Viral Video : ಅಣ್ಣ ಎಂದರೆ ಅಣ್ಣ! ಚಿಕ್ಕವರು ಏನಾದರೂ ಸಹಾಯ ಕೇಳಿದಾಗ ನೋಡಬೇಕು ಈ ಅಣ್ಣಂದಿರ ಗತ್ತು ಮತ್ತು ಬೀಗುವಿಕೆ. ಇದೇ ಸಮಯವೆಂದು ಚಿಕ್ಕವರನ್ನು ಗೋಳಾಡಿಸಿ ಮಜಾ ತೆಗೆದುಕೊಂಡುಬಿಡುತ್ತಾರೆ. ಹಾಗಂತ ಎಲ್ಲ ಅಣ್ಣಂದಿರೂ ಹೀಗೇ ಇರುವುದಿಲ್ಲ. ಈ ವಿಡಿಯೋದಲ್ಲಿ ಇರುವಂಥ ಸೂಕ್ಷ್ಮ, ಪಾಪದ ಅಣ್ಣಂದಿರೂ ಇರುತ್ತಾರೆ. ಈ ಅಣ್ಣ ತಂಗಿ ಚೀನಾ ಮೂಲದವರು. ಅವಳಿಗೆ ಗಣಿತವನ್ನು ಹೇಳಿಕೊಡುತ್ತಿರುವಾಗ ಮಾಡಿದ ವಿಡಿಯೋ ಇದಾಗಿದೆ. ಸುಮಾರು 10 ಮಿಲಿಯನ್ಗಿಂತಲೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ. ಅಂಥದ್ದೇನಿದೆ ಇದರಲ್ಲಿ?
ಕೆಲವರಿಗೆ ಗಣಿತ ಇಷ್ಟ, ಕೆಲವರಿಗೆ ಕಷ್ಟ! ಏನು ಮಾಡುವುದು. ಈ ಚಿತ್ರದಲ್ಲಿ ಒಟ್ಟು ಮೂರು ಲಂಬಕೋನಗಳಿವೆ. ಆದರೆ ತಂಗಿ ಎರಡು ಇವೆ ಎಂದು ವಾದಿಸಿದ್ದಾಳೆ. ಅಣ್ಣನ ಸತ್ಯ ಅಣ್ಣನಿಗೆ, ತಂಗಿಯ ಸತ್ಯ ತಂಗಿಗೆ. ಅಣ್ಣ ಎಷ್ಟೇ ಒತ್ತಾಯಿಸಿದರೂ ತಂಗಿ ಮಾತ್ರ ಒಪ್ಪುತ್ತಿಲ್ಲ. ಮೂರೂ ಲಂಬಕೋನಗಳನ್ನು ಗುರುತಿಸಿದ್ದೇನೆ. ಆದರೂ ಈಕೆ ಒಪ್ಪುತ್ತಿಲ್ಲ ಎಂದು ಕಂಗಾಲಾದ ಅಣ್ಣ ಕಣ್ಣೀರು ಹಾಕಿದ್ದಾನೆ. ಹೀಗಾದರೆ ನೀ ಶಿಕ್ಷಕನಾಗಲು ಸಾಧ್ಯವಿಲ್ಲ ಎಂದು ಕಾಲೆಳೆಯುತ್ತಿದ್ದಾಳೆ ಅಮ್ಮ. ಸತ್ಯ ಕಣ್ಣೆದುರಿಗಿದ್ದರೂ ಎದುರಿನವರೂ ಅದನ್ನು ಒಪ್ಪದಾದಾಗ ಇಂಥ ಪಾಪದ ಅಣ್ಣಂದಿರು ಇನ್ನೇನು ಮಾಡುತ್ತಾರೆ!?
ಅಯ್ಯೋ ಈ ಗಣಿತವೇ ನನ್ನ ಜೀವವನ್ನೇ ತೆಗೆಯುತ್ತದೆ ನೀ ಅಳಬೇಡ ಬಿಡು ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ನಾನಂತೂ ಈ ಗಣಿತವನ್ನು ದ್ವೇಷಿಸುತ್ತೇನೆ ಎಂದಿದ್ದಾರೆ ಇನ್ನೂ ಒಬ್ಬರು. ಹೌದೋ ನೀ ಹೇಳಿದ್ದು ಸರಿ ಇದೆ ನಾನು ಒಪ್ಪುತ್ತೇನೆ ಇದನ್ನು ಎಂದು ಮತ್ತೊಬ್ಬರು ಅಣ್ಣನನ್ನು ಬೆಂಬಲಿಸಿದ್ದಾರೆ. ನೀ ಅಳಬೇಡವೋ ಸರಿಯಾದ ಉತ್ತರ ಹೇಳಿದರೂ ಯಾಕೋ ಅಳುವುದು? ಎಂದು ಸಮಾಧಾನಿಸಿದ್ದಾರೆ ಇನ್ನೊಬ್ಬರು.
ಅಳುವು ನಗುವೂ ಒಟ್ಟಿಗೇ ತರಿಸುವ ಈ ವಿಡಿಯೋ ನೋಡಿ ನಿಮಗೀಗ ನಿಮ್ಮ ಗಣಿತ ಪರೀಕ್ಷೆ ಕಣ್ಮುಂದೆ ಬರುತ್ತಿದೆಯಾ? ಹೋಗಲಿ ಅಣ್ಣನಿಗೆ ಬೆಂಬಲಿಸಿಬಿಡಿ.
ಮತ್ತಷ್ಟು ವೈರಲ್ ವಿಡಿಯೋಗಳನ್ನು ನೋಡಲು ಕ್ಲಿಕ್ ಮಾಡಿ
Published On - 6:19 pm, Thu, 27 October 22