ಬೀದಿ ನಾಯಿಗಳ ಹಾವಳಿ ಎಲ್ಲೆಲ್ಲೂ ಜಾಸ್ತಿಯಾಗಿದೆ. ಹೌದು ಈಗಂತೂ ದಿನ ಬೆಳಗಾದರೆ ಸಾಕು ಟಿವಿಯಲ್ಲಿ, ದಿನಪತ್ರಿಕೆಗಳಲ್ಲಿ ಬೀದಿ ನಾಯಿಗಳ ಹಾವಳಿಯ ಬಗ್ಗೆ ಒಂದಾದರೂ ಪ್ರಕರಣ ಇದ್ದೇ ಇರುತ್ತವೆ. ಅದರಲ್ಲೂ ಬೀದಿ ನಾಯಿಗಳು ಮಕ್ಕಳ ಮೇಲೆ ದಾಳಿ ನಡೆಸುವಂತಹ, ರಸ್ತೆಯಲ್ಲಿ ನಡೆದುಕೊಂಡು ಹೋಗುವವರ ಮೇಲೆ, ಬೈಕ್ ಸವಾರರನ್ನು ಅಟ್ಟಾಡಿಸಿಕೊಂಡು ಹೋಗಿ ದಾಳಿ ನಡೆಸುವಂತಹ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಿವೆ. ಒಮ್ಮೊಮ್ಮೆ ಈ ಬೀಡಾಡಿ ನಾಯಿಗಳ ದೆಸೆಯಿಂದ ಜನರು ವಾಹನಗಳಿಂದ ಕೆಳಕ್ಕೆ ಬಿದ್ದು ಕೈ ಕಾಲು ಮುರಿದುಕೊಂಡಂತಹ ಉದಾಹರಣೆಗಳಿವೆ. ಇಂತಹ ಘಟನೆಗಳನ್ನು ಕಂಡು ಕೆಲವು ಜನರು ಬೀದಿಯಲ್ಲಿ ನೆಮ್ಮದಿಯಿಂದ ಓಡಾಡಲು ಕೂಡಾ ಭಯ ಪಡುತ್ತಿದ್ದಾರೆ. ಇದೀಗ ಅಂತಹದ್ದೇ ಭಯಾನಕ ಘಟನೆಯೊಂದು ನಡೆದಿದ್ದು, ಬೀದಿ ನಾಯಿಯೊಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕನ ಮೇಲೆ ದಾಳಿ ನಡೆಸಿದೆ. ಆ ತಕ್ಷಣ ಅಲ್ಲಿಗೆ ಬಂದಂತಹ ಮಹಿಳೆಯೊಬ್ಬರು ಆತನನ್ನು ದಾಳಿಯಿಂದ ರಕ್ಷಿಸಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರವ ವಿಡಿಯೋದಲ್ಲಿ ದಿಟ್ಟ ಮಹಿಳೆಯೊಬ್ಬರು ಯುವಕನೊಬ್ಬನನ್ನು ಬೀದಿ ನಾಯಿಯ ದಾಳಿಯಿಂದ ರಕ್ಷಿಸುತ್ತಿರುವ ದೃಶ್ಯವನ್ನು ಕಾಣಬಹುದು. ಈ ವಿಡಿಯೋವನ್ನು @Arhantt_pvt ಎಂಬ ಹೆಸರಿನ X ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
@gharkekalesh pic.twitter.com/j3fBku3l02
— Arhant Shelby (@Arhantt_pvt) February 26, 2024
ವೈರಲ್ ವಿಡಿಯೋದಲ್ಲಿ ಯಾವುದೋ ನಗರದ ಬೀದಿಯಲ್ಲಿ ಎರಡು ಬೀಡಾಡಿ ಶ್ವಾನಗಳು ತಮ್ಮ ಪಾಡಿಗೆ ನಿಂತಿರುವುದನ್ನು ಕಾಣಬಹುದು. ಆ ಸಂದರ್ಭದಲ್ಲಿ ಅಲ್ಲೇ ಒಂದು ಅಂಗಡಿಯಿಂದ ಯುವಕನೊಬ್ಬ ಹೊರ ಬರುತ್ತಾನೆ. ಆತ ರಸ್ತೆಗೆ ಕಾಲಿಡುತ್ತಿದ್ದಂತೆ ಅಲ್ಲಿ ನಿಂತಿದ್ದ ಕಪ್ಪು ಮತ್ತು ಬಿಳಿ ಮಿಶ್ರಿತ ಬಣ್ಣದ ಶ್ವಾನವೊಂದು ಆತನ ಮೇಲೆ ಏಕಾಏಕಿ ದಾಳಿ ನಡೆಸುತ್ತದೆ. ಆತನ ಕಾಲನ್ನು ಕಚ್ಚಿ, ಪ್ಯಾಂಟ್ ಅನ್ನು ಹಿಡಿದು ಎಳೆಯುತ್ತದೆ. ಆತ ಎಷ್ಟೇ ಪ್ರಯತ್ನಿಸಿದರೂ ಶ್ವಾನದ ದಾಳಿಯಿಂದ ಬಿಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆ ತಕ್ಷಣ ಆ ಯುವಕ ರಕ್ಷಣೆಗೆ ಧಾವಿಸಿದ ದಿಟ್ಟ ಮಹಿಳೆಯೊಬ್ಬರು ಶ್ವಾನವನ್ನು ಬಿಗಿಯಾಗಿ ಹಿಡಿಯುವ ಮೂಲಕ ಆತನಿಗೆ ಯಾವುದೇ ಹೆಚ್ಚಿನ ಅಪಾಯವಾಗದಂತೆ ನೋಡಿಕೊಳ್ಳುತ್ತಾರೆ. ನಂತರ ಅಲ್ಲಿ ಧಾವಿಸಿದ ಜನರು ಬೀದಿ ನಾಯಿಯನ್ನು ಒದ್ದೋಡಿಸುವಂತಹ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ನಮ್ಮ ಜೀವನ ಕಂಪ್ಲೀಟ್ ಮತ್ತು ಫಿನೀಶ್ ಆಗುವುದು ಪತ್ನಿಯಿಂದ, ಅದು ಹೇಗೆ? ಇಲ್ಲಿದೆ ನೋಡಿ
ಫೆಬ್ರವರಿ 26 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಮೂರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಎಲ್ಲೆಲ್ಲೂ ಈ ಬೀದಿ ನಾಯಿಗಳ ಕಾಟ ಹೆಚ್ಚುತ್ತಿದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼರಸ್ತೆಗಳಲ್ಲಿ ಓಡಾಡುವಾಗ ಬೀದಿನಾಯಿಗಳಿಗೆ ಭಯ ಪಟ್ಟು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆʼ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ದಿಟ್ಟ ಮಹಿಳೆಯ ಧೈರ್ಯಕ್ಕೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ