Viral Video : ಯಾವ ತಾಯಿಗೆ ಖುಷಿಯಾಗುವುದಿಲ್ಲ ತಮ್ಮ ಮಕ್ಕಳ ‘ಮೊದಲು’ಗಳನ್ನು ಹಂಚಿಕೊಳ್ಳಲು? ಅದರಲ್ಲೂ ಆಟಿಸಂಗೆ ಒಳಗಾದ ಮಕ್ಕಳ ಪೋಷಕರಂತೂ, ತಮ್ಮ ಮಕ್ಕಳ ನಿತ್ಯಜೀವನಕ್ಕೆ ಬೇಕಾಗುವಂಥ ಕೌಶಲಗಳನ್ನು ಕಲಿಸಲು ಜೀವನಪೂರ್ತಿ ತಪಸ್ಸು ಗೈಯ್ಯುತ್ತಲೇ ಇರುತ್ತಾರೆ. ವಿದೇಶಗಳಲ್ಲಿ ಇಂಥ ವಿಶೇಷ ಮಕ್ಕಳಿಗಾಗಿ ಸಾಕಷ್ಟು ಸೌಲಭ್ಯಗಳಿವೆ ನಿಜ. ಆದರೆ ಭಾರತದಂಥ ದೇಶಗಳಲ್ಲಿ ಇಂಥ ಮಕ್ಕಳ ಪೋಷಕರ ಬದುಕು ನೋಡಲಾಗದು. ಎಲ್ಲರಂತೆ ತನ್ನ ಮಗುವೂ ಬೆಳೆಯಬೇಕು ಎಂಬ ಹಂಬಲ ಮತ್ತು ಆತಂಕದಲ್ಲಿ ಅವರು ತಮ್ಮ ಸ್ವಂತಸುಖಗಳನ್ನೇ ಮರೆತಿರುತ್ತಾರೆ. ಸತತ ಪ್ರಯತ್ನಗಳ ನಂತರ ಮಗು ಏನಾದರೂ ಹೊಸತನ್ನು ಕಲಿಯಿತೋ ಆ ಭಾವುಕ, ಸಾರ್ಥಕ ಕ್ಷಣಗಳನ್ನು ವರ್ಣಿಸಲು ಸಾಧ್ಯವೇ ಇಲ್ಲ. ಇಲ್ಲಿರುವ ವಿಡಿಯೋ ಇದೇ ವಿಷಯಕ್ಕೆ ಸಾಕ್ಷಿಯಾಗುವಂಥದ್ದು. ಆಟಿಸಂವುಳ್ಳ ಈ ಬಾಲಕ ಮೊದಲ ಸಲ ಕೆಫೆಯಲ್ಲಿ ಆರ್ಡರ್ ಮಾಡಿದ ಕ್ಷಣಗಳನ್ನು ವಿಡಿಯೋ ಮಾಡಿದ್ದಾರೆ ಆತನ ತಾಯಿ.
ತಾಯಿ ಮತ್ತು ಮಗನಿಗೆ ಅತ್ಯಂತ ಹೆಮ್ಮೆ ಮತ್ತು ಖುಷಿ ಕೊಟ್ಟ ಕ್ಷಣ ಇದು. ಏಕೆಂದರೆ, ನಿಮ್ಮ ಮಗ ಎಲ್ಲರಂತೆ ಸರಾಗವಾಗಿ ಮಾತನಾಡಲಾರ. ಇದು ಆನುವಂಶಿಕ ಸಮಸ್ಯೆ. ಬದುಕುಪೂರ್ತಿ ನಿಮ್ಮ ಮಗ ಈ ಅವಸ್ಥೆಯಲ್ಲಿಯೇ ಇರುತ್ತಾನೆ. ಹಾಗಾಗಿ ಸಾಮಾಜಿಕವಾಗಿ ಬೆರೆಯಲು ಇವನಿಗೆ ಸಾಧ್ಯವಾಗದು ಎಂದು ವೈದ್ಯರು ಹೇಳಿಬಿಟ್ಟಿದ್ದರು.
ಆದರೂ ತಾಯಿ ಮಗ ಪ್ರಯತ್ನಿಸುವುದನ್ನು ಬಿಟ್ಟಿರಲಿಲ್ಲ. ಅದರ ಫಲವೇ ಈ ಹೃದಯಸ್ಪರ್ಶಿ ವಿಡಿಯೋ. ಕೆಫೆಗೆ ಹೋಗಿ ತನಗೆ ಬೇಕಾದ ತಿನಿಸನ್ನು ಕೌಂಟರಿಗೆ ಹೋಗಿ ಆರ್ಡರ್ ಮಾಡಿ ಬರುತ್ತಿದ್ದಂತೆ ಬಾಲಕನ ಮುಖದಲ್ಲಿ ಮುಗುಳ್ನಗೆ ಅರಳುತ್ತದೆ. ಓಡಿ ಬಂದು ತನ್ನ ತಾಯಿಯ ಕೈಹಿಡಿದುಕೊಳ್ಳುತ್ತಾನೆ.
‘ಯಾರೋ ಒಬ್ಬರು ಇವನಿಂದ ಇಂಥದೆಲ್ಲ ಎಂದೂ ಸಾಧ್ಯವಿಲ್ಲ ಎಂದು ಹೇಳಿದ ಆ ಗಳಿಗೆಗಳು ನನಗಿನ್ನೂ ನೆನಪಿನಲ್ಲಿವೆ’ ಎಂಬ ನೋಟ್ನೊಂದಿಗೆ ಅವನ ತಾಯಿ ತಮ್ಮ ಇನ್ಸ್ಟಾಗ್ರಾಂ ಖಾತೆ ಮೈ ಬ್ಲ್ಯೂ ಬಾಯ್ನಲ್ಲಿ ಪೋಸ್ಟ್ ಮಾಡಿದ್ದಾರೆ. ನಂತರ ಗುಡ್ನ್ಯೂಸ್ ಮೂವ್ಮೆಂಟ್ ಪುಟವು ಇದನ್ನು ಹಂಚಿಕೊಂಡಿದೆ.
ನಾವೇನೆಂದು ನಮಗೆ ಅರಿವಾಗುವುದು ಪ್ರಯತ್ನ, ಫಲ ಮತ್ತು ಅದರಿಂದ ಹೊಮ್ಮುವ ಆತ್ಮವಿಶ್ವಾಸದಿಂದಲೇ ಅಲ್ಲವೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:57 am, Thu, 15 September 22