Trending : ‘ಚಾಕೋಲೇಟ್​ ದಾದೀಜೀ’ ಎನ್​ಜಿಒ ಸಹಾಯ ನಿರಾಕರಿಸಿದ ಮುಂಬೈನ ಹಿರಿಯ ಮಹಿಳೆ

| Updated By: ಶ್ರೀದೇವಿ ಕಳಸದ

Updated on: Sep 09, 2022 | 11:23 AM

Mumbai : ಶಾರ್ಟ್​ಕಟ್​ ರೂಟ್​, ಭ್ರಮೆ ಮತ್ತು ಅನುಕರಣೆಯ ಹಿಂದೆ ಬಿದ್ದಿರುವ ನಮ್ಮ ನಡುವಿನ ಯುವಪೀಳಿಗೆ ದಾದೀಜೀಯಂಥವರ ಸ್ವಾಭಿಮಾನದ ಬದುಕನ್ನು ಕಣ್ಣುತೆರೆದು ನೋಡಬೇಕಿದೆ. 75,000 ನೆಟ್ಟಿಗರು ಈ ಪೋಸ್ಟ್​ ಮೆಚ್ಚಿದ್ದಾರೆ. 

Trending : ‘ಚಾಕೋಲೇಟ್​ ದಾದೀಜೀ’ ಎನ್​ಜಿಒ ಸಹಾಯ ನಿರಾಕರಿಸಿದ ಮುಂಬೈನ ಹಿರಿಯ ಮಹಿಳೆ
ದಾದೀಜಿಯ ಎಲ್ಲಾ ಚಾಕೋಲೇಟನ್ನು ಖರೀದಿಸಿದ ಅಹ್ಲುವಾಲಿಯಾ
Follow us on

Trending : ಮುಂಬೈ ಅದೊಂದು ಮಾಂತ್ರಿಕ ಲೋಕ. ಶ್ರಮಜೀವಿಗಳ ಆಪ್ತ ಜಗತ್ತು. ಅದರಲ್ಲೂ ಲೋಕಲ್​ ರೈಲಿನ ಒಳಹೊಕ್ಕಷ್ಟೂ ಅಚ್ಚರಿಗಳೇ. ದುಡಿಯುವ ಮಹಿಳೆಯರ ಸ್ವಾಭಿಮಾನದ ಮುಖಗಳಿಗಂತೂ ಲೆಕ್ಕವೇ ಇಲ್ಲ.  ಮನಸ್ಸಿದ್ದರೇ ಯಾವ ಕೆಲಸವನ್ನೂ ಮಾಡಿ ಬದುಕಬಲ್ಲೆವು ಎನ್ನುವ ಛಲಹೊತ್ತ ಮಹಿಳೆಯರು ಯಾರನ್ನೂ ಸೆಳೆಯದೆ ಇರಲಾರರು. ಇತ್ತೀಚೆಗೆ ಚಾಕೋಲೇಟ್ ಮಾರುವ ಹಿರಿಯ ಮಹಿಳೆಯೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದನ್ನು ನೀವು ಗಮನಿಸಿರಬಹುದು. ಈ ವಿಡಿಯೋ ನೋಡಿದ ಸ್ವಯಂ ಸೇವಾ ಸಂಸ್ಥೆ  ಈ ಮಹಿಳೆಗೆ ಸಹಾಯ ಮಾಡಬೇಕೆಂದು ಹುಡುಕಾಡಿ ಕೊನೆಗೂ ಭೇಟಿ ಮಾಡಿದೆ. ಆದರೆ ಸ್ವಾಭಿಮಾನಿಯಾದ ಈಕೆ ವಿನಮ್ರವಾಗಿ ಸಹಾಯವನ್ನು ನಿರಾಕರಿಸಿದ್ದಾರೆ. ಈ ಅಪ್​ಡೇಟ್​ವುಳ್ಳ ಪೋಸ್ಟ್ ಇದೀಗ​ ವೈರಲ್ ಆಗುತ್ತಿದ್ದು ನೆಟ್ಟಿಗರು ಈಕೆಯ ನಿರ್ಧಾರವನ್ನು ಗೌರವಿಸಿ ಪ್ರಶಂಸಿಸುತ್ತಿದ್ದಾರೆ.

ಸ್ವಾತಿ ಎನ್ನುವವರು ಟ್ವಿಟರ್​ನಲ್ಲಿ ಈ ಹಿರಿಯ ಮಹಿಳೆ ಚಾಕೋಲೇಟ್​ ಮಾರುವ ವಿಡಿಯೋ ಅನ್ನು ಮೊದಲಿಗೆ ಹಂಚಿಕೊಂಡರು. ತದನಂತರ ಹೇಮಕುಂಟ್​ ಫೌಂಡೇಶನ್​ನ ಹರ್​​ತೀರಥ್​ ಸಿಂಗ್​ ಅಹ್ಲುವಾಲಿಯಾ ಅವರ ಕಣ್ಣಿಗೆ ಈ ಪೋಸ್ಟ್​ ಬೀಳುತ್ತಿದ್ದಂತೆ ಈ ಹಿರಿಯ ಮಹಿಳೆಯನ್ನು ಹುಡುಕಿ, ಅವರ ಬದುಕನ್ನು ಸುಗಮಗೊಳಿಸಬೇಕೆಂದು ಇಚ್ಛಿಸಿ ಸಹಾಯ ಮಾಡಲು ನಿರ್ಧರಿಸಿ ಈ ವಿಷಯವನ್ನು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದರು. ಅನೇಕರು ಇದನ್ನು ರೀಟ್ವೀಟ್ ಮಾಡಿದರು.

ಈ ರೀಟ್ವೀಟ್​ನ ಹಾದಿಯಲ್ಲಿಯೇ ಈ ಹಿರಿಯ ಮಹಿಳೆಯನ್ನು ನೆಟ್ಟಿಗರು ‘ದಾದೀಜಿ’ ಎಂದು ಕರೆಯಲಾರಂಭಿಸಿದರು. ಕೊನೆಗೂ ಅಹ್ಲುವಾಲಿಯಾ ಅವರು ಈ ದಾದೀಜಿಯನ್ನು ಪತ್ತೆ ಹಚ್ಚಿಯೇ ಬಿಟ್ಟರು. ‘ನಿಮ್ಮ ಸಹಾಯದೊಂದಿಗೆ ದಾದೀಜಿಯನ್ನು 48 ಗಂಟೆಗಳೊಳಗೆ ಹುಡುಕಲು ಸಾಧ್ಯವಾಯಿತು. ಮುಂಬೈನ್​ 12 ಸ್ಥಳೀಯ ರೈಲುಗಳಲ್ಲಿ ನಿರಂತರವಾಗಿ ನಮ್ಮ ತಂಡ ಇವರನ್ನು ಹುಡುಕುವ ಪ್ರಯತ್ನ ಮಾಡಿತು. ಕೊನೆಗೂ ಸಿಕ್ಕರು, ಆದರೆ ದಾದೀಜಿ ತಮಗೆ ಯಾವುದೇ ಹಣಕಾಸಿನ ನೆರವು ಬೇಡವೆಂದು ನಿರಾಕರಿಸಿದರು. ಇದು ನಿಜಕ್ಕೂ ದೊಡ್ಡ ಅಚ್ಚರಿ! ಆಗ ಅವರ ಬಳಿ ಇದ್ದ ಎಲ್ಲ ಚಾಕೋಲೇಟುಗಳನ್ನು ನಾವು ಖರೀದಿಸಿದೆವು’ ಎಂದು ಮತ್ತೊಂದು ಪೋಸ್ಟ್ ಮಾಡಿದರು ಅಹ್ಲುವಾಲಿಯಾ.

ಈ ಪೋಸ್ಟ್​ 75,000 ಕ್ಕೂ ಹೆಚ್ಚು ಲೈಕ್ಸ್​ ಮತ್ತು ನೂರಾರು ಕಮೆಂಟ್​ಗಳ ಸುರಿಮಳೆ ಪಡೆದಿದೆ.

ನಮ್ಮ ನಡುವಿನ ಅನೇಕರು ಪರಿಶ್ರಮದ ಬದುಕನ್ನು ಪ್ರೀತಿಸುತ್ತಾರೆ. ಅದು ಅವರಿಗೆ ಯಾವುದೋ ರೀತಿಯಲ್ಲಿ ಸಮಾಧಾನ, ಆತ್ಮವಿಶ್ವಾಸ, ಆತ್ಮಗೌರವವನ್ನು ತಂದುಕೊಡುತ್ತಿರುತ್ತದೆ. ಶಾರ್ಟ್​ಕಟ್​ ರೂಟ್​, ಭ್ರಮೆ ಮತ್ತು ಅನುಕರಣೆಯ ಹಿಂದೆ ಬಿದ್ದಿರುವ ನಮ್ಮ ನಡುವಿನ ಯುವಪೀಳಿಗೆ ದಾದೀಜಿಯಂಥವರ ಸ್ವಾಭಿಮಾನದ ಬದುಕನ್ನು ಕಣ್ಣುತೆರೆದು ನೋಡಬೇಕಿದೆ.

ಮತ್ತಷ್ಟು ಟ್ರೆಂಡಿಂಗ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 10:40 am, Fri, 9 September 22