಡು ಎಲ್ಲದಕ್ಕೂ ಹೊಂದಿಕೊಳ್ಳಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಈಗಿನ ಕಾಲದಲ್ಲಿ ಹೊಂದಿಕೆ ಎನ್ನುವುದು ಕಷ್ಟ, ಹಾಗಾಗಿಯೇ ಈ ರೀತಿ ಗೊಂದಲಗಳು ಹೆಚ್ಚು ಎಂದಿದ್ದಾರೆ. ಮತ್ತೊಬ್ಬರು, ನೀವು ಕೆನಡಾಕ್ಕೆ ಹೋದಾಗ ಅಲ್ಲಿ ಹೇಗೆ ಹೊಂದಿಕೊಂಡಿದ್ದೀರಿ, ಅದೇ ರೀತಿ ಇಲ್ಲಿನ ವಾತಾವರಣಕ್ಕೂ ನೀವು ಹೊಂದಿಕೊಳ್ಳುತ್ತೀರಿ. ಅದು ನಿಮ್ಮಿಂದ ಸಾಧ್ಯ ಎಂದು ಕಾಮೆಂಟ್‌ನಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:39 pm, Sun, 29 June 25