ಹಸಿವನ್ನು ತಡೆಯಲಾರದ ದಢೂತಿ ಆನೆಯೊಂದು ಅಡುಗೆ ಮನೆಗೆ ನುಗ್ಗಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಥೈಲೆಂಡ್ನ ಮನೆಯೊಂದರಲ್ಲಿ ನಡೆದಿದೆ. ಬೆಳಗಿನ ಜಾವ ಸರಿಸುಮಾರು 2ಗಂಟೆಯ ಸಮಯದಲ್ಲಿ ಆನೆ ಅಡುಗೆ ಮನೆಯ ಗೋಡೆಯೊಂದನ್ನು ಒಡೆದು ಒಳ ನುಗ್ಗಿದೆ. ಗೋಡೆ ಒಡೆದ ಶಬ್ದಕ್ಕೆ ಥೈಲೆಂಡ್ ನಿವಾಸಿ ರಾಚಾದವನ್ ಮತ್ತು ಅವಳ ಪತಿಗೆ ಎಚ್ಚರವಾಗಿದೆ. ಗಾಬರಿಯಾಗೊಂಡ ಅವರು ಅಡುಗೆ ಮನೆಗೆ ಬಂದು ನೋಡಿದಾಗ ಆನೆ ಗೋಡೆ ಒಡೆದು ಒಳಗೆ ನುಗ್ಗಿ, ಎದುರಿಗಿದ್ದ ಅಕ್ಕಿ ಚೀಲವನ್ನು ಹರಿದು ಅಕ್ಕಿಯನ್ನು ತಿನ್ನಲು ಪ್ರಯತ್ನಿಸುತ್ತಿದೆ. ಬೆಳ್ಳಂ ಬೆಳಿಗ್ಗೆಯೆ ಆನೆ ಗೋಡೆ ಒಡೆದು ಒಳಗೆ ನುಗ್ಗುತ್ತಿದ್ದ ದೃಶ್ಯ ನೋಡಿ ಒಮ್ಮಲೆ ಭಯವಾಯಿತು ಎಂದು ಮನೆಯ ಮಾಲೀಕೆ ಹೇಳಿದ್ದಾರೆ.
ಗೋಡೆ ಒಡೆದು ಆನೆ ಅಡುಗೆ ಮನೆಗೆ ಪ್ರವೇಶಿಸಿದ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದು. ಈ ಆನೆ ಯಾವಾಗಲೂ ನಗರದಲ್ಲಿ ಓಡಾಡುತ್ತಿರುತ್ತದೆ. ತುಂಬಾ ಹೆಸರುವಾಸಿ ಕೂಡಾ. ಎರಡು ತಿಂಗಳ ಹಿಂದೆ ಮನೆಯ ಸುತ್ತ ಇದೇ ಆನೆ ಬಂದು ನೋಡುತ್ತಾ ನಿಂತಿತ್ತು. ಆದರೆ ಯಾವುದೇ ಹಾನಿ ಮಾಡಿರಲಿಲ್ಲ ಎಂದು ಮನೆಯ ಮಾಲೀಕೆ ರಾಚಾದವನ್ ಹೇಳಿಕೆ ನೀಡಿದ್ದಾರೆ.
ನಾವು ಸ್ಥಳೀಯ ವನ್ಯ ಜೀವಿ ಅಧಿಕಾರಿಗಳೊಂದಿಗೆ ಮಾತನಾಡಿದ್ದೇವೆ. ಅಡುಗೆ ಮನೆಯಲ್ಲಿ ಆಹಾರಗಳನ್ನು ಹೊರಗಿಡಬೇಡಿ. ಆನೆಗಳಿಗೆ ಕಾಣಿಸುವಂತಿದ್ದರೆ ಹಸಿದ ಪ್ರಾಣಿಗಳು ಆಕ್ರಮಣ ಮಾಡುತ್ತವೆ ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದು ಮನೆಯ ಮಾಲೀಕೆ ಮಾಹಿತಿ ಹಂಚಿಕೊಂಡಿದ್ದಾರೆ.
ಒಡೆದ ಗೋಡೆಗಳನ್ನು ಸರಿಪಡಿಸಲು ಸುಮಾರು 1.17 ಲಕ್ಷ ಖರ್ಚಾಗಲಿದೆ. ಒಂದು ಕ್ಷಣ ಭಯವಾದರೂ, ಮುಖವನ್ನು ಮಾತ್ರ ಮನೆಯೊಳಗಿಟ್ಟುಕೊಂಡು ಸೊಂಡಿಲಿನಿಂದ ಆಹಾರ ತಿನ್ನುತ್ತಿರುವ ದೃಶ್ಯ ತಮಾಷೆಯಾಗಿತ್ತು. ಆದರೆ, ಮುಂದಿನ ದಿನಗಳಲ್ಲಿ ಮತ್ತೆ ಆನೆ ಅಡುಗೆ ಮನೆಗೆ ಬಂದು ಬಿಡುತ್ತದೆಯೆನೋ ಎಂಬ ಭಯ ಕಾಡುತ್ತಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:
Viral Video: ಕೆಸರು ಕಂಡು ಖುಷಿಪಟ್ಟ ಆನೆ; ಮಣ್ಣಿನಲ್ಲಿ ಹೊರಳಾಡಿದ್ದೇ ಆಡಿದ್ದು! ವಿಡಿಯೋ ನೋಡಿ
Viral Video: ಮದುವೆ ಮನೆಗೆ ಆನೆ ಕರೆತಂದು ಸುಸ್ತಾದ ಮಂದಿ; ವಾಹನ, ಪೆಂಡಾಲ್ಗಳನ್ನೆಲ್ಲ ಪುಡಿಪುಡಿ ಮಾಡಿದ ಗಜ
Published On - 10:58 am, Wed, 23 June 21