ಸಂಪೂರ್ಣವಾಗಿ ವರ್ಚ್ಯುವಲ್ ಪ್ರಪಂಚ ಎನ್ನಿಸಿಕೊಂಡಿರುವ ಮೆಟಾವರ್ಸ್ (Metaverse) ಇತ್ತೀಚೆಗೆ ಬಹುವಿಧದ ಚರ್ಚೆಗೆ ಕಾರಣವಾಗಿದೆ. ಮೆಟಾವರ್ಸ್ ಎಂಬುದು ವರ್ಚ್ಯುವಲ್ ರಿಯಾಲಿಟಿಯ (virtual reality) 3ಡಿ ತಂತ್ರಜ್ಞಾನವಾಗಿದ್ದು, ಹೆಡ್ಸೆಟ್ ಬಳಸುವ ಮೂಲಕ ನೀವು ಸಂಪೂರ್ಣವಾಗಿ ಡಿಜಿಟಲ್ ಪರಿಸರಕ್ಕೆ ಪ್ರವೇಶ ಪಡೆಯಬಹುದು. ಅಂದರೆ ವರ್ಚ್ಯುವಲ್ ಆಗಿಯೇ ನಿಮ್ಮ ಉದ್ಯೋಗ ಕಚೇರಿ ಪ್ರವೇಶಿಸಬಹುದು. ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು. ಆಟ, ಮನರಂಜನೆ ಹೀಗೆ ಬಹುತೇಕ ಕ್ಷೇತ್ರಗಳನ್ನು ನಮ್ಮ ಅವತಾರ (ನಮ್ಮಂತೇ ಇರುವ ಆಕೃತಿ)ದ ಮೂಲಕ ಪ್ರವೇಶಿಬಹುದಾಗಿದೆ. ಆದರೆ ಈ ಮೆಟಾವರ್ಸ್ ಈಗಾಗಲೇ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಅದರಲ್ಲೂ ಈಗ 43 ವರ್ಷದ ಬ್ರಿಟಿಷ್ ಮಹಿಳೆ ನೀನಾ ಜೇನ್ ಪಟೇಲ್ ಎಂಬುವರು ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ನಾನು ಮೆಟಾವರ್ಸ್ ಪ್ರವೇಶಿಸಿದ ಕೆಲವೇ ಹೊತ್ತಲ್ಲಿ, ಅದರಲ್ಲಿರುವ ಮೂರ್ನಾಲ್ಕು ಪುರುಷ ಅವತಾರಗಳು (ಇನ್ನುಳಿದ ಕೆಲ ಮೆಟಾವರ್ಸ್ ಬಳಕೆದಾರರು) ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಹೇಳಿದ್ದಾರೆ. (ಅಂದರೆ ಇದು ಭೌತಿಕವಾಗಿ ಮಹಿಳೆಯ ಮೇಲೆ ನಡೆದ ಅತ್ಯಾಚಾರವಲ್ಲ, ಮೆಟಾವರ್ಸ್ ಪ್ರವೇಶಿಸಿದ ಮಹಿಳೆಯ ಮಹಿಳೆಯ ಅವತಾರದ ಮೇಲೆ ಉಳಿದ ಪುರುಷರ ಅವತಾರಗಳು ನಡೆಸಿದ ಅತ್ಯಾಚಾರ)
ನಾನು ಮೆಟಾವರ್ಸ್ಗೆ ಪ್ರವೇಶಿಸಿದೆ. ಕೆಲವೇ ಕ್ಷಣದಲ್ಲಿ ಒಂದಷ್ಟು ಪುರುಷ ಅವತಾರಗಳ ಕೈಗಳು ನನಗಾಗಿ ತಡಕಾಡಿದವರು. ನನ್ನನ್ನು ಅನುಚಿತವಾಗಿ ಸ್ಪರ್ಶಿಸಿದವು. ನಂತರ ಸಾಮೂಹಿಕ ಅತ್ಯಾಚಾರ ಮಾಡಿದವು. ಮೌಖಿಕವಾಗಿಯೂ ಅಶ್ಲೀಲ ಪದಗಳನ್ನಾಡುತ್ತಿದ್ದರು. ಅದು ವರ್ಚ್ಯುವಲ್ನಲ್ಲಿ ಆಗುತ್ತಿದ್ದರೂ ನನಗೆ ಅತ್ಯಂತ ವಾಸ್ತವ ಎನ್ನಿಸುತ್ತಿತ್ತು. ಅದು ನನ್ನ ಪಾಲಿಗೆ ದುಃಸ್ವಪ್ನವೇ ಆಗಿದೆ. ಇಷ್ಟು ದೊಡ್ಡಮಟ್ಟದ ಶಾಕ್ಗೆ ನಾನು ಹಿಂದೆಂದೂ ಒಳಗಾಗಿರಲಿಲ್ಲ ಎಂದು ನೀನಾ ಜೇನ್ ಪಟೇಲ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ. ಅಷ್ಟೇ ಅಲ್ಲ, ನನ್ನ ಅವತಾರದ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಕ್ಷಣಗಳ ಕೆಲವು ಸ್ಕ್ರೀನ್ಶಾಟ್ಗಳನ್ನೂ ತೆಗೆದಿಟ್ಟುಕೊಂಡಿದ್ದಾಗಿ ತಿಳಿಸಿದ್ದಾರೆ.
ಇತ್ತೀಚೆಗೆ ಫೇಸ್ಬುಕ್ ಹೆಸರನ್ನು ಮೆಟಾವರ್ಸ್ ಎಂದು ಬದಲಿಸಿದ್ದು ಗೊತ್ತೇ ಇದೆ. ಫೇಸ್ಬುಕ್ ಸಂಸ್ಥಾಪಕ, ಸಿಇಒ ಮಾರ್ಕ್ ಜುಕರ್ಬರ್ಗ್ ಮತ್ತು ಕಂಪನಿಯೇ ಮೆಟಾವರ್ಸ್ನ್ನು ಕೂಡ ರಚಿಸಿದೆ. ಫೇಸ್ಬುಕ್ ಹೆಸರನ್ನು ಮೆಟಾವರ್ಸ್ ಎಂದು ಬದಲಿಸಿದ ನಂತರವೇ ಇದರ ಬಗ್ಗೆ ಕುತೂಹಲ ಜಾಸ್ತಿಯಾಗಿದ್ದು. ಫೇಸ್ಬುಕ್ ಸಂಪೂರ್ಣವಾಗಿ ಮೆಟಾವರ್ಸ್ ಆಗಿ ಬದಲಾಗಲಿದೆ ಎಂಬ ಚರ್ಚೆಯೂ ನಡೆಯುತ್ತಿದೆ. ಇದೀಗ ತನ್ನ ಮೇಲೆ ಮೆಟಾವರ್ಸ್ನಲ್ಲಿ ಲೈಂಗಿಕ ದೌರ್ಜನ್ಯವಾಗಿದೆ ಎಂದು ಹೇಳಿರುವ ಮಹಿಳೆ, ವರ್ಚ್ಯುವಲ್ ಪ್ರಪಂಚದಲ್ಲೂ ಮಹಿಳೆಯರ ಮೇಲೆ ಲೈಂಗಿಕ ಶೋಷಣೆ ನಡೆಯುತ್ತಿರುವುದು, ಅಲ್ಲಿಯೂ ಕೂಡ ಸ್ತ್ರೀಯರು ದೌರ್ಜನ್ಯ ಎದುರಿಸಬೇಕಾಗಿರುವುದು ದುರದೃಷ್ಟ ಎಂದಿದ್ದಾರೆ.
ನೀನಾ ಆರೋಪಕ್ಕೆ ಮೆಟಾವರ್ಸ್ ವಕ್ತಾರರೊಬ್ಬರು ಪ್ರತಿಕ್ರಿಯೆ ನೀಡಿದ್ದು, ನೀನಾ ಅವರಿಗೆ ಆದ ಅನುಭವ ಕೇಳಿ ನಿಜಕ್ಕೂ ಬೇಸರವಾಗಿದೆ. ಮೆಟಾವರ್ಸ್ ವರ್ಚ್ಯುವಲ್ ಪ್ರಪಂಚಕ್ಕೆ ಕಾಲಿಡುವವರು ಎಲ್ಲರೂ ಸಕಾರಾತ್ಮಕವಾಗಿ, ಒಳ್ಳೆಯ ಅನುಭವ ಪಡೆಯಬೇಕು ಎಂಬುದು ನಮ್ಮ ಆಶಯ. ಹಾಗೇ, ಇಂಥ ಸಂದರ್ಭದಲ್ಲಿ ರಕ್ಷಣೆ ಪಡೆಯುವ ಟೂಲ್ಗಳನ್ನು ಆಯ್ದುಕೊಳ್ಳಬೇಕು. ನೀನಾ ಕೇಸ್ ಬಗ್ಗೆ ನಾವು ತನಿಖೆ ನಡೆಸಿ, ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Kangana Ranaut: ಇನ್ನು ‘ಲಾಕ್ ಅಪ್’ನಲ್ಲಿರುವ 16 ಖೈದಿಗಳ ಉಸ್ತುವಾರಿ ಕಂಗನಾ ಹೆಗಲಿಗೆ; ಏನಿದು ಹೊಸ ಸಮಾಚಾರ?
Published On - 1:19 pm, Fri, 4 February 22