ದಕ್ಷಿಣ ಭಾರತದವರಿಗೆ ದೋಸೆಯೆಂದರೆ ವಿಪರೀತ ಪ್ರೀತಿ. ಅದರಲ್ಲೂ ಕರ್ನಾಟಕದ ಮಲೆನಾಡು, ಕರಾವಳಿ ಭಾಗದವರಿಗೆ ಪ್ರತಿ ದಿನವೂ ದೋಸೆ (Dosa) ಮಾಡಿಕೊಟ್ಟರೂ ಬೋರ್ ಎನಿಸುವುದೇ ಇಲ್ಲ. ಉದ್ದಿನ ದೋಸೆ, ನೀರು ದೋಸೆ, ಮಸಾಲೆ ದೋಸೆ, ತೆಳ್ಳೇವು, ಸೌತೆ ಕಾಯಿ ದೋಸೆ, ಖಾರ ದೋಸೆ, ಕಾಯಿ ದೋಸೆ, ಈರುಳ್ಳಿ ದೋಸೆ ಹೀಗೆ ನಾನಾ ವಿಧದ ದೋಸೆಗಳನ್ನು ಮಾಡಿಕೊಂಡು ದಿನವೂ ಸವಿಯುವವರಿದ್ದಾರೆ. ದೋಸೆ ಪ್ರಿಯರಿಗೆ ದೆಹಲಿಯ ರೆಸ್ಟೋರೆಂಟ್ ಒಂದು ಚಾಲೆಂಜ್ ನೀಡಿದ್ದು, ಈ ಮಸಾಲ ದೋಸೆಯನ್ನು 40 ನಿಮಿಷದೊಳಗೆ ತಿಂದು ಮುಗಿಸಿದವರು ಬರೋಬ್ಬರಿ 71,000 ರೂ. ಬಹುಮಾನ ಗೆಲ್ಲುವ ಅವಕಾಶ ನೀಡಲಾಗಿದೆ. ಒಂದು ದೋಸೆ ತಿನ್ನೋಕೆ 40 ನಿಮಿಷ ಬೇಕಾ? ಒಂದು ದೋಸೆಯೆಲ್ಲ ನಮಗೆ ಲೆಕ್ಕಕ್ಕೇ ಇಲ್ಲ ಎಂದು ನಿರ್ಲಕ್ಷ್ಯ ಮಾಡಬೇಡಿ. ಏಕೆಂದರೆ ಈ ದೋಸೆಯ ಉದ್ದ 10 ಅಡಿ!
ದೆಹಲಿಯ ಉತ್ತಮ್ ನಗರದಲ್ಲಿರುವ ಸ್ವಾಮಿ ಶಕ್ತಿ ಸಾಗರ್ ಎಂಬ ಹೆಸರಿನ ರೆಸ್ಟೋರೆಂಟ್ ತನ್ನ ಎಲ್ಲಾ ಗ್ರಾಹಕರಿಗೆ, ವಿಶೇಷವಾಗಿ ಆಹಾರಪ್ರೇಮಿಗಳಿಗೆ ಸವಾಲೊಂದನ್ನು ನೀಡಿದೆ. ಈ ರೆಸ್ಟೋರೆಂಟ್ನಲ್ಲಿ ಸಿದ್ಧಪಡಿಸಲಾಗುವ 10 ಅಡಿ ಉದ್ದದ ದೋಸೆಯನ್ನು 40 ನಿಮಿಷಗಳಲ್ಲಿ ತಿಂದು ಮುಗಿಸುವವರಿಗೆ 71,000 ರೂಪಾಯಿ ಬಹುಮಾನವನ್ನು ನೀಡಲಾಗುತ್ತದೆ. ಈ ಕುರಿತು ಮಾತನಾಡಿರುವ ಸ್ವಾಮಿ ಶಕ್ತಿ ಸಾಗರ್ ರೆಸ್ಟೋರೆಂಟ್ ಮಾಲೀಕ ಶೇಖರ್ ಕುಮಾರ್, ನಮ್ಮ ರೆಸ್ಟೊರೆಂಟ್‌ನಲ್ಲಿ 10 ಅಡಿ ಉದ್ದದ ದೋಸೆ ಚಾಲೆಂಜ್ ನಡೆಯುತ್ತಿದ್ದು, 40 ನಿಮಿಷದಲ್ಲಿ ಒಬ್ಬರೇ ಈ ದೋಸೆಯನ್ನು ಮುಗಿಸಿದರೆ 71,000 ರೂಪಾಯಿಗಳ ಬಹುಮಾನದ ಚೆಕ್ ನೀಡುತ್ತೇವೆ ಎಂದಿದ್ದಾರೆ.
ಮೊದಲು ನಾವು ಚಿಕ್ಕ ದೋಸೆಗಳನ್ನು ಮಾಡುತ್ತಿದ್ದೆವು. ನಂತರ ಸ್ವಲ್ಪ ದೊಡ್ಡ ದೋಸೆ ಮಾಡಬೇಕೆಂದು ಯೋಚಿಸಿದೆವು. ನಾವು ದೊಡ್ಡ ದೋಸೆ ಮಾಡಿ, ಗ್ರಾಹಕರನ್ನು ಸೆಳೆಯಲು ಈ ಚಾಲೆಂಜ್ ನೀಡುತ್ತಿದ್ದೇವೆ. ಈಗಾಗಲೇ ಹಲವು ಜನರು ಈ ಚಾಲೆಂಜ್ ಸ್ವೀಕರಿಸಿ ಸೋತಿದ್ದಾರೆ. ಯಾರು 10 ಅಡಿ ಉದ್ದದ ದೋಸೆಯನ್ನು ಒಬ್ಬರೇ ತಿಂದು ಮುಗಿಸುತ್ತಾರೋ ಅವರು ಬಹುಮಾನವನ್ನು ಗೆಲ್ಲುತ್ತಾರೆ ಎಂದು ರೆಸ್ಟೋರೆಂಟ್ ಮಾಲೀಕರು ಹೇಳಿದ್ದಾರೆ.
ಈ 10 ಅಡಿ ಉದ್ದದ ದೋಸೆಯ ವಿಡಿಯೋ ವೈರಲ್ ಆಗಿದ್ದು, ಇಲ್ಲಿಯವರೆಗೆ 25ರಿಂದ 26 ಜನರು ಈ ಚಾಲೆಂಜ್ ಸ್ವೀಕರಿಸಿದ್ದಾರೆ. ಆದರೆ, ಈ ಸವಾಲನ್ನು ಇಲ್ಲಿಯವರೆಗೆ ಯಾರೂ ಗೆದ್ದಿಲ್ಲ. ನಾವು ಎಲ್ಲೆಡೆಯಿಂದ ಕರೆಗಳನ್ನು ಸ್ವೀಕರಿಸುತ್ತಿದ್ದೇವೆ. ಮುಖ್ಯವಾಗಿ ನಾವು ದೋಸೆಯ ಗುಣಮಟ್ಟಕ್ಕೆ ಮಹತ್ವ ನೀಡುತ್ತೇವೆ. ಇದೇ ಕಾರಣಕ್ಕೆ ನಮ್ಮ ರೆಸ್ಟೋರೆಂಟ್ನ ದೋಸೆಯನ್ನು ಮೆಚ್ಚಿ ದೂರದೂರುಗಳಿಂದ ಜನರು ಬರುತ್ತಾರೆ ಎಂದು ಮಾಲೀಕರು ತಿಳಿಸಿದ್ದಾರೆ.
ಇದನ್ನೂ ಓದಿ: Success Story: ಕೇವಲ ಎರಡೂವರೆ ರೂ.ಗೆ ಇಡ್ಲಿ, 5 ರೂ.ಗೆ ದೋಸೆ ಮಾರುವ ಬೆಂಗಳೂರಿನ ಅಮ್ಮ; ವಿಡಿಯೋ ಇಲ್ಲಿದೆ
Viral News: ಮದುವೆಯಾಗಿ 11 ವರ್ಷ ಕಾದರೂ ಮೊದಲ ರಾತ್ರಿಗೆ ಸಿಗಲೇ ಇಲ್ಲ ಮುಹೂರ್ತ; ಆಮೇಲೇನಾಯ್ತು?
Published On - 2:22 pm, Thu, 3 February 22