ಮದುವೆ ಅಂದ್ಮೇಲೆ ಡ್ಯಾನ್ಸ್, ಹಾಡು, ಮೋಜು-ಮಸ್ತಿ, ತಮಾಷೆಯಂತೂ ಇದ್ದೆ ಇರುತ್ತದೆ. ಸಾಮಾನ್ಯವಾಗಿ ಮದುವೆ ಸಮಾರಂಭಗಳಲ್ಲಿ ವಧು-ವರರ ನೃತ್ಯ ಮಾಡುವ ಮೂಲಕ ಗಮನ ಸೆಳೆಯುವುದು ಸರ್ವೇ ಸಾಮಾನ್ಯ. ಈ ವಧು-ವರರ ನೃತ್ಯ ಸೇರಿದಂತೆ ಇನ್ನಿತ್ತರ ಖುಷಿಯ ಕ್ಷಣದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಕಾಣಸಿಗುತ್ತಿರುತ್ತವೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟ ದಂಪತಿಗಳಿಬ್ಬರೂ ಸ್ಟೇಜ್ ನಲ್ಲೇ ಪುಶ್ ಅಪ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಹಳೆಯ ವಿಡಿಯೋವು ಇದಾಗಿದ್ದು, ಇದೀಗ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು parulgragmakeup ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾಗಿದ್ದು, ಇಪ್ಪತ್ತೆಂಟು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿದೆ. ಈ ವಿಡಿಯೋದಲ್ಲಿ ದಂಪತಿಗಳು ಫಿಟ್ನೆಸ್ ಕೋಚ್ ಅಕ್ಷಿತಾ ಅರೋರಾ ಮಹಾಜನ್ ಮತ್ತು ಅವರ ಪತಿ ಆದಿತ್ಯ ಮಹಾಜನ್ ಎಂದು ಗುರುತಿಸಲಾಗಿದೆ. ಈ ಜೋಡಿಯ ಮದುವೆ ಸಂದರ್ಭದ ಸೆರೆ ಹಿಡಿದ ವಿಡಿಯೋ ಇದಾಗಿದ್ದು ಮತ್ತೆ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಕಂಠಪೂರ್ತಿ ಕುಡಿದು ಅಡ್ಡಾದಿಡ್ಡಿ ಕಾರು ಚಲಾಯಿಸಿ ಕರೆಂಟ್ ಕಂಬಕ್ಕೆ ಡಿಕ್ಕಿ ಹೊಡೆದ ಚಾಲಕ; ವಿಡಿಯೋ ವೈರಲ್
ಈ ವಿಡಿಯೋದಲ್ಲಿ ಸಾಂಪ್ರದಾಯಿಕ ಕೆಂಪು ಲೆಹೆಂಗಾ ಚೋಲಿ ಮತ್ತು ಭಾರೀ ಚಿನ್ನದ ಆಭರಣಗಳನ್ನು ಧರಿಸಿರುವ ಅಕ್ಷಿತಾ, ಶೆರ್ವಾನಿ ಧರಿಸಿದ್ದ ಆದಿತ್ಯನೊಂದಿಗೆ ಮದುವೆಯ ವೇದಿಕೆಯಲ್ಲಿಯೇ ಪುಷ್-ಅಪ್ ಮಾಡುವುದನ್ನು ನೋಡಬಹುದಾಗಿದ್ದು, ನೆಟ್ಟಿಗರು ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, ‘ಆರೋಗ್ಯಕರ ಮದುವೆ’ ಎಂದಿದ್ದಾರೆ. ಇನ್ನೊಬ್ಬರು, ‘ಹೊಸತನದಿಂದ ಕೂಡಿದ ಜೋಡಿಗಳು, ದೇವರು ಒಳ್ಳೇದು ಮಾಡಲಿ’ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ