Viral Video : ಕುಟುಂಬಕ್ಕೆ ಹೊಸ ಸದಸ್ಯರ ಆಗಮನವಾಗುತ್ತಿದ್ದಂತೆ ಇಡೀ ಮನೆಯ ವಾತಾವರಣವೇ ಸಂಭ್ರಮದಲ್ಲಿ ಮುಳುಗೇಳಲಾರಂಭಿಸುತ್ತದೆ. ಇಲ್ಲಿ ಈ ಪುಟ್ಟಣ್ಣನಿಗೂ ಹೀಗೇ ಆಗಿದೆ. ತಂಗಿ ಹುಟ್ಟುತ್ತಿದ್ದಂತೆ ಏನು ಮಾಡಲಿ ಏನು ಬಿಡಲಿ ಎಂಬಂತೆ ಓಡಾಡತೊಡಗಿದ್ದಾನೆ. ಕೊನೆಗೆ ಕುಕೀಸ್ ಮಾಡಿದರೆ ಹೇಗೆ ಎನ್ನುವ ಐಡಿಯಾ ಹೊಳೆದಿದೆ. ಪ್ರೊಫೆಷನಲ್ ಶೆಫ್ನಂತೆ ಕ್ಯಾಮೆರಾ ಎದುರು ನಿಂತು ಕುಕೀಸ್ ತಯಾರಿಸುವುದೇನು, ಅದನ್ನು ನಿರೂಪಿಸುವ ಗಂಭೀರ ವೈಖರಿಯೇನು ಆಹಾ… ಕೆಲದಿನಗಳ ಹಿಂದೆ ಪೋಸ್ಟ್ ಮಾಡಲಾದ ಈ ವಿಡಿಯೋ ಇದೀಗ ವೈರಲ್ ಆಗಿದೆ. 3.3 ಮಿಲಿಯನ್ ವೀಕ್ಷಕರು ಈ ವಿಡಿಯೋ ನೋಡಿದ್ದಾರೆ. ಸಾಕಷ್ಟು ಜನ ಈ ವಿಡಿಯೋ ಹಂಚಿಕೊಂಡು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತಲೇ ಇದ್ದಾರೆ.
ಕುಕೀಸ್ ತಯಾರಿಸುವಾಗ ಈತ ವಿಧಾನವನ್ನು ನಿಖರತೆಯಿಂದ ನಿರೂಪಿಸುವ ರೀತಿಯು ನೆಟ್ಟಿಗರನ್ನು ಸಿಕ್ಕಾಪಟ್ಟೆ ಅಚ್ಚರಿ ಮತ್ತು ಖುಷಿಗೆ ಕೆಡವಿದೆ. ಕೆಲವರು ತಮಾಷೆಯಾಗಿಯೂ ಪ್ರತಿಕ್ರಿಯಿಸಿದ್ದಾರೆ. ಒಬ್ಬರು ‘ಈ ವಿಡಿಯೋದಿಂದ ನಾನು ಕಲಿತ ಎರಡು ವಿಷಯಗಳೆಂದರೆ, ಯಾವಾಗಲೂ ಬೆಣ್ಣೆಯನ್ನು ಪರೀಕ್ಷಿಸಬೇಕು ಮತ್ತು ಕುಕೀಸ್ನ ಹಿಟ್ಟಿಗೆ ಗುಡ್ನೈಟ್ ಹೇಳಿ ಮುತ್ತು ಕೊಡಬೇಕು!’ ಎಂದಿದ್ದಾರೆ.
‘ನಾಳೆ ನಿನ್ನನ್ನು ನೋಡುತ್ತೇನೆ. ಈಗ ಫ್ರಿಡ್ಜಿನಲ್ಲಿ ಇರು ಎಂದು ಕುಕೀಸ್ನ ಹಿಟ್ಟಿಗೆ ಐಲವ್ಯೂ ಹೇಳಿದಾಗಲೇ ಗ್ಯಾರಂಟಿ ರುಚಿಯಾದ ಕುಕೀಸ್ ತಯಾರಾಗುತ್ತದೆ ಎಂದು ಊಹಿಸಿದೆ. ಎಂಥ ಮುದ್ದಾದ ಮಗು ಇದು. ನಾನಂತೂ ಕಳೆದುಹೋಗಿದ್ದೇನೆ’ ಎಂದಿದ್ದಾರೆ ಮತ್ತೊಬ್ಬರು.
ನಿಮ್ಮ ಮನೆಗೆ ಹೊಸ ಅತಿಥಿಗಳು ಬಂದಾಗ ನೀವೂ ಈ ಪುಟ್ಟಣ್ಣನ ರೆಸಿಪಿ ನೋಡಿ ಕುಕೀಸ್ ಮಾಡುವಿರೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 2:12 pm, Fri, 7 October 22